ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸಾಹಿತ್ಯ ಉತ್ಸವ: ಚಿಂತನೆಗಳ ಹೊಳಹುಗಳಿಂದ ಕಳೆ

ಕನ್ನಡ ನೆಲದ ಭಾಷಾ ವೈವಿಧ್ಯ ದರ್ಶನ
Last Updated 18 ಡಿಸೆಂಬರ್ 2021, 21:14 IST
ಅಕ್ಷರ ಗಾತ್ರ

ಬೆಂಗಳೂರು: ನೆಲದ ಭಾಷೆಗಳನ್ನು ಉಳಿಸುವ ಮಾರ್ಗೋಪಾಯಗಳ ಕುರಿತ ಚಿಂತನೆಗಳ ಮಂಥನ ಕಾವೇರಿದ್ದರೆ, ಇನ್ನೊಂದೆಡೆ ಹೊಸ ಪುಸ್ತಕಗಳ ಹೂರಣಗಳ ಅವಲೋಕನ. ವೈರಾಣುಗಳ ವಿಕಸನ ನಿಗೂಢ ಸಾಮ್ರಾಜ್ಯ ವಿಸ್ತಾರ– ಹರವುಗಳ ಬಗ್ಗೆ ಜಿಜ್ಞಾಸೆ ಒಂದೆಡೆಯಾದರೆ, ದೇಶದ ಸಾಮಾಜಿಕ, ಆರ್ಥಿಕ ರಾಜಕಿಯ ಬೆಳವಣಿಗೆಗಳ ಸಮಾಲೋಚನೆ ಮತ್ತೊಂದೆಡೆ...

ಹೀಗೆ, ಹತ್ತು ಹಲವು ವಿಚಾರಧಾರೆಗಳ ಗಹನವಾದ ಚರ್ಚೆಗಳಿಗೆ ಬೆಂಗಳೂರು ಸಾಹಿತ್ಯ ಉತ್ಸವ ವೇದಿಕೆಯಾಯಿತು. ದೇಶದ ವಿವಿಧೆಡೆಗಳಿಂದ ಬಂದಿದ್ದ ವಿದ್ವಾಂಸರು, ಲೇಖಕರು ಹಂಚಿಕೊಂಡ ಹೊಳಹುಗಳ ಬೆಳಕಿನೊಂದಿಗೆ ಈ ಸಾಹಿತ್ಯ ಜಾತ್ರೆ ಕಳೆಗಟ್ಟಿತು.

ತಮ್ಮಿಷ್ಟದ ಸಾಹಿತಿಗಳ, ಚಿಂತಕರ ಮಾತುಗಳನ್ನು ಆಲಿಸಲು ಅಭಿಮಾನಿ ಬಳಗ ತಮ್ಮ ವಾರಾಂತ್ಯವನ್ನು ಮುಡಿಪಾಗಿಟ್ಟಿತ್ತು. ಇನ್ನೊಂದೆಡೆ ಸಾಹಿತ್ಯ ಪ್ರೇಮಿಗಳು ಹೊಸ ಪುಸ್ತಕಗಳ ಖರೀದಿ ಭರಾಟೆಯಲ್ಲಿ ಮುಳುಗಿದ್ದರು.

ಕನ್ನಡ ನಾಡಿನ ಕೊಂಕಣಿ, ತುಳು, ಕೊಡವ, ಹಾಲಕ್ಕಿ ಮುಂತಾದ ಬಹು ಭಾಷಾ ಜಗತ್ತು, ಅವುಗಳ ಜೊತೆಗೆ ಬೆಸೆದುಕೊಂಡ ಸಂಸ್ಕೃತಿಗಳನ್ನು ಉಳಿಸಿಕೊಳ್ಳುವ ಬಗೆ ಹೇಗೆ ಎಂಬ ಕುರಿತ ಸಮಾಲೋಚನೆ ಈ ಬಾರಿಯ ವಿಶೇಷವಾಗಿತ್ತು.

ಕನ್ನಡವೂ ಸೇರಿದಂತೆ ನೆಲದ ಹಲವು ಭಾಷೆಗಳು ಸರ್ಕಾರದ ಅಸಡ್ಡೆಯಿಂದ ಎದುರಿಸುತ್ತಿರುವ ಅಪಾಯಗಳ ಕುರಿತು ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅವರು ದಿನದ ಮೊದಲ ಗೋಷ್ಠಿಯಲ್ಲೇ ಬೆಳಕು ಚೆಲ್ಲುವ ಮೂಲಕ ಚರ್ಚೆಗೆ ವೇದಿಕೆ ಹದಗೊಳಿಸಿದರು.

ಬಹುಭಾಷೆಗಳ ನೆಲೆಗಟ್ಟನ್ನು ಉಳಿಸಿಕೊಳ್ಳುವಲ್ಲಿ ಕನ್ನಡಿಗರ ಸ್ವಭಾವ ಹೇಗೆ ಕೆಲಸ ಮಾಡಿತು ಎಂಬುದನ್ನು ವಿದ್ವಾಂಸರಾದ ಶಕೀರಾ ಜಬೀನ್‌ ಬಿ. ಅವರು ವಿಶ್ಲೇಷಿಸಿದರು.

‘ಮೈಸೂರು ಸಂಸ್ಥಾನ ಬಹು ಭಾಷೆಗಳ ನೆಲೆಗೆ ತಳಹದಿ ನಿರ್ಮಿಸಿತ್ತು. ಆಲೂರು ವೆಂಕಟರಾಯರು ಪ್ರತಿಪಾದಿಸಿದ ಕನ್ನಡತ್ವ, ಬಿಎಂಶ್ರೀ ಪ್ರತಿಪಾದಿಸಿದ ಕನ್ನಡತನದ ಜೊತೆ ಇತರ ಭಾಷೆಗಳ ಸಹಬಾಳ್ವೆಯ ಮಹತ್ವ ಸಾರಿದ್ದವು. ‘ಎಲ್ಲೇ ಇದ್ದರೂ ಕನ್ನಡವಾಗಿರು’ ಎನ್ನುವ ಮೂಲಕ ಕುವೆಂಪು ಕನ್ನಡತನಕ್ಕೆ ಮೇರೆಗಳಿಲ್ಲ ಎಂದರು. ಬಹುಭಾಷೆಗಳಿದ್ದರೂ ಕನ್ನಡ ಆಡಳಿತಕ್ಕೆ ಒಂದೇ ಭಾಷೆ ಬಳಸುವುದು ಸರಿಯಲ್ಲ’ ಎಂದರು.

ಅಳಿವಿನಂಚಿನಲ್ಲಿರುವ ಸ್ಥಳೀಯ ಭಾಷೆಗಳ ಲಿಪಿಗಳನ್ನು ಉಳಿಸುವ ಮಹತ್ವದ ಬಗ್ಗೆ ಸಾಹಿತಿ ವಿವೇಕ ಶಾನಭಾಗ ಪ್ರತಿಪಾದಿಸಿದರು.

ಕೊಡವ ಭಾಷೆಯ ವಿಭಿನ್ನ ಸಂಸ್ಕೃತಿಯನ್ನು ಲೇಖಕಿ ಕಾವೇರಿ ಪೊನ್ನ‍ಪ್ಪ ಬಿಚ್ಚಿಟ್ಟರು. ತುಳುವನ್ನು ಉಳಿಸಲು ಆಗುತ್ತಿರುವ ಕೆಲಸಗಳ ಬಗ್ಗೆ ನಿಟ್ಟೆ ವಿಶ್ವವಿದ್ಯಾಲಯದ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥೆ ಸಾಯಿಗೀತಾ ಹೆಗ್ಡೆ ವಿವರಿಸಿದರು.

ಸಾಮಾಜಿಕ ತಾರತಮ್ಯವು ಕೊರಗ ಭಾಷೆಯ ಅವನತಿಗೆ ಹೇಗೆ ಕಾರಣವಾಗಿದೆ ಎಂಬುದನ್ನು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸದಸ್ಯ ಶ್ರೀಧರ ನಾಡ ಎಳೆ ಎಳೆಯಾಗಿ ಬಿಚ್ಚಿಟ್ಟರು.

ವೈರಾಣುಗಳ ನಿಗೂಢ ವಿಕಸನಗಳ ಮರ್ಮಗಳನ್ನು ವಿಜ್ಞಾನ ಲೇಖಕ ಪ್ರಣಯ್‌ ಲಾಲ್‌ ಹಂಚಿಕೊಂಡರು. ದೇಶದ ರಾಜಕೀಯ ಬೆಳವಣಿಗೆಗಳಿಂದ ಎದುರಾಗಿರುವ ತಲ್ಲಣಗಳನ್ನು ಆಕಾರ್‌ ಪಟೇಲ್‌ ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT