₹40 ಲಕ್ಷವನ್ನು ಜಮೀನಿನಲ್ಲಿ ಹೂತಿದ್ದ !

7
ಹಣ ಕದ್ದೊಯ್ದಿದ್ದ ಕಸ್ಟೋಡಿಯನ್ ಬಂಧನ

₹40 ಲಕ್ಷವನ್ನು ಜಮೀನಿನಲ್ಲಿ ಹೂತಿದ್ದ !

Published:
Updated:

ಬೆಂಗಳೂರು: ಎಟಿಎಂ ಯಂತ್ರಗಳಿಗೆ ತುಂಬಿಸಬೇಕಿದ್ದ ₹ 76 ಲಕ್ಷ ಕದ್ದೊಯ್ದಿದ್ದ ಕಸ್ಟೋಡಿಯನ್ ಬಿ. ಶಿವರಾಜ್ (27) ಎಂಬಾತನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿಯಾದ ಶಿವರಾಜ್, ಆನೇಪಾಳ್ಯದ ಸೆಕ್ಯುರಿಟಿ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.  ಆಗಸ್ಟ್ 28ರಂದು ಹಣ ಕದ್ದೊಯ್ದಿದ್ದ ಆತ, ತನ್ನೂರಿನ ಜಮೀನಿನಲ್ಲಿ ಹೂತಿದ್ದ. ನಂತರ, ಊರೂರು ಸುತ್ತಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

‘ಹಣ ಕಳುವಾದ ಬಗ್ಗೆ ದೂರು ನೀಡಿದ್ದ ಏಜೆನ್ಸಿಯ ವ್ಯವಸ್ಥಾಪಕ ಶತ್ರುಘ್ನ ಪ್ರಸಾದ್‌, ಶಿವರಾಜ್‌ ಮೇಲೆಯೇ ಅನುಮಾನವಿರುವುದಾಗಿ ತಿಳಿಸಿದ್ದರು. ಆತನಿರುವ ಜಾಗವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ. ಆತನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ‘ ಎಂದರು.

‘ನನಗೆ ಕಳೆದ ವರ್ಷ ಮೂಲವ್ಯಾಧಿ ಉಂಟಾಗಿತ್ತು. ಅದರ ನಿವಾರಣೆಗೆ ನಾಟಿ ಔಷಧಿ ತೆಗೆದುಕೊಂಡಿದ್ದೆ. ಆ ಔಷಧಿಯಿಂದ ಸಕ್ಕರೆ ಕಾಯಿಲೆ ಬಂತು. ನಂತರ, ಚಿಕಿತ್ಸೆಗೆ ದುಡ್ಡಿನ ಅವಶ್ಯಕತೆ ಇತ್ತು. ಅದೇ ಕಾರಣಕ್ಕೆ ಕೃತ್ಯ ಎಸಗಿದೆ’ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದರು.

40 ಲಕ್ಷ ಜಪ್ತಿ: ‘ಹಣ ಕದ್ದೊಯ್ದ ಬಳಿಕ ಆರೋಪಿ, ಕೆಲಸಕ್ಕೆ ಬಂದಿರಲಿಲ್ಲ. ಆತನ ಮೊಬೈಲ್ ಸ್ವಿಚ್ಡ್‌ ಆಫ್‌ ಆಗಿತ್ತು. ದೂರು ದಾಖಲಾಗುತ್ತಿದ್ದಂತೆ ಆತನನ್ನು ಬಂಧಿಸಿ, ₹40 ಲಕ್ಷ ಜಪ್ತಿ ಮಾಡಲಾಗಿದೆ. ಉಳಿದ ಹಣವನ್ನು ಆತ ಎಲ್ಲಿಟ್ಟಿದ್ದಾನೆ ಎಂಬುದು ವಿಚಾರಣೆಯಿಂದ ಗೊತ್ತಾಗಬೇಕಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ತಿಳಿಸಿದರು.

‘ಎಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್‌ಗಳ ಎಟಿಎಂ ಯಂತ್ರಗಳಿಗೆ ಹಣ ತುಂಬಿಸುವ ಜವಾಬ್ದಾರಿಯನ್ನು ಏಜೆನ್ಸಿ ವಹಿಸಿಕೊಂಡಿದೆ. ನಿತ್ಯವೂ ಬ್ಯಾಂಕ್‌ಗಳಿಂದ ಹಣ ಸಂಗ್ರಹಿಸಿ ಎಟಿಎಂ ಯಂತ್ರಗಳಿಗೆ ತುಂಬಿಸುವ ಕೆಲಸಕ್ಕಾಗಿ ಶಿವರಾಜ್‌ನನ್ನು ನೇಮಕ ಮಾಡಲಾಗಿತ್ತು. ಆತನಿಗೆ ಎಟಿಎಂ ಯಂತ್ರದ ಪಾಸ್‌ವರ್ಡ್‌ ಸಹ ಗೊತ್ತಿತ್ತು. ಅದನ್ನು ಬಳಸಿಕೊಂಡೇ ಆತ ಕೃತ್ಯ ಎಸಗಿದ್ದ’ ಎಂದು ಹೇಳಿದರು.

ಹಣದ ಗೊಂದಲ: ‘ನಾನು ಕದ್ದಿದ್ದು ₹ 40 ಲಕ್ಷ ಮಾತ್ರ’ ಎಂದು ಆರೋಪಿ ಹೇಳುತ್ತಿದ್ದಾನೆ. ಏಜೆನ್ಸಿಯ ವ್ಯವಸ್ಥಾಪಕರು, ‘₹ 75 ಲಕ್ಷ ಕಳುವಾಗಿದೆ’ ಎಂದು ದೂರು ನೀಡಿದ್ದಾರೆ. ಹಣದ ಬಗ್ಗೆ ಅವರಿಬ್ಬರ ಹೇಳಿಕೆಯು ಗೊಂದಲವನ್ನುಂಟು ಮಾಡಿದೆ. ನಿಖರ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !