ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಪೌರತ್ವ ಪಡೆದ ಬಾಂಗ್ಲಾ ಪ್ರಜೆ!

ನಕಲಿ ದಾಖಲೆ ಸೃಷ್ಟಿಸಿ ಉಪನ್ಯಾಸಕನಾಗಿದ್ದ ಮೊಹಮ್ಮದ್ ಹುಸೇನ್
Last Updated 8 ಅಕ್ಟೋಬರ್ 2019, 18:58 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿ ವೀಸಾದಲ್ಲಿ ಬಂದು, ದಾಖಲೆಗಳನ್ನು ಅಕ್ರಮವಾಗಿ ಸೃಷ್ಟಿಸಿ ಭಾರತೀಯ ಪೌರತ್ವ ಪಡೆದು ಪ್ರತಿಷ್ಠಿತ ಕಾಲೇಜಿನಲ್ಲಿ ‘ಉಪನ್ಯಾಸಕ’ ನಾಗಿದ್ದ ಬಾಂಗ್ಲಾ ಪ್ರಜೆಯನ್ನು ಸಂಜಯ ನಗರ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ರಬಿವುಲ್ ಹುಸೇನ್ (29) ಬಂಧಿತ ವ್ಯಕ್ತಿ. ಆರೋಪಿಯಿಂದ ನಕಲಿ ಜನನ ಪ್ರಮಾಣ ಪತ್ರ, ಆಧಾರ್‌ ಕಾರ್ಡ್, ಭಾರತದ ಪಾಸ್‌ಪೋರ್ಟ್, ಕಾಲೇಜಿನ ಗುರುತಿನ ಚೀಟಿ, ಪಾನ್‌ ಕಾರ್ಡ್, ಬ್ಯಾಂಕ್ ಖಾತೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

2009ರಲ್ಲಿ ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿ ನಾಗಶೆಟ್ಟಿಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಮತ್ತಿಕೆರೆಯಲ್ಲಿರುವ ರಾಮಯ್ಯ ಕಾಲೇಜಿನಲ್ಲಿ 2016ರವರೆಗೆ ವಾಸ್ತ್ರಿಶಿಲ್ಪ ಶಾಸ್ತ್ರ ವಿಭಾಗದಲ್ಲಿ ಓದಿದ್ದ. ಕಾಲೇಜಿನ ಗುರುತಿನ ಚೀಟಿ ಬಳಸಿ ಪಾನ್‌ಕಾರ್ಡ್ ಹಾಗೂ ಎಸ್‌ಬಿಐ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದ ಆರೋಪಿ, ಬಳಿಕ ಕೋಲ್ಕತ್ತದ ನಕಲಿ ದಾಖಲೆ ನೀಡಿ ಸಂಜಯ
ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಮನೆಯ ಬಾಡಿಗೆ ಕರಾರು ಪತ್ರ ನೀಡಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್ ಮಾಡಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಎಲ್ಲ ದಾಖಲೆಗಳನ್ನು ನೀಡಿ ಭಾರತೀಯನೆಂದು ಬಿಂಬಿಸಿಕೊಂಡು, ಪಾಸ್‌ಪೋರ್ಟ್ ಕೂಡಾ ಮಾಡಿಸಿ ಕೊಂಡಿದ್ದ. ಅಲ್ಲದೆ, ಭಾರತೀಯ ಪೌರತ್ವ ಪಡೆದಿರುವುದಾಗಿ ನಂಬಿಸಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ಈತನ ನಡವಳಿಕೆಯಿಂದ ಅನುಮಾನಗೊಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು.

‘ಆರೋಪಿಯ ದಾಖಲೆ ಪರಿಶೀಲಿಸಿ ದಾಗ ನಕಲಿ ದಾಖಲೆ ಸೃಷ್ಟಿಸಿರುವುದು ಪತ್ತೆಯಾಗಿದೆ. ಆರೋಪಿಯನ್ನು ವಿಚಾ ರಣೆಗೆ ಒಳಪಡಿಸಲಾಗಿದೆ’ ಎಂದರು.

***

ಆರೋಪಿ ಯಾರ ಮೂಲಕ ನಕಲಿ ಜನನ ಪ್ರಮಾಣ ಪತ್ರ ಪಡೆದ, ಯಾವ ಸರ್ಕಾರಿ ಅಧಿಕಾರಿ ಅದಕ್ಕೆ ಸಹಿ ಹಾಕಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ

-ಪೊಲೀಸ್ ಅಧಿಕಾರಿ, ಸಂಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT