ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಪದ್ಧತಿ ಒಟ್ಟಾಗಿ ಸಾಗಲಿ: ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್

Last Updated 24 ಸೆಪ್ಟೆಂಬರ್ 2022, 5:00 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ಜಾಗತಿಕ ಮನ್ನಣೆ ದೊರೆತಿದೆ. ಸಾಂಪ್ರದಾಯಿಕ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಗಳು ಒಟ್ಟಾಗಿ ಸಾಗಿದರೆ ಅತ್ಯುತ್ತಮ ಫಲಿತಾಂಶ ಹೊರಹೊಮ್ಮಲಿದೆ’ ಎಂದು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಅಭಿಮತ ವ್ಯಕ್ತಪಡಿಸಿದರು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ನಗರದಲ್ಲಿ ಗುರುವಾರ ಹಮ್ಮಿಕೊಂಡ ‘ಜಾಗೃತಾವಸ್ಥೆಯ ಶೋಧ’ ವಿಚಾರಸಂಕಿರಣ ಉದ್ಘಾಟಿಸಿ, ಮಾತನಾಡಿದರು. ‘ನಮ್ಮಲ್ಲಿನ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಹಲವರ ತಪಸ್ಸಿನ ಫಲ. ಇದಕ್ಕೆ ದೊಡ್ಡ ಇತಿಹಾಸವಿದೆ. ಶತಮಾನಗಳಿಂದ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬರಲಾಗಿದೆ. ನಮ್ಮ ಸರ್ಕಾರ ಈ ಪದ್ಧತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಇದರಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನಲ್ಲಿಯೇ ಮೊದಲ ಬಾರಿಗೆ ಗುಜರಾತ್‍ನಲ್ಲಿ ಭಾರತೀಯ ಸಾಂಪ್ರದಾಯಿಕ ಔಷಧಗಳ ಘಟಕ ಸ್ಥಾಪಿಸಲು ಮುಂದಾಗಿದೆ’ ಎಂದರು.

‘ವಿವಿಧ ವೈದ್ಯಕೀಯ ಪದ್ಧತಿಯಲ್ಲಿ ತೊಡಗಿಸಿಕೊಂಡವರು ಅಹಂಕಾರವನ್ನು ಬಿಟ್ಟು, ಪರಸ್ಪರ ಉತ್ತಮ ಸಂಬಂಧ ಕಾಯ್ದುಕೊಂಡು ಸಾಗಬೇಕು’ ಎಂದು ಹೇಳಿದರು.

‘ಆಸ್ಪತ್ರೆಗಳ ಬಗ್ಗೆ ಬಹುತೇಕರಿಗೆ ತಪ್ಪು ಕಲ್ಪನೆಗಳಿವೆ. ಆಸ್ಪತ್ರೆಯ ಅರ್ಥವನ್ನು ಬದಲಾಯಿಸಬೇಕು. ರೋಗಿಯ ಕಾಯಿಲೆಯನ್ನು ವಾಸಿ ಮಾಡಿ, ನೋವನ್ನು ದೂರವಾಗಿಸುವ ಆಸ್ಪತ್ರೆಗಳು ಸಂತೋಷ ಹಂಚುವ ಕೇಂದ್ರಗಳಾಗಿವೆ. ವೈದ್ಯಕೀಯ ಕ್ಷೇತ್ರದ ಬಗ್ಗೆ ಜನರ ನಿರೀಕ್ಷೆ ಹೆಚ್ಚಾಗುತ್ತಿದೆ. ವೈದ್ಯರು ಮಾನವೀಯತೆಯಿಂದ ವರ್ತಿಸಿ,ಪ್ರೀತಿ ಮತ್ತು ವಾತ್ಯಲ್ಯದಿಂದ ರೋಗಿಗಳನ್ನು ಕಾಣಬೇಕು’ ಎಂದು ತಿಳಿಸಿದರು.

ಅಧ್ಯಾತ್ಮಚಿಂತಕ ಕಮಲೇಶ್ ಡಿ. ಪಾಟೀಲ್, ‘ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಜ್ಞೆ ಎಂಬುದರ ಪಾತ್ರ ಬಹಳ ಮಹತ್ವದ್ದಾಗಿದೆ. ಮನಸ್ಸು, ಬುದ್ಧಿ, ಅಹಂಕಾರ ಎಂಬುದು ಪ್ರಜ್ಞೆಯಿಂದ ಬರುತ್ತದೆ. ಧ್ಯಾನದಿಂದ ಒಳ್ಳೆಯ ಪ್ರಜ್ಞೆಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಯಾವುದೇ ಯಂತ್ರಗಳ ಸಹಾಯದಿಂದ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT