ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿ ನಿರ್ವಹಣೆಗೆ ‘ಎಐ’ ತಂತ್ರಜ್ಞಾನ

ಜಲಮಂಡಳಿ ವತಿಯಿಂದ ಚಿನ್ನಪ್ಪ ಗಾರ್ಡನ್‌ನಲ್ಲಿ ಪ್ರಾಯೋಗಿಕವಾಗಿ ಚಾಲನೆ
Published 25 ಮಾರ್ಚ್ 2024, 23:38 IST
Last Updated 25 ಮಾರ್ಚ್ 2024, 23:38 IST
ಅಕ್ಷರ ಗಾತ್ರ

ಬೆಂಗಳೂರು: ಕೊಳವೆ ಬಾವಿಗಳು ಬತ್ತಿ ಹೋಗುವುದನ್ನು ತಡೆಯಲು ಜಲಮಂಡಳಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್ ಮನೋಹರ್ ಹೇಳಿದರು.

ಚಿನ್ನಪ್ಪ ಗಾರ್ಡನ್‌ನಲ್ಲಿ ಎಐ ಮತ್ತು ಐಒಟಿ ತಂತ್ರಜ್ಞಾನ ಅಳವಡಿಸಲಾಗಿರುವ ಕೊಳವೆ ಬಾವಿಯ ಪ್ರಾಯೋಗಿಕ ಕಾರ್ಯಾಚರಣೆಯನ್ನು ಸೋಮವಾರ ಪರಿಶೀಲಿಸಿ ಅವರು ಮಾತನಾಡಿದರು.

‘ನಗರದಲ್ಲಿ 14 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಇವುಗಳಲ್ಲಿ ಹಲವು ಕೊಳವೆಬಾವಿಗಳು ಬತ್ತಿ ಹೋಗಿವೆ. ಹೆಚ್ಚಿನ ಸಮಯ ಪಂಪ್‌ಸೆಟ್‌ಗಳನ್ನು ಬಳಸುವುದರಿಂದ, ನೀರು ಇಲ್ಲದ ಸಮಯದಲ್ಲೂ ಮೋಟರ್‌ ಚಾಲನೆಯಲ್ಲಿರುವುದರಿಂದ ಕೊಳವೆಬಾವಿಗಳು ರಿಪೇರಿಗೆ ಬರುತ್ತಿವೆ. ಪದೇಪದೇ ತಾಂತ್ರಿಕ ಸಮಸ್ಯೆಗೆ ಸಿಲುಕುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಧುನಿಕ ಎಐ ಮತ್ತು ಐಒಟಿ  ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತದೆ’ ಎಂದು ರಾಮ್‌ಪ್ರಸಾತ್‌ ತಿಳಿಸಿದರು.

ಉಪಯೋಗಗಳು: ಈ ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಕೊಳವೆಬಾವಿಗಳನ್ನು ಸಮರ್ಥ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸಬಹುದು. ಬಾವಿಯಲ್ಲಿ ನೀರಿಲ್ಲದ ಸಮಯದಲ್ಲಿ ಮೋಟರ್‌ ಬಳಸುವುದನ್ನು ತಪ್ಪಿಸಿ, ಕೊಳವೆ ಬಾವಿಗಳು ನಿಷ್ಕ್ರಿಯವಾಗುವುದನ್ನು ತಡೆಯಬಹುದು.

ಕೊಳವೆ ಬಾವಿಗಳನ್ನು ಸುಸ್ಥಿರವಾಗಿ ಹಾಗೂ ತಾಂತ್ರಿಕವಾಗಿ ಬಳಸುವುದಲ್ಲದೆ, ಪದೇಪದೇ ಮೋಟರ್ ಸುಟ್ಟು ಹೋಗುವಂತಹ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗೆ ಸಿಲುಕುವುದನ್ನು ತಪ್ಪಿಸುವುದಲ್ಲದೆ ನಿರ್ವಹಣೆಯ ವೆಚ್ಚವನ್ನು ಕಡಿಮೆಗೊಳಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಖಾಸಗಿ ಟ್ಯಾಂಕರ್ ಚಾಲಕನ ಮೇಲೆ ಎಫ್‌ಐಆರ್

ಉಚಿತ ನೀರನ್ನು ವಾಣಿಜ್ಯ ಉದ್ದೇಶಕ್ಕೆ ವಿತರಿಸಿದ ಖಾಸಗಿ ಚಾಲಕನ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರನ್ನು ಪೂರೈಸಲು ಸುನೀಲ್ ‌ಎನ್ನುವವರಿಗೆ ಸೇರಿದ ಖಾಸಗಿ ಟ್ಯಾಂಕರ್ (ಕೆಎ-52 ಸಿ-0204) ಪಡೆದುಕೊಳ್ಳಲಾಗಿತ್ತು. ವಾರ್ಡ್ ನಂ.130ರಲ್ಲಿರುವ ಸಾರ್ವಜನಿಕರಿಗೆ ವಿತರಿಸಲು ಸೂಚಿಸಲಾಗಿತ್ತು. ಆದರೆ ಖಾಸಗಿ ಟ್ಯಾಂಕರ್ ಮಾಲೀಕ‌ ಸುನೀಲ್ ಅವರು ಶೆಟ್ಟಿಹಳ್ಳಿ ಮುಖ್ಯರಸ್ತೆಯ ಮಲ್ಲಸಂದ್ರ ವಾರ್ಡ್ ನಂ.14ರಲ್ಲಿ ವಾಣಿಜ್ಯ ಉದ್ದೇಶಕ್ಕೆ ನೀರು ವಿತರಿಸಿರುವುದು ಮಾರ್ಚ್‌ 24ರಂದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸುನೀಲ್ ಅವರ ಮೇಲೆ ಜಲಮಂಡಳಿ ಸಹಾಯಕ ಎಂಜಿನಿಯರ್‌  ಕಾರ್ತಿಕ್ ಮಂಜು ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಎಚ್ಚರಿಕೆ: ಜಲಮಂಡಳಿ ಹಾಗೂ ಬಿಬಿಪಿಎಂಪಿ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರನ್ನು‌ ಪೂರೈಸಲು ಖಾಸಗಿ ಟ್ಯಾಂಕರ್‌ಗಳನ್ನು ಪಡೆದುಕೊಳ್ಳಲಾಗಿದೆ. ಈ ನೀರನ್ನು ಅನ್ಯ ಉದ್ದೇಶಗಳಿಗೆ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಮಂಡಳಿ‌ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್ ಮನೋಹರ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT