ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5.62 ಕೋಟಿ ಸಾಲ ಮಂಜೂರು ಪ್ರಕರಣ: ಆನ್‌ಲೈನ್ ಗೆಳತಿ ಬೆನ್ನುಬಿದ್ದ ಪೊಲೀಸರು

₹5.62 ಕೋಟಿ ವಂಚನೆ ಪ್ರಕರಣ l ಬ್ಯಾಂಕ್ ವ್ಯವಸ್ಥಾಪಕ ಪೊಲೀಸ್ ಕಸ್ಟಡಿಗೆ
Last Updated 24 ಜೂನ್ 2022, 20:42 IST
ಅಕ್ಷರ ಗಾತ್ರ

ಬೆಂಗಳೂರು: ಠೇವಣಿದಾರರ ಗಮನಕ್ಕೆ ಬಾರದಂತೆ ಅವರ ಹೆಸರಿನಲ್ಲಿ ₹ 5.62 ಕೋಟಿ ಸಾಲ ಮಂಜೂರು ಮಾಡಿಸಿಕೊಂಡು ವಂಚಿಸಿದ್ದ ಪ್ರಕರಣದಲ್ಲಿ ಬಂಧಿಸಿರುವ ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕ ಹರಿಶಂಕರ್, ಎಲ್ಲ ಹಣವನ್ನು ತಮ್ಮ ಆನ್‌ಲೈನ್ ಗೆಳತಿಗೆ ನೀಡಿರುವ ಸಂಗತಿ ತನಿಖೆಯಿಂದ ಗೊತ್ತಾಗಿದೆ.

‘ಹನುಮಂತನಗರ ಶಾಖೆ ವ್ಯವಸ್ಥಾಪಕ ಹರಿಶಂಕರ್ ಅವರನ್ನು ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು 10 ದಿನಗಳವರೆಗೆ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಡೇಟಿಂಗ್ ಆ್ಯಪ್‌ವೊಂದರಲ್ಲಿಖಾತೆ ತೆರೆದಿದ್ದ ಹರಿಶಂಕರ್, ತಮ್ಮ ಫೋಟೊ ಹಾಗೂ ವೈಯಕ್ತಿಕ ವಿವರ ಗಳನ್ನು ಪೋಸ್ಟ್ ಮಾಡಿದ್ದರು. ಅದನ್ನು ಗಮನಿಸಿದ್ದ ಯುವತಿಯೊಬ್ಬಳು ರಿಕ್ವೆಸ್ಟ್ ಕಳುಹಿಸಿದ್ದಳು. ತನ್ನ ಹೆಸರು ಪ್ರಿಯಾಂಕಾ ಎಂಬುದಾಗಿ ಹೇಳಿ ಪರಿಚಯಿಸಿಕೊಂಡಿದ್ದಳು.’

‘ಹರಿಶಂಕರ್ ಅವರನ್ನು ಲೈಂಗಿಕ ವಾಗಿ ಪ್ರಚೋದಿಸುವ ರೀತಿಯಲ್ಲಿ ಯುವತಿ ಸಂದೇಶ ಕಳುಹಿಸುತ್ತಿದ್ದಳು. ಹರಿಶಂಕರ್ ಸಹ ಆಕೆಯ ಜೊತೆ ನಿತ್ಯವೂ ಚಾಟಿಂಗ್ ಮಾಡುತ್ತಿದ್ದರು. ಪರಸ್ಪರ ಭೇಟಿ ಬಗ್ಗೆಯೂ ಇಬ್ಬರೂ ಚರ್ಚಿಸಿದ್ದರು.

ಆರ್ಥಿಕ ತೊಂದರೆ ನೆಪದಲ್ಲಿ ₹12 ಲಕ್ಷ: ‘ತನಗೆ ಆರ್ಥಿಕ ತೊಂದರೆ ಇರುವುದಾಗಿ ಹೇಳಿದ್ದ ಯುವತಿ, ಎಲ್ಲಾದರೂ ಸಾಲ ಕೊಡಿಸುವಂತೆ ಹರಿಶಂಕರ್ ಅವರನ್ನು ಕೋರಿದ್ದರು. ಸಲುಗೆ ಮಾತುಗಳಿಂದ ಪ್ರಚೋದನೆಗೆ ಒಳಗಾಗಿದ್ದ ಹರಿಶಂಕರ್, ಆಕೆ ಹೇಳಿದ್ದ ಬ್ಯಾಂಕ್ ಖಾತೆಗೆ ₹12 ಲಕ್ಷ ಹಾಕಿಸಿಕೊಂಡಿದ್ದಳು. ₹12 ಲಕ್ಷ ಸಾಲುವುದಿಲ್ಲವೆಂದು ಹೇಳಿದ್ದ ಯುವತಿ, ಮತ್ತಷ್ಟು ಹಣ ನೀಡುವಂತೆ ಕೋರಿದ್ದಳು. ಆಗಲೇ ಹರಿಶಂಕರ್, ತಮ್ಮ ಇಂಡಿಯನ್ ಬ್ಯಾಂಕ್‌ನ ಠೇವಣಿದಾರರೊಬ್ಬರ ಹೆಸರಿನಲ್ಲಿ ಹಂತ ಹಂತವಾಗಿ ₹5.62 ಕೋಟಿ ಸಾಲ ಪಡೆದು ಯುವತಿಗೆ ನೀಡಿದ್ದರು. ಇದಕ್ಕಾಗಿ ಸಹಾಯಕ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸಹಾಯ ಪಡೆದಿದ್ದರು’ ಎಂದು ತಿಳಿಸಿದರು.

‘ಯುವತಿಗೆ ಹಣ ನೀಡಿದ್ದ ಸಂಗತಿಯನ್ನು ಆರೋಪಿ ಯಾರಿಗೂ ಹೇಳಿರಲಿಲ್ಲ. ಇತ್ತೀಚೆಗೆ ಬ್ಯಾಂಕ್ ಲೆಕ್ಕ ತಪಾಸಣೆ ವೇಳೆ, ಠೇವಣಿದಾರರ ಹೆಸರಿನಲ್ಲಿ ವ್ಯವಸ್ಥಾಪಕ ಹರಿಶಂಕರ್ ಸಾಲ ಮಂಜೂರು ಮಾಡಿಸಿಕೊಂಡಿದ್ದ ಮಾಹಿತಿ ಪತ್ತೆಯಾಗಿತ್ತು. ಇಂಡಿಯನ್ ಬ್ಯಾಂಕ್ ವಲಯ ಪ್ರಬಂಧಕ ಡಿ.ಎಸ್. ಮೂರ್ತಿ ಅವರು ಹರಿಶಂಕರ್ ಹಾಗೂ ಇತರರ ಮೇಲೆ ದೂರು ನೀಡಿದ್ದರು. ಇದೀಗ, ಆನ್‌ಲೈನ್ ಗೆಳತಿ ಪ್ರಿಯಾಂಕಾ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ಆಕೆಗಾಗಿ ಶೋಧ ಮುಂದುವರಿದಿದೆ’ ಎಂದೂ ಹೇಳಿದರು.

'36 ಖಾತೆಗಳಿಗೆ ಹಣ ವರ್ಗಾವಣೆ’

‘ಇಂಡಿಯನ್ ಬ್ಯಾಂಕ್‌ನ 8 ಖಾತೆಗಳು ಸೇರಿದಂತೆ ವಿವಿಧ ಬ್ಯಾಂಕ್‌ಗಳ 36 ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದು ತನಿಖೆಯಿಂದ ಗೊತ್ತಾಗಿದೆ. ಇವೆಲ್ಲ ಖಾತೆಗಳ ಮಾಹಿತಿಯನ್ನು ಯುವತಿ, ಹರಿಶಂಕರ್‌ಗೆ ನೀಡಿದ್ದಳು. ಆದರೆ, ಖಾತೆಗಳು ಯಾರ ಹೆಸರಿನಲ್ಲಿವೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT