ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವತಿ ಬೆದರಿಸಿ ಹಣ ಪಡೆದಿದ್ದ ಆರೋಪ: ಇನ್‌ಸ್ಟೆಕ್ಟರ್‌ ಸೇರಿ ನಾಲ್ವರ ಅಮಾನತು

ಯುವತಿ ಬೆದರಿಸಿ ಹಣವನ್ನು ಗೂಗಲ್‌ ಪೇ ಮಾಡಿಸಿಕೊಂಡಿದ್ದ ಪ್ರಕರಣ
Published : 28 ಫೆಬ್ರುವರಿ 2024, 15:46 IST
Last Updated : 28 ಫೆಬ್ರುವರಿ 2024, 15:46 IST
ಫಾಲೋ ಮಾಡಿ
Comments

ಬೆಂಗಳೂರು: ‘ಮದ್ಯ ಸೇವಿಸಿ ಕಾರು ಚಲಾಯಿಸುತ್ತಿದ್ದೀರಾ’ ಎಂದು ಯುವತಿಯನ್ನು ಬೆದರಿಸಿ ಹಣದ ಪಡೆದಿದ್ದ ಆರೋಪದ ಮೇರೆಗೆ ಜೀವನ್‌ಬಿಮಾ ನಗರ ಸಂಚಾರ ಪೊಲೀಸ್‌ ಠಾಣೆಯ ನಾಲ್ವರು ಸಿಬ್ಬಂದಿಯನ್ನು ನಗರ ಪೊಲೀಸ್‌ ಕಮಿಷನರ್‌ ದಯಾನಂದ್‌ ಅಮಾನತು ಮಾಡಿದ್ದಾರೆ.

ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ ವೆಂಕಟಾಚಲಪತಿ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಗಿರೀಶ್‌, ಕಡೇಮನಿ ಹುಚ್ಚು ಸಾಬ್‌ ಹಾಗೂ ಕಾನ್‌ಸ್ಟೆಬಲ್‌ ಬಸಪ್ಪ ಅಮಾನತುಗೊಂಡ ಸಿಬ್ಬಂದಿ.

‘ಯುವತಿಯಿಂದ ಬೇರೊಬ್ಬರ ಮೊಬೈಲ್‌ ಸಂಖ್ಯೆಗೆ ಹಣವನ್ನು ಗೂಗಲ್‌ ಪೇ ಮಾಡಿಸಿಕೊಂಡಿದ್ದು ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ನಾಲ್ವರನ್ನು ಅಮಾನತು ಮಾಡಲಾಗಿದೆ’ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದ್ದಾರೆ.

‘ಯುವತಿಯ ತಂದೆ ‘ಎಕ್ಸ್‌’ ಖಾತೆಯಲ್ಲಿ ಘಟನೆ ವಿವರ ಬರೆದು, ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್‌ ಮಾಡಿದ್ದರು. ಈ ದೂರು ಆಧರಿಸಿ, ತನಿಖೆ ನಡೆಸಿ ನಾಲ್ವರನ್ನು ಅಮಾನತು ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಆರಂಭದಲ್ಲಿ ₹ 15 ಸಾವಿರ ಕೇಳಿದ್ದರು. ಅಷ್ಟು ಹಣವಿಲ್ಲವೆಂದು ಮಗಳು ಹೇಳಿದ್ದಳು. ಸುಮ್ಮನಾಗದ ಪೊಲೀಸರು, ಗೂಗಲ್‌ ಪೇ ಮೂಲಕ ಹಣ ₹5,000 ಪಡೆದಿದ್ದರು. ತಪಾಸಣೆ ವೇಳೆ ಮಹಿಳಾ ಸಿಬ್ಬಂದಿ ಸಹ ಸ್ಥಳದಲ್ಲಿ ಇರಲಿಲ್ಲ’ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

‘ಅಂದು ಪಾನಮತ್ತರಾಗಿ ಚಾಲನೆ ಮಾಡುತ್ತಿದ್ದ ಚಾಲಕರನ್ನು ತಡೆದು ಪ್ರಕರಣ ದಾಖಲಿಸುತ್ತಿದ್ದರು. ಅದೇ ರಸ್ತೆಯಲ್ಲಿ ಯುವತಿ ಕಾರಿನಲ್ಲಿ ಬರುತ್ತಿದ್ದರು. ಕಾರು ತಡೆದು ಆಲ್ಕೋಮೀಟರ್‌ನಿಂದ ಯುವತಿಯನ್ನು ಪರೀಕ್ಷಿಸಿದ್ದ ಕಾನ್‌ಸ್ಟೆಬಲ್‌ಗಳು, ನೀವು ಮದ್ಯ ಕುಡಿದಿದ್ದೀರಾ ಎಂದು ಹೇಳಿ ₹ 15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಪ್ರಕರಣ ದಾಖಲಿಸಿ ಕಾರು ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ತಮ್ಮ ಬಳಿ ಹಣವಿಲ್ಲವೆಂದು ಯುವತಿ ಹೇಳಿದ್ದರು. ಆಗ ಬೇರೊಬ್ಬರ ಮೊಬೈಲ್‌ನಿಂದ ಗೂಗಲ್‌ ಪೇ ಮಾಡಿಸಿಕೊಂಡಿದ್ದರು. ಈ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT