ಜ್ಞಾನಜ್ಯೋತಿ ಸಭಾಂಗಣ ಬಳಕೆಗೆ ಸಮಿತಿ

7
ಪರಿಶೀಲನೆ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತೀರ್ಮಾನ

ಜ್ಞಾನಜ್ಯೋತಿ ಸಭಾಂಗಣ ಬಳಕೆಗೆ ಸಮಿತಿ

Published:
Updated:

ಬೆಂಗಳೂರು: ಜ್ಞಾನಜ್ಯೋತಿ ಸಭಾಂಗಣ ತಮಗೆ ಸೇರಬೇಕೆಂದು ಕಿತ್ತಾಡುತ್ತಿದ್ದ ಮೂರು ವಿಶ್ವವಿದ್ಯಾಲಯಗಳನ್ನು ಸಮಾಧಾನ ಪಡಿಸಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಅದರ ಜವಾಬ್ದಾರಿಯನ್ನು ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ, ಕೇಂದ್ರ ಮತ್ತು ಉತ್ತರ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರು, ಮೌಲ್ಯಮಾಪನ ಕುಲಸಚಿವರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಸಚಿವರು ಈ ತೀರ್ಮಾನ ಪ್ರಕಟಿಸಿದರು.

‘ಮೂರು ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಕುಲಸಚಿವರನ್ನು ಒಳಗೊಂಡ ಸಮಿತಿ, ಸಭಾಂಗಣದ ಜವಾಬ್ದಾರಿಯನ್ನು ನೋಡಿಕೊಳ್ಳಲಿದೆ. ಮೂರು ವಿಶ್ವವಿದ್ಯಾಲಯಗಳು ಅದನ್ನು ಬಳಕೆ ಮಾಡಿಕೊಳ್ಳಬಹುದು. ನಿರ್ವಹಣೆ ವೆಚ್ಚ ಹಾಗೂ ಅದರಿಂದ ಬರುವ ಆದಾಯವನ್ನು ಮೂರು ವಿಶ್ವವಿದ್ಯಾಲಯಗಳು ಸಮನಾಗಿ ಹಂಚಿಕೊಳ್ಳಬೇಕು’ ಎಂದು ತಿಳಿಸಿದರು.

‘ಮೌಲ್ಯಮಾಪನ ಕಟ್ಟಡದ ನೆಲಮಹಡಿಯನ್ನು ಕೇಂದ್ರ ಮತ್ತು ಉತ್ತರ ವಿಶ್ವವಿದ್ಯಾಲಯ, ಮೊದಲ ಮಹಡಿಯನ್ನು ಮೂಲ ಬೆಂಗಳೂರು ವಿಶ್ವವಿದ್ಯಾಲಯ ಬಳಸಿಕೊಳ್ಳಲಿ’ ಎಂದು ಸಚಿವರು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್, ‘ಆರು ಜನರ ಸಮಿತಿಯಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಅಧ್ಯಕ್ಷರಾಗಿರುತ್ತಾರೆ. ನಮ್ಮ ವಿಶ್ವವಿದ್ಯಾಲಯ ಮತ್ತು ಉತ್ತರ ವಿಶ್ವವಿದ್ಯಾಲಯ ಪ್ರತ್ಯೇಕ ಸಭಾಂಗಣ ನಿರ್ಮಿಸಿಕೊಳ್ಳುವವರೆಗೂ ಅದರ ಮಾಲೀಕತ್ವ ಮೂರೂ ವಿಶ್ವವಿದ್ಯಾಲಯಗಳಿಗೂ ಸೇರುತ್ತದೆ’ ಎಂದು ವಿವರಿಸಿದರು.

‘ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಸೇರಿದ ಕೆಲವು ಕಟ್ಟಡಗಳನ್ನು ನಾವು ಬಳಕೆ ಮಾಡಿಕೊಳ್ಳುತ್ತೇವೆ. ಇದಕ್ಕೆ ಸಹಕರಿಸುವುದಾಗಿ ಕೇಂದ್ರ ವಿಶ್ವವಿದ್ಯಾಲಯದ ಸಚಿವರ ಎದುರು ಒಪ್ಪಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಆಸ್ತಿ ವ್ಯಾಜ್ಯವನ್ನು ನನ್ನ ಬಳಿ ತರಬೇಡಿ’: ‘ವಿಶ್ವವಿದ್ಯಾಲಯ ವಿಭಜನೆ ವೇಳೆ ಮಾಡಿಕೊಂಡ ಒಪ್ಪಂದಕ್ಕೆ ಎಲ್ಲರೂ ಬದ್ಧರಾಗಿರಿ. ಏನೇ ಸಮಸ್ಯೆಗಳಿದ್ದರೂ ನಿಮ್ಮೊಳಗೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಬೆಂಗಳೂರು ವಿಶ್ವವಿದ್ಯಾಲಯ ಹೊಸದಾಗಿ ರಚನೆಗೊಂಡಿರುವ ವಿಶ್ವವಿದ್ಯಾಲಯಗಳಿಗೆ ಸಹಾಯ ಮಾಡಲಿ. ಮುಂದಿನ ದಿನಗಳಲ್ಲಿ ಆಸ್ತಿ ಕುರಿತ ಯಾವುದೇ ವ್ಯಾಜ್ಯವನ್ನು ನನ್ನ ಬಳಿ ತರಬೇಡಿ’ ಎಂದು ಸಚಿವರು ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !