ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಕಾಮಗಾರಿ ಆರಂಭಿಸಲು ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಬಿಬಿಎಂಪಿ ಮನವಿ

Published 6 ಮೇ 2024, 23:33 IST
Last Updated 6 ಮೇ 2024, 23:33 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಗಳನ್ನು ಆರಂಭಿಸಲು ಅನುಮತಿ ನೀಡಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

ಮಳೆಗಾಲ ಆರಂಭವಾಗುತ್ತಿರುವುದರಿಂದ, ಕಾರ್ಯಾದೇಶ ನೀಡಿರುವ ಹಾಗೂ ಟೆಂಡರ್‌ ಹಂತದಲ್ಲಿರುವ ಕೆಲವು ತುರ್ತು ಕಾಮಗಾರಿಗಳನ್ನು ಆರಂಭಿಸಬೇಕಾಗಿದೆ. ಆದರೆ, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜೂನ್‌ 5ರವರೆಗಿದೆ. ಅಲ್ಲಿಯವರೆಗೆ ಕಾಮಗಾರಿಗಳನ್ನು ಆರಂಭಿಸದಿದ್ದರೆ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನ ಮುಗಿದು 10 ದಿನಗಳಾಗಿವೆ. ಮಂಗಳವಾರ ಮತದಾನ ಮುಗಿದರೆ, ರಾಜ್ಯದ ಅಷ್ಟೂ ಕ್ಷೇತ್ರಗಳ ಮತದಾನ ಪೂರ್ಣಗೊಂಡಂತಾಗುತ್ತದೆ. ಹೀಗಾಗಿ, ನೀತಿ ಸಂಹಿತೆ ಅವಧಿಯಲ್ಲೂ ತುರ್ತು ಕಾಮಗಾರಿಯನ್ನು ಆರಂಭಿಸಲು ಅನುವು ಮಾಡಿಕೊಡಬೇಕೆಂದು ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಬೆಂಗಳೂರು ಪದವೀಧರರ ಕ್ಷೇತ್ರ ಸೇರಿದಂತೆ ವಿಧಾನಪರಿಷತ್‌ನ ಆರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಮೇ 9ರಂದು ಅಧಿಸೂಚನೆ ಪ್ರಕಟವಾಗಲಿವೆ. ಇದಕ್ಕೂ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. ಹೀಗಾಗಿ, ಹೊಸ ಕಾಮಗಾರಿಗಳ ಆರಂಭಕ್ಕೆ ಚುನಾವಣೆ ಆಯೋಗ ಅನುಮತಿ ನೀಡುವುದಿಲ್ಲ ಎಂಬ ಆತಂಕವೂ ಎದುರಾಗಿದೆ.

ಪದವೀಧರರ ಕ್ಷೇತ್ರಕ್ಕೆ ಜೂನ್‌ 3ರಂದು ಮತದಾನ ನಡೆಯಲಿದ್ದು, ನೀತಿ ಸಂಹಿತೆ ಜೂನ್‌ 12ರವರೆಗೂ ಇದೆ. ಆ ವೇಳೆಗೆ ಮಳೆಗಾಲ ಹೆಚ್ಚಾಗುತ್ತದೆ. ಆದ್ದರಿಂದ ಈ ಎಲ್ಲ ನೀತಿ ಸಂಹಿತೆ ನಡುವೆಯೂ ತುರ್ತು ಕಾಮಗಾರಿಗಳಿಗೆ ಅನುಮತಿ ನೀಡಲು ಚುನಾವಣೆ ಆಯೋಗಕ್ಕೆ ಮನದಟ್ಟು ಮಾಡಿಕೊಡಲು ಬಿಬಿಎಂಪಿ ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೇ 7ರ ನಂತರ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT