ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್ ಹುಕುಂ: ಹಕ್ಕು ಪತ್ರ ವಿತರಿಸಲು ಆಗ್ರಹ

‌ಎಐಕೆಕೆಎಂಎಸ್ ಕಾರ್ಯಕರ್ತರು, ರೈತರ ಧರಣಿ
Last Updated 19 ಅಕ್ಟೋಬರ್ 2022, 21:40 IST
ಅಕ್ಷರ ಗಾತ್ರ

ಬೆಂಗಳೂರು: ಜಮೀನನ್ನು ಗುತ್ತಿಗೆ ಆಧಾರದಲ್ಲಿ ಕೊಡುವ ನಿರ್ಧಾರ ವಾಪಸ್ ಪಡೆಯಬೇಕು ಮತ್ತು ಬಗರ್ ಹುಕುಂ ಸಾಗುವಳಿದಾರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಕಾರ್ಯಕರ್ತರು, ರೈತರು, ಮಹಿಳೆಯರು ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಿದರು.

‘ಬಗರ್ ಹುಕುಂ ಸಾಗುವಳಿಯು ಭೂ ಕಬಳಿಕೆಯಲ್ಲ. ಬಂಡವಾಳಶಾಹಿಗಳು ಹಾಗೂ ಕಂಪನಿಗಳು ಭೂಮಿಯನ್ನು ಆಕ್ರಮಿಸಿಕೊಳ್ಳುವುದು ಭೂಕಬಳಿಕೆ. ಬಡರೈತರು ಭೂಮಿ ಕೇಳುವುದು ನೈತಿಕ ಹಕ್ಕು. ರೈತರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಬಡ ರೈತರ ಪರ ನಿಲ್ಲಬೇಕಾದುದು ಸರ್ಕಾರದ ಕರ್ತವ್ಯ’ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರುಹೇಳಿದರು.

‘ಸಣ್ಣ ರೈತರು ಇಂದು ಕಾರ್ಮಿಕರಾಗುತ್ತಿದ್ದಾರೆ. ಅವರು ಹರಿವ ನೀರಿನಂತೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ. ಅಂತಹ ರೈತರ ಪರವಾಗಿ ನಿಲ್ಲಬೇಕಾದುದು ಸರ್ಕಾರದ ಕರ್ತವ್ಯ. ಆದ್ದರಿಂದ ರೈತರಿಗೆ ಭೂಮಿಯನ್ನು ಗುತ್ತಿಗೆ ಕೊಡುವ ಬದಲು ಹಕ್ಕುಪತ್ರಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ, ‘ರೈತರು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಗೆ ಹಕ್ಕಪತ್ರ ನೀಡಬೇಕು’ ಎಂದು ಆಗ್ರಹಿಸಿದರು.

ಎಐಕೆಕೆಎಂಎಸ್ ಸಂಘಟನೆ ರಾಜ್ಯ ಅಧ್ಯಕ್ಷ ಎಚ್.ವಿ. ದಿವಾಕರ್ ಮಾತನಾಡಿ, ‘ಬಗರ್ ಹುಕುಂ ಸಾಗುವಳಿದಾರರ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ. ಅರಣ್ಯ ಇಲಾಖೆಯವರು ಏಕಾಏಕಿ ದಶಕಗಳಿಂದ ಸಾಗುವಳಿ ಮಾಡುತ್ತಿರುವ ಜಮೀನನ್ನು ವಶಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ದೈಹಿಕವಾಗಿಯೂ ಹಲ್ಲೆಗಳು ನಡೆಯುತ್ತಿವೆ’ ಎಂದು ದೂರಿದರು.

ಎಐಕೆಕೆಎಂಎಸ್ ಸಂಘಟನೆಯ ಅಖಿಲ ಭಾರತ ಸಮಿತಿ ಉಪಾಧ್ಯಕ್ಷ ಡಾ. ಟಿ.ಎಸ್. ಸುನೀತ್ ಕುಮಾರ್ ಮಾತನಾಡಿ, ಸುಮಾರು 12 ಲಕ್ಷ ರೈತರ ಅರ್ಜಿಗಳು ಸರ್ಕಾರದ ಮುಂದಿವೆ. ಆದ್ದರಿಂದ, ಸರ್ಕಾರ ಅವರಿಗೆ ಹಕ್ಕುಪತ್ರ ವಿತರಿಸಬೇಕು’ ಎಂದು ಒತ್ತಾಯಿಸಿದರು.

ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಎಂ. ಶಶಿಧರ್, ಕಚೇರಿ ಕಾರ್ಯದರ್ಶಿ ಎಸ್.ಎನ್.ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT