ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಸಿನಿಪಯಣ ಮೆಲುಕು ಹಾಕಿದ ‘ಬ್ಯಾಡ್‌ ಮ್ಯಾನ್‌’ ಗುಲ್ಶನ್‌ ಅಂತರಾಳ

ಆತ್ಮಕತೆ ಬರೆದಿದ್ದೇನೆ; ಆದರೆ, ಖಾಲಿ ಕುಳಿತಿಲ್ಲ!

ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆತ್ಮಕತೆ ಬರೆದಿದ್ದಾನೆ ಎಂದರೆ ಗುಲ್ಶನ್‌ನ ಸಿನಿಮಾ ಪಯಣ ಮುಗಿಯಿತು. ಖಾಲಿ ಕುಳಿತಿದ್ದಾನೆ ಎಂದು ಭಾವಿಸಬೇಡಿ. ‘ಸೂರ್ಯವಂಶಿ’, ಮಹೇಶ್‌ ಭಟ್‌ ನಿರ್ದೇಶಿಸುತ್ತಿರುವ ‘ಸಡಕ್‌ 2’, ‘ಮುಂಬೈ ಸಾಗಾ’ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಜತೆಗೆ ‘ಜೇಮ್ಸ್‌ ಬಾಂಡ್‌’ನಲ್ಲಿ ಬಾಂಡ್‌ ಆಗಿ ಕಾಣಿಸಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ’ ಎಂದು ಹೇಳುತ್ತಾ ನಟ ಗುಲ್ಶನ್‌ ಗ್ರೋವರ್ ಸಣ್ಣಗೆ ನಕ್ಕರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ತಮ್ಮ ಆತ್ಮಕತೆ ‘ಬ್ಯಾಡ್‌ ಮ್ಯಾನ್‌’ ಕುರಿತು ಮಾತನಾಡಿದರು.

‘ಸ್ಫುರದ್ರೂಪಿಯಾಗಿದ್ದು, ಸಾಮಾನ್ಯ ನಟನೆ ಹೊಂದಿರುವವರು ಬಹುಬೇಗ ನಾಯಕರಾಗಬಹುದು. ಆದರೆ, ಖಳನಾಯಕನಾಗಲು ಪಕ್ಕಾ ನಟನೆಯನ್ನು ಕಲಿತಿರಬೇಕು. ನಟನೆಯೊಂದೇ ಆತನನ್ನು ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತದೆ. ದೇಹದಾರ್ಢ್ಯವಿಲ್ಲ, ಎತ್ತರವಿಲ್ಲ. ಖಳನಾಯಕ ಹೇಗೆ ಆಗುವೆ ಎಂದು ಅಣಕಿಸಿದವರೇ ಹೆಚ್ಚು. ಇವೆಲ್ಲವನ್ನೂ ಉಲ್ಟಾ ಮಾಡಿದ್ದೇನೆ’ ಎಂದು ‘ಬ್ಯಾಡ್‌ಮ್ಯಾನ್‌‘ ವರ್ಚಸ್ಸಿಗೆ ತಕ್ಕಂತೆ ಗಹಗಹಿಸಿ ನಕ್ಕರು. 

‘ಬದುಕಿಗೆ ಶಿಕ್ಷಣವೇ ಬುನಾದಿ ಎಂದು ನಂಬಿದ್ದ ಅಪ್ಪನ ಆಶಯವನ್ನು ಕಾಲೇಜು ದಿನಗಳಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಸಾಕಾರಗೊಳಿಸಿದ್ದೆ. ದೆಹಲಿಯ ಹೊರವಲಯದ ಬಡಕುಟುಂಬದಿಂದ ಬಂದ ನನಗೆ ಸರ್ಕಾರಿ ಶಾಲೆಯ ಓದು ಹೊರಜಗತ್ತನ್ನು ನೋಡುವ ಬಗೆಯನ್ನು ಕಲಿಸಿತು’ ಎಂದು ನೆನಪಿಸಿಕೊಂಡರು. 

‘ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ ಇದ್ದಿದ್ದರಿಂದ ರಂಗಭೂಮಿಯಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿ, ಮುಂಬೈಗೆ ತೆರಳಿ, ನಟನಾ ತರಗತಿಗೆ ಸೇರಿಕೊಂಡೆ. ಕ್ರಮೇಣ ಅಲ್ಲೇ ನಟನೆಯನ್ನು ಹೇಳಿಕೊಡುವ ಮೇಷ್ಟ್ರು ಆದೆ. ಈ ಸಂದರ್ಭದಲ್ಲಿ ಸುನಿಲ್‌ ದತ್‌ ಪರಿಚಯವಾಗಿ ’ರಾಕಿ’ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆಯಿತು’ ಎಂದು ಸಿನಿಮಾಕ್ಷೇತ್ರ ಪ್ರವೇಶಿಸಿದ ಆರಂಭಿಕ ದಿನಗಳನ್ನು ಸ್ಮರಿಸಿದರು. 

‘ಇಂಟರ್‌ನೆಟ್‌ ಇಲ್ಲದ ಕಾಲದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ‌ ಗುರುತಿಸಿಕೊಳ್ಳಲು ಯಾವುದೇ ದಾರಿಗಳಿಲ್ಲದ ಹೊತ್ತಲ್ಲಿ ಹಾಲಿವುಡ್‌ ನನಗೆ ಕರೆದು ಅವಕಾಶ ಕೊಟ್ಟಿತ್ತು. ‘ದಿ ಸೆಕೆಂಡ್‌ ಜಂಗಲ್‌ ಬುಕ್‌’‍ನಲ್ಲಿ ನಟಿಸಿದ ಮೇಲೆ ಅವಕಾಶ ಪಡೆಯಲು ಆರಂಭಿಸಿದೆ. ಬಾಲಿವುಡ್‌ ಸಿನಿಮಾಗಳನ್ನು ಹಾಲಿವುಡ್‌ ಮಂದಿಗೆ ತೋರಿಸಲು ಸೂಟ್‌ಕೇಸಿನಲ್ಲಿ ಡಿವಿಡಿಗಳನ್ನು ಹೆಚ್ಚಾಗಿ ತೆಗೆದುಕೊಂಡು ಹೋಗುತ್ತಿದ್ದೆ. ವಿಮಾನ ನಿಲ್ದಾಣದಲ್ಲಿನ ಕಸ್ಟಮ್‌ ಅಧಿಕಾರಿಗಳು ‘ನೀನೇನಾದರೂ ಡಿವಿಡಿ ಮಾರಾಟಗಾರನಾ?’ ,‘ಅಶ್ಲೀಲ ಸಿನಿಮಾಗಳ ಡಿವಿಡಿ ಇರಬಹುದಾ’ ಎಂದು ಅನುಮಾನ ವ್ಯಕ್ತಪಡಿಸಿದ್ದರು’ ಎಂದು ಹೇಳಿಕೊಂಡರು. 

‘ಹಾಲಿವುಡ್‌ನಲ್ಲಿ ಶಿಸ್ತಿದೆ. ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟ ವಿಭಾಗವಿರುತ್ತದೆ. ಏನೇ ಕೆಲಸ ಮಾಡಿದರೂ ಪರಿಪೂರ್ಣತೆಗೆ ಆದ್ಯತೆ ಕೊಡುತ್ತಾರೆ’ ಎಂದು ಅವರು ಬಾಲಿವುಡ್‌ನ ಶಿಸ್ತುಪರತೆಯನ್ನು ವಿಶ್ಲೇಷಿಸಿದರು.

ಬಾಲಿವುಡ್‌, ಹಾಲಿವುಡ್‌ ನಡುವೆ ಕಚ್ಚಾರಸ್ತೆ
‘ಬಾಲಿವುಡ್‌ ಮತ್ತು ಹಾಲಿವುಡ್‌ ನಡುವೆ ಕಚ್ಚಾ ರಸ್ತೆಯೊಂದನ್ನು ರೂಪಿಸಿರುವ ಬಗ್ಗೆ ಖುಷಿ ಇದೆ. ಈ ರಸ್ತೆಯನ್ನು ಇನ್ನಷ್ಟು ಸುಗಮವಾಗಿಸಿ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಅನುಪಮ್‌ ಖೇರ್‌ನಂಥ ನಟರು ಕಾಂಕ್ರಿಟೀಕರಣಗೊಳಿಸಿರುವ ಬಗ್ಗೆ ಹೆಮ್ಮೆ ಇದೆ. ಏನೇ ಕೆಲಸ ಮಾಡಿ. ಅದರಲ್ಲಿ ಶೇ 100ರಷ್ಟು ತಾದಾತ್ಮ್ಯತೆ ಇರಲಿ. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ’ ಎಂದು ಸಲಹೆ ನೀಡಿದರು.

**

ನಾವು ಭಾರತೀಯರು ಪ್ರತಿಭಾಶಾಲಿಗಳು, ಸಿಕ್ಕಾಪಟ್ಟೆ ಶ್ರಮಜೀವಿಗಳು. ಆದರೆ, ಯೋಜನಾಬದ್ಧವಾಗಿ ಕೆಲಸ ಮಾಡುವಲ್ಲಿ ಎಡವುತ್ತೇವೆ
–ಗುಲ್ಶನ್‌ ಗ್ರೋವರ್, ಬಾಲಿವುಡ್‌ ನಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು