ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ ಕೇಸ್‌ನಿಂದ ಬಚಾವಾಗಲು ಬಹುಕೋಟಿ ಆಮಿಷ ಒಡ್ಡಿದ್ದ ದರ್ಶನ್

*ರೇಣುಕಸ್ವಾಮಿ ಮರ್ಮಾಂಗಕ್ಕೆ ಒದ್ದು ಕೊಲೆ * ನಟನ ಪಾತ್ರವಿದೆ–ಆರೋಪಿ ದೀಪಕ್ ಹೇಳಿಕೆ
Published 14 ಜೂನ್ 2024, 1:34 IST
Last Updated 14 ಜೂನ್ 2024, 1:34 IST
ಅಕ್ಷರ ಗಾತ್ರ

ಬೆಂಗಳೂರು: 'ಚಿತ್ರದುರ್ಗದ ರೇಣುಕಸ್ವಾಮಿ ಅವರ ಮರ್ಮಾಂಗಕ್ಕೆ ನಟ ದರ್ಶನ್ ಅಲಿಯಾಸ್ ಡಿ ಬಾಸ್ ಹಾಗೂ ಸಹಚರರು ಎಲ್ಲರೂ ಸೇರಿಕೊಂಡು ಹಲವು ಬಾರಿ ಒದ್ದು ಹತ್ಯೆ ಮಾಡಿದ್ದಾರೆ. ಕೊಲೆಯ ನಂತರ ಪ್ರಕರಣದಿಂದ ಬಚಾವಾಗಲು ದರ್ಶನ್, ಕೆಲ ಪೊಲೀಸರು, ಕೆಲ ವೈದ್ಯರು ಹಾಗೂ ಇತರರಿಗೆ ಕೋಟಿ ಕೋಟಿ ಆಮಿಷವೊಡ್ಡಿ ಡೀಲ್ ನಡೆಸಲು ಯತ್ನಿಸಿದ್ದರು’ ಎಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ.

ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆರೋಪಿಗಳನ್ನು ಕಸ್ಟಡಿಗೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಆರೋಪಿಗಳು, ನಾನಾ ರೀತಿಯಲ್ಲಿ ಹೇಳಿಕೆ ನೀಡಿದ್ದು ಅವುಗಳ ಪರಿಶೀಲನೆ ನಡೆಯುತ್ತಿದೆ.

‘ದರ್ಶನ ಹಾಗೂ ಪವಿತ್ರಾ ಗೌಡ ನಡುವೆ ಹಲವು ವರ್ಷಗಳಿಂದ ಸಲುಗೆ ಇದೆ. ಪವಿತ್ರಾ ಗೌಡಗೆ ರೇಣುಕಸ್ವಾಮಿ ಖಾಸಗಿ ಅಂಗಾಂಗದ ಫೋಟೊ ಸಮೇತ ಅಶ್ಲೀಲ ಸಂದೇಶ ಕಳುಹಿಸಿದ್ದ ಸಂಗತಿ, ಡಿ–ಗ್ಯಾಂಗ್ ಸದಸ್ಯನ ಮೂಲಕ ದರ್ಶನ್‌ಗೆ ಗೊತ್ತಾಗಿತ್ತು. ಇದೇ ಸಿಟ್ಟಿನಲ್ಲಿ ದರ್ಶನ್, ಗ್ಯಾಂಗ್ ಸದಸ್ಯರ ಜೊತೆ ಸೇರಿ ಸಂಚು ರೂಪಿಸಿದ್ದರು. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಸ್ವಾಮಿ ಅವರನ್ನು ನೋಡಿದ್ದ ದರ್ಶನ್, ಬೆಲ್ಟ್‌ನಿಂದ ಥಳಿಸಿದ್ದರು. ನಂತರ, ಮರ್ಮಾಂಗಕ್ಕೆ ಮೂರು ಬಾರಿ ಒದ್ದಿದ್ದರು. ನಂತರ, ಗ್ಯಾಂಗ್‌ನ ಇತರರು ಸಹ ಮರ್ಮಾಂಗಕ್ಕೆ ಒದ್ದಿದ್ದರು. ಈ ಬಗ್ಗೆ ಆರೋಪಿ ದೀಪಕ್‌ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹಲವರಿಗೆ ಕರೆ, ಕೋಟಿ ಕೋಟಿ ಆಮಿಷ: ‘ಮರ್ಮಾಂಗಕ್ಕೆ ಒದ್ದ ನಂತರ ಸ್ಥಳದಲ್ಲಿಯೇ ನರಳಾಡಿ ರೇಣುಕಸ್ವಾಮಿ ಮೃತಪಟ್ಟಿದ್ದರು. ಸ್ಥಳದಿಂದ ಪರಾರಿಯಾಗಿದ್ದ ದರ್ಶನ್, ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಗೆ ತಲುಪಿದ್ದರು. ಕೊಲೆ ವಿಷಯದಲ್ಲಿ ತಮ್ಮ ಹೆಸರು ಬಾರದಂತೆ ಮಾಡಲು, ಹಲವರಿಗೆ ಕರೆ ಮಾಡಿದ್ದರು. ಪ್ರಕರಣದಿಂದ ಪಾರು ಮಾಡಿದರೆ ಕೋಟಿ ನೀಡುವುದಾಗಿ ಆಮಿಷವೊಡ್ಡಿದ್ದರೆಂಬುದು ಸದ್ಯದ ಪುರಾವೆಗಳ ಮೂಲಕ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪರಿಚಯಸ್ಥ ಕೆಲ ಪೊಲೀಸರು, ಕೆಲ ರಾಜಕಾರಣಿಗಳು, ಕೆಲ ವೈದ್ಯರು ಹಾಗೂ ಇತರರಿಗೆ ದರ್ಶನ್ ಕರೆ ಮಾಡಿದ್ದರು. ಆದರೆ, ಅವರಲ್ಲಿ ಬಹುತೇಕರು ದರ್ಶನ್‌ಗೆ ಸಹಾಯ ಮಾಡಲು ನಿರಾಕರಿಸಿದ್ದರು. ಕೆಲವರಷ್ಟೇ ಮೃತದೇಹ ಸಾಗಿಸುವ ಬಗ್ಗೆ ಸಲಹೆ ನೀಡಿದ್ದರೆಂಬುದು ತಿಳಿದುಬಂದಿದೆ. ಅವರ ಬಗ್ಗೆಯೂ ಮಾಹಿತಿ ಕಲೆಹಾಕಲಾಗಿದೆ’ ಎಂದು ಮೂಲಗಳು ಹೇಳಿವೆ.

ಪವಿತ್ರಾ ಗೌಡ ಮೇಲೆ ಹಲ್ಲೆ: ‘ಚಿತ್ರದುರ್ಗದ ರೇಣುಕಸ್ವಾಮಿ ಅಕ್ಕನಿಗೆ (ಪವಿತ್ರಾ ಗೌಡ) ಅಶ್ಲೀಲ ಫೋಟೊ ಕಳುಹಿಸಿದ್ದಾನೆ. ಇದನ್ನು ನೋಡಿಕೊಂಡು ನೀವು ಸುಮ್ಮನಿದ್ದಿರಾ?’ ಎಂದು ಸಹಚರನೊಬ್ಬ ದರ್ಶನ್‌ಗೆ ಹೇಳಿದ್ದ. ಇದೇ ಮಾತಿನಿಂದಾಗಿ ದರ್ಶನ್, ರೇಣುಕಸ್ವಾಮಿಯನ್ನು ಎಳೆದು ತರಲು ಹೇಳಿದ್ದರು. ಸಹಚರರಿಗೆ ಸ್ಕಾರ್ಪಿಯೊ ಹಾಗೂ ಕಾರು ಸಹ ಕೊಟ್ಟು ಕಳುಹಿಸಿದ್ದರು. ಕೈಗೆ ಹಣವನ್ನೂ ನೀಡಿದ್ದರೆಂಬುದು ತನಿಖೆಯಲ್ಲಿ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಶೆಡ್‌ನಲ್ಲಿ ಪವಿತ್ರಾಗೌಡ ಎದುರೇ ರೇಣುಕಸ್ವಾಮಿಗೆ ದರ್ಶನ್ ಹೊಡೆದಿದ್ದರು. ಬಳಿಕ, ಪವಿತ್ರಾ ಗೌಡ ಮೇಲೂ ದರ್ಶನ್ ಹಲ್ಲೆ ಮಾಡಿದ್ದರು. ಇದರಿಂದ ಗಾಯಗೊಂಡಿದ್ದ ಪವಿತ್ರಾ ಗೌಡ, ರಾತ್ರಿಯೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆ ವರದಿ ಶೀಘ್ರ: ‘ರೇಣುಕಸ್ವಾಮಿ ಅವರ ದೇಹದ 16 ಕಡೆಗಳಲ್ಲಿ ಗಾಯಗಳಾಗಿವೆ. ಮರ್ಮಾಂಗಕ್ಕೆ ಹೆಚ್ಚು ಪೆಟ್ಟು ಬಿದ್ದಿದೆ. ಮರ್ಮಾಂಗದ ಬಳಿ ರಕ್ತ ಹೆಪ್ಪುಗಟ್ಟಿದ್ದರಿಂದಲೇ ಸಾವು ಸಂಭವಿಸಿದೆ. ಇದರಿಂದಾಗಿ ರೇಣುಕಸ್ವಾಮಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಸದ್ಯದಲ್ಲೇ ಮರಣೋತ್ತರ ಪರೀಕ್ಷೆ ವರದಿ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT