ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆನೀರು: ಒಳಚರಂಡಿಗೆ ಹರಿಸಿದರೆ ಕ್ರಮ

ಮ್ಯಾನ್‌ಹೋಲ್‌, ಒಳಚರಂಡಿ ಮಾರ್ಗಗಳ ಹೂಳು ತೆರವಿಗೆ ಸೂಚನೆ
Published 23 ಏಪ್ರಿಲ್ 2024, 15:54 IST
Last Updated 23 ಏಪ್ರಿಲ್ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ನೀರನ್ನು ಒಳಚರಂಡಿಗೆ ಹರಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್‌ ಮನೋಹರ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಲಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಮಳೆ ನೀರನ್ನು ರಾಜಕಾಲುವೆಗೆ ಹರಿಸಬೇಕು. ಕೆಲವರು ಒಳಚರಂಡಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿ, ಅಲ್ಲಿಗೇ ಹರಿಸುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ, ಅಕ್ರಮವಾಗಿ ಒಳಚರಂಡಿ ಮಾರ್ಗಕ್ಕೆ ಮಳೆ ನೀರು ಹರಿಸುವ ವ್ಯವಸ್ಥೆ ಹೊಂದಿರುವವರ ಮೇಲೆ ಕ್ರಮ ಕೈಗೊಳ್ಳಿ’ ಎಂದು ಹೇಳಿದರು.

ಮಳೆ ನೀರು ಒಳಚರಂಡಿಗೆ ಸೇರ್ಪಡೆ ಆಗುತ್ತಿರುವ ಪ್ರದೇಶಗಳನ್ನು ಗುರುತಿಸಬೇಕು. ಅಂತಹ ಸೇರ್ಪಡೆಯನ್ನು ತಡೆಯಬೇಕು. ಮ್ಯಾನ್‌ಹೋಲ್‌ಗಳು ಮತ್ತು ಒಳಚರಂಡಿ ಮಾರ್ಗಗಳ ಪರಿಶೀಲನೆ ನಡೆಸಬೇಕು. ಎಲ್ಲೆಲ್ಲಿ ಹೂಳು ತೆಗೆಯುವ ಅಗತ್ಯವಿದೆಯೋ ಅಲ್ಲೆಲ್ಲ ಕೂಡಲೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.

ಮಳೆಯ ಪ್ರಮಾಣ ಹೆಚ್ಚಾದ ಸಂದರ್ಭದಲ್ಲಿ ಒತ್ತಡದಿಂದ ಕೆಲವು ಕಡೆಗಳಲ್ಲಿ ಮ್ಯಾನ್‌ಹೋಲ್‌ಗಳ ಮುಚ್ಚಳಗಳು ತೆರೆದುಕೊಳ್ಳುತ್ತವೆ. ಇದರಿಂದ ಪಾದಚಾರಿಗಳು ಹಾಗೂ ವಾಹನಗಳಿಗೆ ಅನಾನುಕೂಲವಾಗುತ್ತದೆ. ಹೀಗಾಗಿ, ಇಂತಹ ಮ್ಯಾನ್‌ಹೋಲ್‌ಗಳನ್ನು ಗುರುತಿಸಿ, ಅಲ್ಲಿ ‘ಪ್ರೆಷರ್‌ ಮ್ಯಾನ್‌ಹೋಲ್‌’ ಅಳವಡಿಸಬೇಕು ಎಂದು ಹೇಳಿದರು.

ಮುಚ್ಚಳ ತೆರೆಯಬೇಡಿ: ಮಳೆ ನೀರು ಹರಿದು ಹೋಗುವಂತೆ ಮಾಡಲು ಕೆಲವು ಕಡೆಗಳಲ್ಲಿ ಸಾರ್ವಜನಿಕರು ಮ್ಯಾನ್‌ಹೋಲ್‌ಗಳ ಮುಚ್ಚಳಗಳನ್ನು ತೆಗೆದುಬಿಡುತ್ತಾರೆ. ಇದರಿಂದ ಮಳೆ ನೀರು ಒಳಚರಂಡಿ ಕೊಳವೆಮಾರ್ಗಕ್ಕೆ ಪ್ರವೇಶಿಸಿ ಒಳಚರಂಡಿ ಮಾರ್ಗದ ಮೇಲೆ ಒತ್ತಡ ಹೆಚ್ಚುತ್ತದೆ. ಅಲ್ಲದೇ, ತೆರೆದ ಮ್ಯಾನ್‌ಹೋಲ್‌ಗಳಿಗೆ ಪಾದಚಾರಿಗಳು ಬೀಳುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಸಭೆಯಲ್ಲಿ ಪ್ರಧಾನ ಮುಖ್ಯ ಎಂಜಿನಿಯರ್ ಸುರೇಶ, ಮುಖ್ಯ ಎಂಜಿನಿಯರ್‌ಗಳಾದ ಎಲ್.ಕುಮಾರನಾಯಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್., ರಾಜೀವ್ ಕೆ.ಎನ್., ಗಂಗಾಧರ್ ಬಿ.ಸಿ., ದೇವರಾಜು ಎಂ., ಜಯಶಂಕರ್‌ ಉಪಸ್ಥಿತರಿದ್ದರು.

ಅನಧಿಕೃತ ಸಂಪರ್ಕ ಸಕ್ರಮಕ್ಕೆ

ಮೇ 7ರ ಗಡುವು ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ನೀರಿನ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲು ಮೇ 7ರವರೆಗೆ ಅವಕಾಶ ನೀಡಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ– 1964 ಕಲಂ 65 ಮತ್ತು 72 ಅನ್ವಯ ನೀರು ಹಾಗೂ ಒಳಚರಂಡಿ ಸಂಪರ್ಕಕ್ಕೆ ಜಲಮಂಡಳಿಯಿಂದ ಅನುಮತಿ ಪಡೆದುಕೊಂಡಿರಬೇಕು. ಈ ಕಾಯ್ದೆ ಉಲ್ಲಂಘನೆ ಮಾಡಿ ಅನಧಿಕೃತವಾಗಿ ಸಂಪರ್ಕ ಹೊಂದಿದ್ದರೆ ಅಂತಹವರು ಮೇ 7ರೊಳಗೆ ಜಲಮಂಡಳಿಗೆ ಅರ್ಜಿ ಸಲ್ಲಿಸಿ ಸಂಪರ್ಕವನ್ನು ಅಧಿಕೃತ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತದೆ. ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಗರದಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕದ ದ ಬಗ್ಗೆ ಜಲಮಂಡಳಿ ಅಧಿಕಾರಿಗಳು ಸಮೀಕ್ಷೆ ಕಾರ್ಯ ಆರಂಭಿಸಿದ್ದಾರೆ. ಎಲ್ಲ ಮಾದರಿಯ ದೊಡ್ಡ ಕಟ್ಟಡದವರು ನಿಯಮಾನುಸಾರ ಎಸ್‌ಟಿಪಿಗಳನ್ನು ಅಳವಡಿಸಿಕೊಂಡು ಗೃಹ ಬಳಕೆಗೆ ಹೊರತುಪಡಿಸಿ ಅದನ್ನು ಬಳಸಿಕೊಳ್ಳಬೇಕು. ಇದನ್ನು ಉಲ್ಲಂಘಿಸಿ ಒಳಚರಂಡಿ ನೀರನ್ನು ಮಂಡಳಿಯ ಒಳಚರಂಡಿ ಮಾರ್ಗಕ್ಕೆ ಮಳೆನೀರು ಕಾಲುವೆಗೆ ಹರಿಸುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT