ತೆರಿಗೆ ಸಂಗ್ರಹ ಹೊರಗುತ್ತಿಗೆ ಚಿಂತನೆ: ಮೇಯರ್‌ ಗಂಗಾಂಬಿಕೆ ಚಿಂತನೆ

7
ಸಂದರ್ಶನ

ತೆರಿಗೆ ಸಂಗ್ರಹ ಹೊರಗುತ್ತಿಗೆ ಚಿಂತನೆ: ಮೇಯರ್‌ ಗಂಗಾಂಬಿಕೆ ಚಿಂತನೆ

Published:
Updated:

ಬೆಂಗಳೂರು: ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಿದ ಗಂಗಾಂಬಿಕೆ ಅವರಿಗೆ ಮೇಯರ್‌ ಆಗುವ ಅದೃಷ್ಟವೂ ಒಲಿದಿದೆ. ಎಂಟು ವರ್ಷಗಳ ರಾಜಕೀಯ ಅನುಭವ ಹೊಂದಿರುವ ಅವರು ಬಿಬಿಎಂಪಿ ಆಡಳಿತಕ್ಕೆ ಚುರುಕು ಮುಟ್ಟಿಸುವ ಮೂಲಕ, ಈ ಸಂಸ್ಥೆ ಜನರಿಗೆ ಇನ್ನಷ್ಟು ಹತ್ತರವಾಗುವಂತೆ ಮಾಡಬೇಕು ಎಂಬ ಕನಸನ್ನು ಹೊಂದಿದ್ದಾರೆ. ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲೂ ಚಿಂತನೆ ನಡೆಸಿದ್ದಾರೆ.

ನಗರದ ಪ್ರಥಮ ಪ್ರಜೆಯಾಗಿ ಮುಂದಿನ ಹಾದಿಯ ಸಮಸ್ಯೆ ಹಾಗೂ ಸವಾಲುಗಳ ಕುರಿತು ತಮ್ಮ ಮನದಾಳವನ್ನು ಮೇಯರ್‌ ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

* ನಿಮ್ಮ ರಾಜಕೀಯ ಪ್ರವೇಶ ಹೇಗಾಯಿತು?

ರಾಜಕಾರಣಿ ಆಗುತ್ತೇನೆ ಎಂದು ನಾನು ಊಹಿಸಿಯೇ ಇರಲಿಲ್ಲ. ಹಿಂದಿನಿಂದಲೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ನನ್ನ ಪತಿ ಮಲ್ಲಿಕಾರ್ಜುನ ಅವರು ವಾರ್ಡ್‌ ನಿವಾಸಿಗಳ ಜೊತೆಗೂ ಉತ್ತಮ ಸಂಪರ್ಕವಿಟ್ಟುಕೊಂಡಿದ್ದರು. ಅವರ ಸಾಮಾಜಿಕ ಕೆಲಸಗಳಲ್ಲಿ ನಾನೂ ಕೈಜೋಡಿಸುತ್ತಿದ್ದೆ. 2010ರ ಪಾಲಿಕೆ ಚುನಾವಣೆ ವೇಳೆ ಜಯನಗರ ವಾರ್ಡ್‌ (153) ಮೀಸಲಾತಿ ಬದಲಾಯಿತು. ಜನಪ್ರತಿನಿಧಿಯಾದರೆ ಜನರ ಕೆಲಸವನ್ನು ಮಾಡಲು ಹೆಚ್ಚು ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಸಾಮಾನ್ಯವರ್ಗದ ಮಹಿಳೆಗೆ ಮೀಸಲಾಗಿದ್ದ ಈ ವಾರ್ಡ್‌ನಲ್ಲಿ ನಾನು ಮೊದಲ ಪ್ರಯತ್ನದಲ್ಲೇ ಚುನಾವಣೆ ಗೆದ್ದೆ. 2015ರಲ್ಲಿ ಮತ್ತೆ ಗೆದ್ದೆ.

* ಬಿಬಿಎಂಪಿ ವೈಫಲ್ಯಗಳ ಕಾರಣಕ್ಕೇ ಸುದ್ದಿಯಾಗುತ್ತಿದೆ. ಆಡಳಿತ ಸುಧಾರಣೆಗೇನಾದರೂ ನಿಮ್ಮ ಬಳಿ ಮಂತ್ರದಂಡವಿದೆಯೇ?

ಬಿಬಿಎಂಪಿಯನ್ನು ಮೂರು ವಿಭಾಗ ಮಾಡಿದರೆ ಇಲ್ಲಿನ ಆಡಳಿತ ಸುಧಾರಣೆ ಸಾಧ್ಯ ಎಂಬ ಭಾವನೆ ಸರಿ ಅಲ್ಲ. ಈಗಿರುವ ವ್ಯವಸ್ಥೆಯಲ್ಲೇ ಉತ್ತಮ ಆಡಳಿತ ನೀಡಲು ಸಾಧ್ಯವಿದೆ. ಪ್ರತಿ ವಲಯದಲ್ಲೂ ಒಬ್ಬ ಜಂಟಿ ಆಯುಕ್ತ, ಒಬ್ಬ ಮುಖ್ಯ ಎಂಜಿನಿಯರ್‌ ಇದ್ದಾರೆ. ಅವರಿಗೆ ಬೆಂಬಲವಾಗಿ ತಳಹಂತದ ಅಧಿಕಾರಿಗಳ ತಂಡವಿದೆ. ಅವರನ್ನು ಸಮರ್ಥವಾಗಿ ಬಳಸಿಕೊಂಡರೆ ಏನೇ ಸಮಸ್ಯೆ ಎದುರಾದರೂ ಸಮರ್ಥವಾಗಿ ನಿಭಾಯಿಸಬಹುದು. ಆದರೆ ಖಡಕ್‌ ನಿರ್ಧಾರ ತಳೆಯಬೇಕು ಅಷ್ಟೇ.

* ಬಿಬಿಎಂಪಿ ದಿವಾಳಿ ಹಂತಕ್ಕೆ ಬಂದಿದೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಸವಾಲಾಗಿದೆ. ಇದನ್ನು ಹೇಗೆ ನಿಭಾಯಿಸುತ್ತೀರಿ?

ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಹೊರಗುತ್ತಿಗೆಗೆ ನೀಡಿದರೆ ಹೆಚ್ಚು ವರಮಾನ ಬರಬಹುದೇ ಎಂಬ ನಿಟ್ಟಿನಲ್ಲಿ ಆಲೋಚಿಸುತ್ತಿದ್ದೇನೆ. ಈ ಬಗ್ಗೆ ಆಯುಕ್ತರು ಹಾಗೂ ತಜ್ಞರ ಸಲಹೆ ಪಡೆದು ಮುಂದುವರಿಯುತ್ತೇನೆ. ವರಮಾನ ಸೋರಿಕೆ ತಡೆಗಟ್ಟಿದರೆ ಪಾಲಿಕೆಯ ಆರ್ಥಿಕ ಪರಿಸ್ಥಿತಿ ಖಂಡಿತಾ ಸುಧಾರಣೆ ಆಗಲಿದೆ.

* ಕಾಮಗಾರಿಗಳ ಗುಣಮಟ್ಟದ ಬಗ್ಗೆ ಟೀಕೆಗಳು ಬರುತ್ತಿವೆ. ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಪಾಲಿಕೆ ಕಾರ್ಯವೈಖರಿಯನ್ನು ಹೈಕೋರ್ಟ್‌ ಸಹ ಟೀಕಿಸುವಂತಾಯಿತಲ್ಲ?

ಗುತ್ತಿಗೆದಾರರಿಗೆ ಕೆಲಸ ವಹಿಸುವಾಗಲೇ ಆ ಕಾಮಗಾರಿ ಗುಣಮಟ್ಟದ ಹೇಗಿರಬೇಕು ಎಂಬುದನ್ನು ಕರಾರಿನಲ್ಲಿ ವಿವರವಾಗಿ ತಿಳಿಸಲಾಗುತ್ತದೆ. ಉದಾಹರಣೆಗೆ, ರಸ್ತೆ ನಿರ್ಮಿಸುವಾಗ ಯಾವ ಗುಣಮಟ್ಟದ ಡಾಂಬರು ಬಳಸಬೇಕು, ಎಷ್ಟು ದಪ್ಪ ಹಾಕಬೇಕು, ಅದರ ಮಿಶ್ರಣ ಹೇಗಿರಬೇಕು ಎಂಬೆಲ್ಲ ಅಂಶಗಳು ಗುತ್ತಿಗೆ ಕರಾರಿನಲ್ಲಿರುತ್ತವೆ. ಅದರ ಪ್ರಕಾರವೇ ಕೆಲಸ ನಡೆಯುತ್ತಿದೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಈ ವಿಚಾರದಲ್ಲಿ ಚುರುಕು ಮುಟ್ಟಿಸುವ ಅಗತ್ಯವಿದ್ದು, ಜನರ ಸಹಭಾಗಿತ್ವವೂ ಮುಖ್ಯ. ಕೆಲವು ಪ್ರದೇಶಗಳಲ್ಲಿ  ಸ್ಥಳೀಯರು ಕಾಮಗಾರಿ ಮೇಲೆ ನಿಗಾ ಇಡುತ್ತಿದ್ದಾರೆ. ಇದು ಎಲ್ಲ ಕಡೆ ನಡೆಯಬೇಕು.

ಆದರೆ, ಕೆಲವೊಂದು ಸಂದರ್ಭಗಳಲ್ಲಿ ಪರಿಸ್ಥಿತಿ ನಮ್ಮ ಕೈಯಲ್ಲಿ ಇರುವುದಿಲ್ಲ. ವಿಪರೀತ ಮಳೆ ಬಂದಾಗ ರಸ್ತೆ ಹದಗೆಡುವುದು ಸಹಜ. ಸೂರ್ಯ ಚಂದ್ರರು ಇರುವವರೆಗೂ ಸಮಸ್ಯೆಗಳು ಇರುತ್ತವೆ. ಆದರೆ, ಅದನ್ನು ಸಮರ್ಥವಾಗಿ ನಿರ್ವಹಿಸುವ ಚಾಕಚಕ್ಯತೆ ನಮ್ಮಲ್ಲಿರಬೇಕು.

* ರಸ್ತೆ ಇತಿಹಾಸವನ್ನು ಜನರಿಗೆ ಸುಲಭವಾಗಿ ಸಿಗುವಂತೆ ಮಾಡಬಹುದಲ್ಲವೇ? 

ಈಗಾಗಲೇ ನಗರದ ಪ್ರಮುಖ ರಸ್ತೆಗಳ ಇತಿಹಾಸವನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ (http://bbmp.gov.in) ಪ್ರಕಟಿಸಲಾಗಿದೆ. ಆಸಕ್ತರು ಅದನ್ನು ಪರಿಶೀಲಿಸಬಹುದು. 

* ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚುತ್ತಿರುವುದರ ವಿರುದ್ಧ ಕೂಗೆದ್ದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ವಸತಿ ಪ್ರದೇಶದಲ್ಲಿ ಜನರಿಗೂ ಉಪಯೋಗ ಆಗುವಂತಹ ಹಾಲಿನ ಅಂಗಡಿ, ದಿನಸಿ ಅಂಗಡಿ, ಮಾಂಟೆಸ್ಸರಿ ಮುಂತಾದವುಗಳಿಗೆ ಅನುಮತಿ ನೀಡುವುದರಿಂದ ಜನರಿಗೂ ಉಪಯೋಗವಾಗುತ್ತದೆ. ಜನರ ಆಕ್ಷೇಪ ಇಲ್ಲದಿದ್ದರೆ ಇಂತಹ ಚಟುವಟಿಕೆ ಮುಂದುವರಿಸಬಹುದು. ಪಬ್‌, ಬಾರ್‌ಗಳ ಸಂಖ್ಯೆ ಹೆಚ್ಚಳವಾದ ಬಗ್ಗೆ ಇಂದಿರಾನಗರದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಇಂಥವುಗಳಿಗೆ ಅನುಮತಿ ನೀಡುವ ಮುನ್ನ ಸ್ಥಳೀಯರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಆಗ ಸಮಸ್ಯೆ ತನ್ನಿಂದ ತಾನೆ ಬಗೆಹರಿಯುತ್ತದೆ.

* ವಾರ್ಡ್‌ ಸಮಿತಿ ಬಲಪಡಿಸುವ ಹಾಗೂ ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸುವ ಕುರಿತು ನಿಮ್ಮ ಅಭಿಪ್ರಾಯ?

ವಾರ್ಡ್‌ ಸಮಿತಿಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ? ಅಧಿಕಾರಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ಅವರಿಗೆ ಸಹಕಾರ ಸಿಗುತ್ತಿದೆಯೇ? ಅಭಿವೃದ್ಧಿ ಕಾರ್ಯದ ಉಸ್ತುವಾರಿಯಲ್ಲಿ ಸಮಿತಿಗಳು ಸಕ್ರಿಯವಾಗಿವೆಯೇ ಎಂಬುದನ್ನು ತಿಳಿದುಕೊಂಡು ನಂತರ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ.

* ರಸ್ತೆಯಲ್ಲೇ ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಇದಕ್ಕೆ ಪ್ರತ್ಯೇಕ ತೆರಿಗೆ ವಿಧಿಸಿ ಇದಕ್ಕೆ ಕಡಿವಾಣ ಹಾಕುವ ಪ್ರಸ್ತಾಪವಿತ್ತು. ಇದನ್ನು ಜಾರಿಗೊಳಿಸುವಿರಾ?

ಜನ ಅವರ ಮನೆಯ ಕಾಂಪೌಂಡ್‌ ಒಳಗೆ ಎಷ್ಟು ಕಾರನ್ನು ಬೇಕಿದ್ದರೂ ನಿಲ್ಲಿಸಲಿ. ಆದರೆ, ರಸ್ತೆಯಲ್ಲಿ ಪಾರ್ಕ್‌ ಮಾಡಬಾರದು ಅಷ್ಟೆ. ಈಗ ಒಂದೊಂದು ಮನೆಯಲ್ಲೂ ಎರಡು ಮೂರು ಕಾರುಗಳಿವೆ. ರಸ್ತೆಯಲ್ಲಿ ಕಾರು ನಿಲ್ಲಿಸಿದರೆ, ಅದಕ್ಕೆ ಪ್ರತ್ಯೇಕ ತೆರಿಗೆ ವಿಧಿಸಿದರೆ ಜನ ಒಪ್ಪುತ್ತಾರಾ ಎಂಬುದು ಪ್ರಶ್ನೆ. ಈ ಬಗ್ಗೆ ಆಯುಕ್ತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ.

* ರಾಜಕಾಲುವೆ ಒತ್ತುವರಿ ತೆರವು ನಿಮ್ಮ ಅವಧಿಯಲ್ಲಾದರೂ ಪೂರ್ಣಗೊಳ್ಳುತ್ತದೆಯೇ?

ನಾನು ಆಯುಕ್ತರ ಜೊತೆ ಹಾಗೂ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಿದ್ದೇನೆ. ‘ಸರ್ವೆ ವರದಿ ಇನ್ನೂ ಪಾಲಿಕೆ ಕೈಸೇರಿಲ್ಲ. ಅದು ಕೈಸೇರಿದ ತಕ್ಷಣವೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ’ ಎಂದು ಅವರು ಭರವಸೆ ನೀಡಿದ್ದಾರೆ.

ಮೇಯರ್‌ಗೆ ನಿಮ್ಮ ಅಹವಾಲು ಏನು?

ನೂತನ ಮೇಯರ್‌ ಗಂಗಾಂಬಿಕೆ ಅವರೇನೋ ನಗರದ ಅಭಿವೃದ್ಧಿ ಕುರಿತಂತೆ ತಮ್ಮ ಕನಸುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನಲಗುತ್ತಿರುವ ನಗರವನ್ನು ಅವುಗಳಿಂದ ಬಿಡಿಸುವ ಬಗೆ ಹೇಗೆ? ಅವರ ಆದ್ಯತೆಯ ಕೆಲಸಗಳು ಏನಾಗಿರಬೇಕು? ನಿಮ್ಮ ಸಲಹೆಗಳನ್ನು ಹಂಚಿಕೊಳ್ಳುವ ಮೂಲಕ ಮೇಯರ್‌ ಅವರಿಗೊಂದು ಕಾರ್ಯಸೂಚಿ ಸಿದ್ಧಪಡಿಸುವ ಕಾರ್ಯದಲ್ಲಿ ಭಾಗಿಯಾಗಿ. ನಿಮ್ಮ ಸಲಹೆಗಳನ್ನು (ಹೆಸರು, ಭಾವಚಿತ್ರ ಸಹಿತ) ಕಳುಹಿಸಬೇಕಾದ ವಾಟ್ಸ್‌ ಆ್ಯಪ್‌ ಸಂಖ್ಯೆ: 95133 22930

Tags: 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !