ಫ್ಲೆಕ್ಸ್‌, ಹೋರ್ಡಿಂಗ್‌ ಜಾಹೀರಾತು 1 ವರ್ಷ ನಿಷೇಧ

7
ಪಾಲಿಕೆ ಸಭೆಯಲ್ಲಿ ನಿರ್ಣಯ

ಫ್ಲೆಕ್ಸ್‌, ಹೋರ್ಡಿಂಗ್‌ ಜಾಹೀರಾತು 1 ವರ್ಷ ನಿಷೇಧ

Published:
Updated:
Deccan Herald

ಬೆಂಗಳೂರು: ನಗರದ ಸೌಂದರ್ಯಕ್ಕೆ ಹಾಗೂ ಪರಿಸರಕ್ಕೆ ಧಕ್ಕೆ ಉಂಟುಮಾಡುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌, ಗೋಡೆ ಬರಹ, ಭಿತ್ತಿಪತ್ರ, ಹೋರ್ಡಿಂಗ್ಸ್‌ ಸೇರಿದಂತೆ ಎಲ್ಲ ರೀತಿಯ ಅನಧಿಕೃತ ಜಾಹೀರಾತುಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಒಂದು ವರ್ಷ ಕಾಲ ನಿಷೇಧಿಸಲಾಗಿದೆ.

ಸೋಮವಾರ ನಡೆದ ಬಿಬಿಎಂಪಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಇದಕ್ಕೆ ಪಾಲಿಕೆಯ ಸದಸ್ಯರು ಪಕ್ಷಭೇದ ಮರೆತು ಸಹಮತ ಸೂಚಿಸಿದರು.

ಹೊಸ ಜಾಹೀರಾತು ನೀತಿ– 2017ರ ಕರಡನ್ನು ಇದೇ 8ರ ಒಳಗೆ ಅಂತಿಮಗೊಳಿಸುವಂತೆ ಹೈಕೋರ್ಟ್‌ ಸೂಚಿಸಿತ್ತು. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಕರಡಿನ ಬಗ್ಗೆ ಚರ್ಚೆಗೆ ಕಾಲಾವಕಾಶ ಕಲ್ಪಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಅನಧಿಕೃತ ಜಾಹೀರಾತು ಹಾವಳಿ ಬಗ್ಗೆ ನಡೆದ ಚರ್ಚೆಗೆ ಉತ್ತರಿಸಿದ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಸಾರ್ವಜನಿಕ ಪ್ರದೇಶದ ಅಂದಗೆಡಿಸುವವರ ವಿರುದ್ಧ 1981ರ ಕರ್ನಾಟಕ ಸಾರ್ವಜನಿಕ ಪ್ರದೇಶ ವಿರೂಪ ತಡೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಲು ಅವಕಾಶ ಇದೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ₹ 1 ಲಕ್ಷದವರೆಗೆ ದಂಡ ವಿಧಿಸಲು ಹಾಗೂ 6 ತಿಂಗಳು ಜೈಲುಶಿಕ್ಷೆ ವಿಧಿಸಲು ಈ ಕಾಯ್ದೆ ಅವಕಾಶ ಕಲ್ಪಿಸುತ್ತದೆ’ ಎಂದರು.

ಮರಗಳು, ಆವರಣ ಗೋಡೆಗಳಿಗೆ ಭಿತ್ತಿಪತ್ರಗಳನ್ನು ಅಂಟಿಸುವವರಿಗೂ ಇನ್ನು ₹ 1 ಲಕ್ಷ ದಂಡ ವಿಧಿಸುತ್ತೇವೆ. ಅವರ ವಿರುದ್ಧವೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುತ್ತೇವೆ ಎಂದು ತಿಳಿಸಿದರು.

‘2016ರಿಂದಲೇ ರಾಜ್ಯದಲ್ಲಿ ಫ್ಲೆಕ್ಸ್‌ ಬಳಕೆ ನಿಷೇಧಿಸಲಾಗಿದೆ. ಹಾಗಾಗಿ ಯಾರೂ ಇದನ್ನು ಬಳಸುವಂತಿಲ್ಲ. ನಿಷೇಧ ಜಾರಿಯಲ್ಲಿದ್ದರೂ ಫ್ಲೆಕ್ಸ್‌ ಮುದ್ರಣ ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಹಾಗಾಗಿಯೇ ಅವುಗಳಿಗೆ ಬೀಗ ಹಾಕಿಸಿದ್ದೇವೆ’ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಅನಧಿಕೃತ ಜಾಹೀರಾತು ಪ್ರಕಟಣೆಗಳಿಂದ ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿವೆ. ಹದಿ ಹರೆಯದ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವಂತಹ ಅನೇಕ ಜಾಹೀರಾತುಗಳು ನಗರದಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ಕೆಲವು ಸದಸ್ಯರು ಗಮನ ಸೆಳೆದರು.

‘ಹೋರ್ಡಿಂಗ್‌ಗಳೆಲ್ಲವೂ ಅಕ್ರಮ; ಅವುಗಳನ್ನೂ ತೆಗೆಸುತ್ತೇವೆ’

‘ನಗರದಲ್ಲಿರುವ ಎಲ್ಲ ಹೋರ್ಡಿಂಗ್‌ಗಳೂ ಅಕ್ರಮ. ಅವುಗಳೆಲ್ಲವನ್ನೂ ತೆಗೆಸಲು ಕ್ರಮಕೈಗೊಳ್ಳುತ್ತೇವೆ’ ಪಾಲಿಕೆ ಆಯುಕ್ತರ ಸ್ಪಷ್ಟೊಕ್ತಿ ಇದು.

1 ವರ್ಷದಿಂದ ಪರವಾನಗಿ ನೀಡಿಲ್ಲ: ‘ಜಾಹೀರಾತು ಏಜೆನ್ಸಿಗಳು ಮೂರು ವರ್ಷಕ್ಕೊಮ್ಮೆ ಹಾಗೂ ಅವರು ಅಳವಡಿಸುವ ಜಾಹೀರಾತಿಗೆ ಪ್ರತಿ ವರ್ಷ ಪರವಾನಗಿ ನವೀಕರಿಸಬೇಕು. ಆದರೆ, ಹೊಸ ಜಾಹೀರಾತು ನೀತಿ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಒಂದು ವರ್ಷದಿಂದ ನಾನು ಯಾವುದೇ ಹೋರ್ಡಿಂಗ್‌ಗೆ ಪರವಾನಗಿ ನವೀಕರಿಸಿಲ್ಲ. ಹೊಸ ಪರವಾನಗಿಯನ್ನು ನೀಡಿಲ್ಲ. ಹಾಗಾಗಿ ನಗರದಲ್ಲಿ ಅಧಿಕೃತ ಹೋರ್ಡಿಂಗ್‌ಗಳಿರಲು ಸಾಧ್ಯವೇ ಇಲ್ಲ. ಅವುಗಳೆಲ್ಲವನ್ನು ತೆರವುಗೊಳಿಸಲು ಯಾವುದೇ ಸಮಸ್ಯೆಯೂ ಇಲ್ಲ’ ಎಂದು ಅವರು ತಿಳಿಸಿದರು.

‘ನಗರದಲ್ಲಿ ಮೂರು ರೀತಿಯ ಅನಧಿಕೃತ ಹೋರ್ಡಿಂಗ್‌ಗಳಿವೆ. ಒಂದು ಪಾಲಿಕೆಗೆ ಸೇರಿದ ಪಾದಚಾರಿ ಮಾರ್ಗ, ರಾಜಕಾಲುವೆ ಬಳಿ ಅನಧಿಕೃತವಾಗಿ ಅಳವಡಿಸಿರುವಂತಹವು. ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಜಾಗದಲ್ಲಿ ಪಾಲಿಕೆಯ ಜಾಹೀರಾತು ಬೈಲಾಗಳನ್ನು ಪಾಲಿಸದೆಯೇ ಅಳವಡಿಸಿರುವಂಥಹವು. ಉಳಿದವು ಖಾಸಗಿ ಜಾಗಗಳಲ್ಲಿ ಹಾಕಿರುವಂತಹವು’ ಎಂದರು.

‘ಖಾಸಗಿ ಜಾಗದಲ್ಲಿ ಹೋರ್ಡಿಂಗ್‌ ಅಳವಡಿಸಲು ಅವಕಾಶ ಕಲ್ಪಿಸುವ ಮುನ್ನ ಜಾಗದ ಮಾಲೀಕರು ಸ್ಟ್ರಕ್ಚರಲ್‌ ಎಂಜಿನಿಯರ್‌ ಅವರಿಂದ ಪಡೆದ ಪ್ರಮಾಣಪತ್ರವನ್ನು ಪಾಲಿಕೆಗೆ ಒದಗಿಸಬೇಕು. ಸೆಟ್‌ಬ್ಯಾಕ್‌ ಬಿಟ್ಟ ಜಾಗದಲ್ಲಿ ಜಾಹೀರಾತು ಫಲಕ ಅಳವಡಿಸುವುದಕ್ಕೆ ಅವಕಾಶ ಇಲ್ಲ. ಯಾರೂ ಈ ನಿಯಮ ಪಾಲಿಸಿಲ್ಲ. ಹಾಗಾಗಿ ಖಾಸಗಿ ಜಾಹೀರಾತುಗಳೆಲ್ಲವೂ ಅಕ್ರಮ’ ಎಂದು ಅವರು ವಿವರಿಸಿದರು.

‘ಪಾಲಿಕೆ ಜಾಗದಲ್ಲಿರುವ ಹೋರ್ಡಿಂಗ್‌ಗಳನ್ನು ತೆಗೆಸುವ ಹೊಣೆ ನಮ್ಮದು. ಖಾಸಗಿ ಜಾಗದಲ್ಲಿರುವ ಹೋರ್ಡಿಂಗ್‌ಗಳನ್ನು ಆಯಾ ಜಾಗದ ಮಾಲೀಕರೇ ತೆಗೆಸಬೇಕು. ಇದೇ 8ರಂದು ಪಾಲಿಕೆ ವತಿಯಿಂದ ಕೆಂಪೇಗೌಡ ದಿನಾಚರಣೆ ಹಮ್ಮಿಕೊಳ್ಳಲಿದ್ದು, ಅಧಿಕಾರಿಗಳು ಅದರ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆ ಕಾರ್ಯಕ್ರಮ ಮುಗಿದ ಬಳಿಕ ಖಾಸಗಿಯವರಿಗೆ 15 ದಿನ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಅವರು ಹೋರ್ಡಿಂಗ್‌ ತೆರವುಗೊಳಿಸದಿದ್ದರೆ, ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಿ, ನಾವೇ ತೆರವುಗೊಳಿಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಸುಮಾರು 150 ಹೋರ್ಡಿಂಗ್‌ಗಳಿಗೆ ಸಂಬಂಧಿಸಿ ನ್ಯಾಯಾಲಯದ ತಡೆಯಾಜ್ಞೆ ಜಾರಿಯಲ್ಲಿದೆ. ಅವುಗಳನ್ನು ತೆರವುಗೊಳಿಸಲು ನ್ಯಾಯಾಲಯದ ಅನುಮತಿ ಬೇಕಾಗುತ್ತದೆ. ಪಾಲಿಕೆ ಇಂದು ತೆಗೆದುಕೊಂಡ ನಿರ್ಣಯವನ್ನು ನ್ಯಾಯಾಲಯಕ್ಕೆ ವಿವರಿಸಿ, ಅವುಗಳ ತೆರವಿಗೂ ಪ್ರಯತ್ನಿಸಬಹುದು’ ಎಂದರು.

ಹೆಬ್ಬಾಳ ಮೇಲ್ಸೇತುವೆ ಬಳಿ ಹೋರ್ಡಿಂಗ್‌ ಅಳವಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಟೆಂಡರ್‌ ಕರೆದ ವಿಚಾರ ಗಮನಕ್ಕೆ ಬಂದಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಮೆಟ್ರೊ ಮಾರ್ಗಗಳ ಕಂಬಗಳಲ್ಲಿ ಜಾಹೀರಾತು ಅಳವಡಿಸುತ್ತಿರುವ ಸಂಬಂಧ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಜೊತೆ ಚರ್ಚೆ ನಡೆಸುತ್ತಿದ್ದೇವೆ. ಅವರು ಪಾಲಿಕೆ ಜೊತೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಏನು ಷರತ್ತು ವಿಧಿಸಲಾಗಿದೆ ಎಂಬುದ್ನು ನೋಡಿಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

 ‘ಅನಧಿಕೃತ ಫ್ಲೆಕ್ಸ್‌ ಹಾವಳಿಗೆ ಹಾಗೂ ಜಾಹೀರಾತು ತೆರಿಗೆ ಸರಿಯಾಗಿ ಸಂಗ್ರಹಿಸದಿರುವುದಕ್ಕೆ ಅಧಿಕಾರಿಗಳೂ ಹೊಣೆ. ಎರಡು ವರ್ಷಗಳಲ್ಲಿ ₹ 65 ಕೋಟಿಯಷ್ಟು ಜಾಹೀರಾತು ತೆರಿಗೆ ವಸೂಲಿ ಬಾಕಿ ಇದೆ. ಇದನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು. 

21,140 – ಪಾಲಿಕೆ ಆರು ದಿನಗಳಲ್ಲಿ ತೆರವುಗೊಳಿಸಿದ ಫ್ಲೆಕ್ಸ್‌ಗಳು
13 – ಅನಧಿಕೃತವಾಗಿ ಫ್ಲೆಕ್ಸ್‌ ಹಾಕಿದವರ ವಿರುದ್ಧ (ಆರು ದಿನಗಳಲ್ಲಿ) ದಾಖಲಿಸಲಾದ ಕ್ರಿಮಿನಲ್‌ ಪ್ರಕರಣಗಳು
94,000 – ನಾಲ್ಕು ತಿಂಗಳಲ್ಲಿ ಪಾಲಿಕೆ ತೆರವುಗೊಳಿಸಿದ ಫ್ಲೆಕ್ಸ್‌
456 – ಅನಧಿಕೃತ ಫ್ಲೆಕ್ಸ್‌ ಹಾಕಿದವರ ವಿರುದ್ಧ (ನಾಲ್ಕು ತಿಂಗಳುಗಳಲ್ಲಿ) ದಾಖಲಾದ ಕ್ರಿಮಿನಲ್‌ ಪ್ರಕರಣಗಳು
65 – ಪ್ಲೆಕ್ಸ್‌ ಮುದ್ರಣ ಘಟಕಗಳನ್ನು ಪಾಲಿಕೆ ಮುಚ್ಚಿಸಿದೆ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !