ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್‌ರೈಸರ್ಸ್ ವಿರುದ್ಧ ಡೇರ್‌ ಡೆವಿಲ್ಸ್‌ಗೆ ಜಯದ ಕನಸು

ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಮತ್ತು ಕೊನೆಯ ಸ್ಥಾನದಲ್ಲಿರುವ ತಂಡಗಳ ಹಣಾಹಣಿ
Last Updated 9 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಪಾಯಿಂಟ್‌ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೊನೆಯಲ್ಲಿರುವ ಡೆಲ್ಲಿ ಡೇರ್‌ ಡೆವಿಲ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟೂರ್ನಿಯಲ್ಲಿ ಗುರುವಾರ ಮುಖಾಮುಖಿ ಆಗಲಿವೆ.

10 ಪಂದ್ಯಗಳಲ್ಲಿ ಕೇವಲ ಮೂರನ್ನು ಮಾತ್ರ ಗೆದ್ದಿರುವ ಡೇರ್‌ ಡೆವಿಲ್ಸ್ ನಿರಂತರ ತಪ್ಪುಗಳನ್ನು ಮಾಡುತ್ತ ಬಂದಿದೆ. ಅವುಗಳನ್ನು ತಿದ್ದಿಕೊಂಡು ಮುನ್ನಡೆಯಲು ಗುರುವಾರ ಕೊನೆಯ ಅವಕಾಶ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಮುಂದಿನ ಹಂತದ ಕನಸು ಕಾಣುವ ಆಸೆ ಜೀವಂತವಾಗಿ ಉಳಿಯಲಿದೆ.

ಗೌತಮ್‌ ಗಂಭೀರ್ ನಾಯಕತ್ವದಲ್ಲಿ ನಿರಂತರ ಸೋಲಿನಿಂದ ಕಂಗೆಟ್ಟಿದ್ದ ಡೆಲ್ಲಿ ತಂಡ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿದ ನಂತರ ಗೆಲುವಿನ ಹಳಿಗೆ ಮರಳಿತ್ತು. ಆದರೆ ಕಳೆದ ಐದು ಪಂದ್ಯಗಳ ಪೈಕಿ ಎರಡನ್ನಷ್ಟೇ ಗೆಲ್ಲಲು ತಂಡಕ್ಕೆ ಸಾಧ್ಯವಾಗಿದೆ. ಮೇ ಐದರಂದು ಹೈದರಾಬಾದ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಈ ತಂಡವನ್ನು ಆತಿಥೇಯ ಸನ್‌ರೈಸರ್ಸ್‌ ಏಳು ವಿಕೆಟ್‌ಗಳಿಂದ ಮಣಿಸಿತ್ತು.

ಪೃಥ್ವಿ ಶಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆ ಪಂದ್ಯದಲ್ಲಿ 163 ರನ್‌ ಗಳಿಸಿದ್ದ ಡೆಲ್ಲಿ ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ತಲುಪಿತ್ತು. ಆದರೆ ಕೊನೆಯ ಎರಡು ಓವರ್‌ಗಳಲ್ಲಿ 28 ರನ್‌ ಗಳಿಸದಂತೆ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಅಲೆಕ್ಸ್‌ ಹೇಲ್ಸ್ ಮತ್ತು ಯೂಸುಫ್ ಪಠಾಣ್ ಅವರ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಕೂಡ ಡೆಲ್ಲಿಗೆ ಮಾರಕವಾಗಿ ಪರಿಣಮಿಸಿತ್ತು.

ಶ್ರೇಯಸ್ ಅಯ್ಯರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರು ಉತ್ತಮ ಸಾಮರ್ಥ್ಯ ತೋರುತ್ತಿರುವುದು ಡೆಲ್ಲಿ ತಂಡದ ಭರವಸೆಗೆ ಕಾರಣವಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ ಮತ್ತು ಆಫ್‌ ಸ್ಪಿನ್‌ ಬೌಲರ್‌ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರಿಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗದೇ ಇರುವುದು ತಂಡದ ಬೇಸರಕ್ಕೆ ಕಾರಣವಾಗಿದೆ. ತಂಡದ ವೇಗಿಗಳು ಪರಿಣಾಮ ಬೀರುತ್ತಿಲ್ಲ. ಹೀಗಾಗಿ ಬೌಲಿಂಗ್ ವಿಭಾಗದ ಭಾರ ಲೆಗ್ ಸ್ಪಿನ್ನರ್‌ ಅಮಿತ್‌ ಮಿಶ್ರಾ ಅವರ ಹೆಗಲ ಮೇಲೆ ಬಿದ್ದಿದೆ.

ಸನ್‌ರೈಸರ್ಸ್ ನಿರಾಳ: 10 ಪಂದ್ಯಗಳಿಂದ 16 ಪಾಯಿಂಟ್ ಗಳಿಸಿರುವ ಸನ್‌ರೈಸರ್ಸ್ ನಿರಾಳವಾಗಿದೆ. ಯಾವುದೇ ತಂಡವನ್ನು ಎಂಥ ಪರಿಸ್ಥಿತಿಯಲ್ಲೂ ಸೋಲಿಸುವ ಸಾಮರ್ಥ್ಯ ಹೊಂದಿರುವ ಈ ತಂಡ ಮುಂದಿನ ಪಂದ್ಯದಲ್ಲೂ ಗೆಲ್ಲುವ ಭರವಸೆಯಲ್ಲಿದೆ. ಅಲೆಕ್ಸ್ ಹೇಲ್ಸ್ ಲಭಿಸಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 78 ಮತ್ತು 45 ರನ್‌ ಗಳಿಸಿದ ಶಿಖರ್ ಧವನ್‌ ನಂತರ ಹೆಚ್ಚು ಮಿಂಚಲಿಲ್ಲ. ನಾಯಕ ಕೇನ್ ವಿಲಿಯಮ್ಸನ್‌ ನಿರಂತರವಾಗಿ ಉತ್ತಮ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ತಂಡದ ಬೌಲಿಂಗ್ ವಿಭಾಗ ಗಮನಾರ್ಹ ಸಾಧನೆ ಮಾಡುತ್ತಿದ್ದು ಕ್ರಿಕೆಟ್ ಪ್ರಿಯರ ಪ್ರಶಂಸೆಗೆ ಪಾತ್ರವಾಗಿದೆ.

ಪಂದ್ಯ ಆರಂಭ: ರಾತ್ರಿ 8.00
ನೇರ ‍ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT