ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಡುತ್ತಿದೆ ನಗರದ ವಾತಾವರಣ; ವಾಹನ ದಟ್ಟಣೆಯಿಂದ 100ರ ಗಡಿ ದಾಟಿದ ಎಕ್ಯುಐ

ಅನಾರೋಗ್ಯಕ್ಕೆ ಆಹ್ವಾನ ನೀಡುವ ವಾಯುಮಾಲಿನ್ಯ
Last Updated 19 ಮಾರ್ಚ್ 2022, 22:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹಾಗೂ ತಾಪಮಾನ ಹೆಚ್ಚಳದಿಂದಾಗಿ ವಾತಾವರಣದ ಗುಣಮಟ್ಟ ದಿನೇ ದಿನೇ ಕುಸಿತ ಕಾಣುತ್ತಿದೆ. ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) ‘ಉತ್ತಮ’ ಹಂತದಿಂದ ‘ಮಧ್ಯಮ’ ಹಂತಕ್ಕೆ ತಲುಪಿದೆ.

ಬೇಸಿಗೆ ಆರಂಭದಲ್ಲೇ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರತೊಡಗಿದೆ. ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ವರೆಗೂ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದರಿಂದ ವ್ಯಾಪಾರ ವಹಿವಾಟು ಸೇರಿದಂತೆ ವಿವಿಧ ಚಟುವಟಿಕೆಗಳುಗರಿಗೆದರಿವೆ. ಶಾಲಾ–ಕಾಲೇಜುಗಳು ಪ್ರಾರಂಭವಾಗಿವೆ. ಮುಚ್ಚಿದ್ದ ಕಂಪನಿಗಳು ಮತ್ತೆ ಕಾರ್ಯಾಚರಣೆ ಆರಂಭಿಸಿವೆ. ಈ ಎಲ್ಲ ಕಾರಣಗಳಿಂದಾಗಿ ವಾಹನಗಳ ಸಂಚಾರ ಒಮ್ಮೆಲೇ ಹೆಚ್ಚಳವಾಗಿದೆ. ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ಕೆಲವೆಡೆ ಬೆಳಿಗ್ಗೆ ಮತ್ತು ಸಂಜೆಯ ಅವಧಿ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರಿಂದ ವಾತಾವರಣದಲ್ಲಿನ ಮಲಿನಕಾರಕ ಕಣಗಳೂ ಹೆಚ್ಚಳವಾಗುತ್ತಿವೆ.

ಕೋವಿಡ್ ಮೂರನೇ ಅಲೆಯ ಅವಧಿಯಲ್ಲಿ (2022ರ ಜನವರಿ–ಫೆಬ್ರುವರಿ)ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಿಂದ ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಎಕ್ಯುಐ ಇಳಿಕೆ ಕಂಡಿತ್ತು. ಹೆಬ್ಬಾಳ, ಪೀಣ್ಯ, ಜಯನಗರ ಸೇರಿದಂತೆ ಬಹುತೇಕ ಕಡೆ ಉತ್ತಮ ಸ್ಥಿತಿಯಲ್ಲಿತ್ತು. ಈಗ ಎಕ್ಯುಐ ಮಟ್ಟ 100ರ ಗಡಿ ದಾಟಿದೆ.

ಮಾಲಿನ್ಯಕಾರಕ ಕಣಗಳು:ನಗರದಲ್ಲಿ ವಾಯುಮಾಲಿನ್ಯದಿಂದಾಗಿ ಕೆಲವು ದಿನ ಮಾಲಿನ್ಯಕಾರಕ ಕಣಗಳು (ಪಿಎಂ)-10 (ಸೂಕ್ಷ್ಮ) ಹಾಗೂ ಪಿಎಂ-2.5 (ಅತಿ ಸೂಕ್ಷ್ಮ) ದೂಳಿನ ಕಣಗಳು ವಾತಾವರಣದಲ್ಲಿ ಕಾಣಿಸಿಕೊಳ್ಳುತ್ತಿವೆ. 1 ಸಾವಿರ ಲೀಟರ್ ಗಾಳಿಯಲ್ಲಿ ಪಿಎಂ-10 ಪ್ರಮಾಣ 100 ಮೈಕ್ರೊ ಗ್ರಾಂ ಹಾಗೂ ಪಿಎಂ-2.5 ಪ್ರಮಾಣ 60 ಮೈಕ್ರೊ ಗ್ರಾಂ ಮೀರಬಾರದು. ಆದರೆ, ಕೆಲ ಸಂದರ್ಭದಲ್ಲಿ ಈ ಕಣಗಳ ಪ್ರಮಾಣವು ನಿಗದಿತ ಮಿತಿಗಿಂತ ಹೆಚ್ಚು ಇರುವುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಡೆಸಿದ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ ಹಾಗೂ ಬನ್ನೇರು ಘಟ್ಟ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಇದರಿಂದಾಗಿ ಅಲ್ಲಿ ಹೆಚ್ಚಿನ ಪ್ರಮಾ ಣದಲ್ಲಿ ಮಾಲಿನ್ಯಕಾರಕ ಕಣಗಳು ಪತ್ತೆಯಾಗುತ್ತಿರುವುದು ಮಾಪನಾ ಕೇಂದ್ರಗಳಲ್ಲಿ ದಾಖಲಾಗು ತ್ತಿವೆ.

‌‘ಗಾಳಿಯ ಗುಣಮಟ್ಟದ ಸೂಚ್ಯಂಕವು 50ರ ಒಳಗಡೆ ಇದ್ದಲ್ಲಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಎಕ್ಯುಐ 51ರಿಂದ 100ರ ಒಳಗಡೆ ಇದ್ದಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. 101ರಿಂದ 200ರ ಗಡಿಯ ನಡುವೆ ಇದ್ದಲ್ಲಿ ಶ್ವಾಸಕೋಶ, ಹೃದಯ ಕಾಯಿಲೆಗಳು ಕೂಡ ಬರಬಹುದು’ ಎಂದುಮಂಡಳಿಯ ಪರಿಸರ ಅಧಿಕಾರಿಯೊಬ್ಬರು ತಿಳಿಸಿದರು.

‘ಶಾಲಾ–ಕಾಲೇಜುಗಳು ಹಾಗೂ ಐಟಿ–ಬಿಟಿ ಕಂಪನಿಗಳು ಪ್ರಾರಂಭವಾಗಿ ರುವುದರಿಂದ ವಾಹನಗಳ ಸಂಚಾರ ಸಹಜವಾಗಿಯೇ ಹೆಚ್ಚಳವಾಗಿದೆ. ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೂ ವೇಗ ನೀಡಲಾಗುತ್ತಿದೆ. ಇದರಿಂದಾಗಿ ಎಕ್ಯುಐ ಹೆಚ್ಚಳವಾಗುತ್ತಿದೆ. ಈ ಪ್ರಮಾಣ 200ರ ಗಡಿ ದಾಟಿದರೆ ಅಪಾಯ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅನಾರೋಗ್ಯ ಹೆಚ್ಚಳ ಸಾಧ್ಯತೆ
ವಾಯುಮಾಲಿನ್ಯದಿಂದ ತ್ವಚೆಯ ಅಲರ್ಜಿ, ಉಸಿರಾಟದ ಸಮಸ್ಯೆ, ಕಣ್ಣಿನ ಉರಿ ಮತ್ತು ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತವೆ. ಹೃದಯ, ಶ್ವಾಸಕೋಶ, ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಹೆಚ್ಚಲು ವಾಯುಮಾಲಿನ್ಯ ಹೆಚ್ಚುತ್ತಿರುವುದೂ ಪ್ರಮುಖ ಕಾರಣ ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ಸಾಬೀತಾಗಿದೆ.ವಾಯುಮಾಲಿನ್ಯದಿಂದ ಯುವಜನತೆ ಹೃದಯ ಸಮಸ್ಯೆ ಎದುರಿಸುತ್ತಿರುವುದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

‘ದೆಹಲಿ ಮತ್ತು ಅದರ ಉಪನಗರಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಅಪಾಯಕಾರಿ ಮಟ್ಟ ತಲುಪಿ, ಅಲ್ಲಿನ ಜನರು ಸಮಸ್ಯೆ ಎದುರಿಸಿದ್ದಾರೆ. ನಮ್ಮಲ್ಲಿ ಆ ಸ್ಥಿತಿ ನಿರ್ಮಾಣವಾಗದಂತೆ ಎಚ್ಚರವಹಿಸಬೇಕು. ವಾಯುಮಾಲಿನ್ಯದಿಂದ ಶ್ವಾಸಕೋಶಕ್ಕೆ ಹಾನಿಯಾಗುವ ಜತೆಗೆ ಈಗಾಗಲೇಶ್ವಾಸಕೋಶದ ಸಮಸ್ಯೆ (ಸಿಒಪಿಡಿ) ಎದುರಿಸುತ್ತಿರುವವರಿಗೆ ಕಾಯಿಲೆ ತೀವ್ರತೆ ಹೆಚ್ಚಲಿದೆ.ಆಸ್ತಮಾ ಸೇರಿದಂತೆ ವಿವಿಧ ಸಮಸ್ಯೆ ಇರುವವರು, ಮಕ್ಕಳು ಹಾಗೂ ವೃದ್ಧರಿಗೆ ಅನಾರೋಗ್ಯ ಕಾಡಲಿದೆ. ಮಾಲಿನ್ಯ ತಡೆಗೆ ಕ್ರಮವಹಿಸಬೇಕು’ ಎಂದು ಡಾ.ಸಿ. ನಾಗರಾಜ್ ತಿಳಿಸಿದರು.

ನಗರದಲ್ಲಿನಗಾಳಿಯ ಗುಣಮಟ್ಟದ ಸೂಚ್ಯಂಕ (ಮಾ.19)
ಮಾಪನಾ ಕೇಂದ್ರವಿರುವ ಪ್ರದೇಶ; ಎಕ್ಯುಐ
ಹೆಬ್ಬಾಳ
;113
ಜಯನಗರ;105
ಕವಿಕಾ ಲೇಔಟ್;142
ನಿಮ್ಹಾನ್ಸ್;109
ಸೆಂಟ್ರಲ್ ಸಿಲ್ಕ್‌ ಬೋರ್ಡ್;128
ನಗರದ ರೈಲು ನಿಲ್ದಾಣ; 107
ಸಾಣೆಗುರುವನಹಳ್ಳಿ;32
ಕಾಡುಬೀಸನಹಳ್ಳಿ;116
ಪೀಣ್ಯ;86
ಬಿಟಿಎಂ ಬಡಾವಣೆ;139

ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ)
00–50;
ಉತ್ತಮ
51–100; ಸಮಾಧಾನಕರ
101–200; ಮಧ್ಯಮ
201–300; ಕಳಪೆ
301–400;ತುಂಬಾ ಕಳಪೆ
401 ಮೇಲ್ಪಟ್ಟು; ತೀರಾ ಕಳಪೆ

*

ವಾಯುಮಾಲಿನ್ಯದಿಂದ ಉಸಿರಾಟದ ತೊಂದರೆಯ ಜತೆಗೆ ಕಣ್ಣಿನ ಉರಿ, ಶ್ವಾಸಕೋಶಕ್ಕೆ ಹಾನಿ ಮುಂತಾದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೂಳು, ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳಬೇಕು.
–ಡಾ.ಸಿ. ನಾಗರಾಜ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

*

ವಾಯುಮಾಲಿನ್ಯದಿಂದ ಉಸಿರಾಟದ ತೊಂದರೆ, ಶ್ವಾಸಕೋಶಕ್ಕೆ ಹಾನಿ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
–ಡಾ.ಸಿ. ನಾಗರಾಜ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT