ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್‌ : ಅಮೀನಗಡ ಕುರಿಗೆ ಹೆಚ್ಚಿದ ಬೇಡಿಕೆ

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ವ್ಯಾಪಾರ ಜೋರು
Last Updated 5 ಆಗಸ್ಟ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್‌ ಸಮೀಪಿಸುತ್ತಿರುವ ಹಿನ್ನೆಲೆ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ‘ಕುರಿ–ಮೇಕೆ ಸಂತೆ’ಯಲ್ಲಿ ಬಗೆ ಬಗೆಯ ಕುರಿ ಹಾಗೂ ಮೇಕೆಗಳ ದಂಡು ಬೀಡುಬಿಟ್ಟಿದೆ. ಈ ಬಾರಿ ಬಾಗಲಕೋಟೆ ಜಿಲ್ಲೆಯ ಅಮೀನಗಡ ತಳಿಯ ಕುರಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಸಂತೆಯಲ್ಲಿ ರಾಜ್ಯದ ವಿವಿಧ ಭಾಗಗಳ ಕುರಿಗಳು ಮಾರಾಟಕ್ಕಿವೆ. ಇದೇ 12ರಂದು ಬಕ್ರೀದ್‌ ಆಚರಿಸಲಾಗುತ್ತಿದೆ. ಅನೇಕ ಮಂದಿ ಹಬ್ಬಕ್ಕೆ ಸಾಕಷ್ಟು ಮುನ್ನವೇ ಕುರಿಗಳನ್ನು ಖರೀದಿಸುತ್ತಾರೆ. ಅಲ್ಲದೇ ವಿದೇಶಗಳಿಗೂ ಇಲ್ಲಿಂದ ಕುರಿಗಳು ರಫ್ತಾಗುತ್ತವೆ. ಹಾಗಾಗಿ ಸಂತೆಯಲ್ಲಿ ಗ್ರಾಹಕರು ಈಗಲೇ ಕುರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ.

‘ರಾಜ್ಯದ ಕುರಿಗಳಿಗೆ ರಾಷ್ಟ್ರಮಟ್ಟದಲ್ಲಿ ಬೇಡಿಕೆ ಇದೆ. ಅಲ್ಲದೇ ಕುರಿ ಸಾಗಣೆ ಕೇಂದ್ರಗಳಲ್ಲಿನ ಹೈಬ್ರಿಡ್‌ ತಳಿಗಳಿಗಿಂತ ಗ್ರಾಮೀಣ ಭಾಗದಲ್ಲಿ ಕುರಿಗಾಹಿಗಳು ಸಾಕಿರುವ ಕುರಿಗಳನ್ನು ಗ್ರಾಹಕರು ಬಯಸುತ್ತಾರೆ. ಹೀಗಾಗಿ ಗ್ರಾಮೀಣ ಭಾಗದ ಕುರಿಗಳನ್ನು ಈ ಬಾರಿ ಸಂತೆಗೆ ಹೆಚ್ಚಿನ ಪ್ರಮಾಣದಲ್ಲಿ ತರಿಸಿದ್ದೇವೆ’ ಎನ್ನುತ್ತಾರೆ ವ್ಯಾಪಾರಿ ಬಶೀರ್‌.

‘ದಷ್ಟಪುಷ್ಟವಾದ ಕುರಿಗಳು ಬೇಕೆಂದುಹಬ್ಬಕ್ಕೂ ಮುನ್ನ ಗ್ರಾಹಕರು ಬೇಡಿಕೆ ಸಲ್ಲಿಸುತ್ತಾರೆ. ಹೀಗಾಗಿ ಕುರಿ ಸಾಗಣೆದಾರರಿಗೆ ಆರು ತಿಂಗಳ ಹಿಂದೆಯೇ ಮುಂಗಡವಾಗಿ ಇಷ್ಟು ಕುರಿಗಳು ಬೇಕೆಂದು ತಿಳಿಸುತ್ತೇವೆ. ಇದರಿಂದ ಕುರಿ ಸಾಕುವವರಿಗೂ ಲಾಭದ ಅಂದಾಜು ಸಿಗುತ್ತದೆ. ಜೊತೆಗೆ ಬೇಡಿಕೆ ಇರುವ ಕುರಿಗಳ ಮೇಲೆ ಹೆಚ್ಚು ನಿಗಾ ತೋರಿ ದಷ್ಟಪುಷ್ಟವಾಗಿ ಬೆಳೆಸುತ್ತಾರೆ’ ಎಂದು ಮಾಹಿತಿ ನೀಡಿದರು.

‘ಯುಗಾದಿ ಹೊರತುಪಡಿಸಿದರೆ, ರಂಜಾನ್ ಹಾಗೂ ಬಕ್ರೀದ್‌ ವೇಳೆ ಮಾತ್ರ ಕುರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಉಳಿದ ಸಮಯದಲ್ಲಿ ಲಾಭ ಅಷ್ಟಾಗಿ ಸಿಗುವುದಿಲ್ಲ. ಗಾತ್ರ ಹಾಗೂ ತೂಕದ ಆಧಾರದಲ್ಲಿ ಕುರಿಗಳನ್ನು ಖರೀದಿ ಮಾಡುತ್ತಾರೆ.ಹೀಗಾಗಿ ಬಕ್ರೀದ್‌ ಹಬ್ಬದ ವೇಳೆಗೆ ಕುರಿಗಳು ದಷ್ಟಪುಷ್ಟವಾಗಿ ಕೊಬ್ಬುವಂತೆ ಮಾಡುತ್ತೇವೆ’ ಎನ್ನುತ್ತಾರೆ ಕುರಿ ಮಾರಾಟದಲ್ಲಿ ತೊಡಗಿದ್ದ ಗೌಸ್‌.

‘ರಾಯಬಾಗ, ಕೆರೂರು, ಅಮೀನಗಡ, ಬಾಗಲಕೋಟೆ, ಬಸವನ ಬಾಗೇವಾಡಿ, ಬಳ್ಳಾರಿ, ಮಂಡ್ಯ, ಬನ್ನೂರು, ಚನ್ನಪಟ್ಟಣ, ಕೋಲಾರ, ಶಿರಾ, ಪಾವಗಡ, ತುಮಕೂರು ಹಾಗೂ ಆಂಧ್ರಪ್ರದೇಶದಅನಂತಪುರ ಜಿಲ್ಲೆಗಳ ಕುರಿಗಳು ಸಂತೆಯಲ್ಲಿ ಮಾರಾಟಕ್ಕಿವೆ. ಸಂತೆಗೆ ತರಲು ಪ್ರತಿ ಕುರಿಗೆ ₹ 1ಸಾವಿರ ಸಾರಿಗೆವೆಚ್ಚ ತಗಲುತ್ತದೆ. ದಿನವೂ ವಿವಿಧ ಜಿಲ್ಲೆಗಳಿಂದ ಟ್ರಕ್‌ಗಳಲ್ಲಿ ಕುರಿಗಳನ್ನು ತರಲಾಗುತ್ತಿದೆ. ಕೆಲವರು 10ರಿಂದ 20 ಕುರಿಗಳನ್ನು ಒಟ್ಟಾಗಿ ಖರೀದಿಸುತ್ತಾರೆ’ ಎಂದು ಅವರು ವಿವರಿಸಿದರು.

ಅವನತಿಯತ್ತ ‘ಬನ್ನೂರು ಕುರಿ’..

‘ಮಂಡ್ಯ ಜಿಲ್ಲೆಯ ‘ಬನ್ನೂರು ಕುರಿ’ ಮಾಂಸಹಾರಿಗಳಿಗೆ ಅಚ್ಚುಮೆಚ್ಚು. ಕುರಿ ಕೊಳ್ಳಲು ಬನ್ನೂರಿಗೆ ಹೊರ ರಾಜ್ಯಗಳಿಂದ ಗ್ರಾಹಕರು ಬರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವು ಅವನತಿಯತ್ತ ಸಾಗುತ್ತಿವೆ’ ಎಂದು ಮಂಡ್ಯದ ರೈತ ರಾಮೇಗೌಡ ಕಳವಳ ವ್ಯಕ್ತಪಡಿಸಿದರು.

‘ಬನ್ನೂರು ಕುರಿಗಳಿಗಿಂತ ಅಮೀನ್‌ಗಡ ತಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಬನ್ನೂರು ಕುರಿಗಳ ಸಾಕಣೆಗೆ ಅಧಿಕ ಖರ್ಚು ತಗಲುತ್ತದೆ. ಬೇರೆ ಕುರಿ ತಳಿಗಳಿಗೆ ಹೋಲಿಸಿದರೆ ಇವುಗಳ ತೂಕವೂ ಕಡಿಮೆ. ಹೀಗಾಗಿ ಮಂಡ್ಯದ ಜನರೇ ಅಮೀನಗಡ ಹಾಗೂ ಇತರೆ ಲಾಭದಾಯಕ ತಳಿಗಳ ಕುರಿ ಸಾಗಣೆಯತ್ತ ಮುಖ ಮಾಡಿದ್ದಾರೆ. ಬನ್ನೂರು ಕುರಿ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡು ರೈತರಿಗೆ ಕುರಿ ಸಾಕಣೆಗೆ ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದರು.

ಅಮೀನಗಡ ಕುರಿಯ ವಿಶೇಷಗಳೇನು?

50ಕೆ.ಜಿಯೀಂದ 120 ಕೆ.ಜಿ ತೂಕ ಹೊಂದಿರುತ್ತದೆ

₹ 1.50 ಲಕ್ಷದಿಂದ ₹2.50 ಲಕ್ಷಕ್ಕೆ ಮಾರಾಟ

ಕುರಿಗಳ ಸಾಕಣೆ ವೆಚ್ಚ ಕಡಿಮೆ

ಕಡಿಮೆ ಅವಧಿಯಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತದೆ

ಅರೇಬಿಯಾ, ದುಬೈ, ಮುಂಬೈಗೆ ರಫ್ತು
**
ಸಂತೆಯಲ್ಲಿ ಮಾರಾಟಕ್ಕಿರುವ ತಳಿಗಳು

ಅಮೀನಗಡ, ಬಿಳಿಕುರಿ,ಬನ್ನೂರು, ಕೆಂಗುರಿ, ಮೌಳಿ, ಶಿಯೋರಿ

**

ಸಂತೆಯಲ್ಲಿ ಕುರಿಗಳು ₹1ಲಕ್ಷದಿಂದ ₹2.5 ಲಕ್ಷಕ್ಕೆ ಮಾರಾಟಕ್ಕಿವೆ. ವಿದೇಶಗಳಿಂದ ಕುರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಗರಿಷ್ಠ ₹ 3 ಲಕ್ಷದಿಂದ ₹4 ಲಕ್ಷಕ್ಕೆ ಮಾರಾಟ ಆಗುವ ನಿರೀಕ್ಷೆ ಇದೆ.
- ಅಬಿತ್‌, ಗ್ರಾಹಕ

**

ಮೇಕೆ ಖರೀದಿಸಲು ಕೆಲವರು ಸಂತೆಗೆ ಬರುತ್ತಾರೆ. ಈ ಬಾರಿ ಮೇಕೆಗಳ ಆರಂಭಿಕ ಬೆಲೆ ₹ 25 ಸಾವಿರ. ಹಬ್ಬದ ವೇಳೆಗೆ ₹ 40 ಸಾವಿರದಿಂದ ₹50 ಸಾವಿರದ ವರೆಗೆ ಏರಿಕೆ ಕಾಣಬಹುದು.‌
- ನಾಗರಾಜು, ಮೇಕೆ ವ್ಯಾಪಾರಿ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT