ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತಾತ್ಮಕವಾಗಿ ಪಾಲಿಕೆ ವಿಕೇಂದ್ರೀಕರಣಕ್ಕೆ ಪಕ್ಷಾತೀತ ವಿರೋಧ

ತಜ್ಞರನ್ನೇ ಮೇಯರ್‌ ಮಾಡಿ; ವಿರೋಧ ಪಕ್ಷದವರ ವ್ಯಂಗ್ಯ
Last Updated 29 ಜೂನ್ 2018, 20:17 IST
ಅಕ್ಷರ ಗಾತ್ರ

ಬೆಂಗಳೂರು: ಮಹಾನಗರವನ್ನು ಆಡಳಿತಾತ್ಮಕವಾಗಿ ಮೂರು ಹಂತಗಳಲ್ಲಿ ವಿಕೇಂದ್ರೀಕರಿಸುವ ಕುರಿತು ಪಕ್ಷಾತೀತ ವಿರೋಧ ಶುಕ್ರವಾರ ನಡೆದ ಬಿಬಿಎಂಪಿ ಸಭೆಯಲ್ಲಿ ವ್ಯಕ್ತವಾಯಿತು. ಬಿಜೆಪಿ ಸದಸ್ಯರು ಈ ಪ್ರಸ್ತಾವ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಪ್ರಸ್ತಾವವನ್ನು ಬಿಬಿಎಂಪಿ ಸಭೆಯಲ್ಲಿ ಮಂಡಿಸಿ ಎಲ್ಲರ ಸಮ್ಮತಿ ಪಡೆಯಬೇಕು. ಈ ಬಗ್ಗೆ ಸಮ್ಮತಿ ಸಿಕ್ಕಿದರೆ ಮಾತ್ರ ಮುಂದುವರಿಯಬೇಕು ಎಂದುಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು. ಜೆಡಿಎಸ್‌ ಸದಸ್ಯರು ಮಾತ್ರ ಪ್ರಸ್ತಾವದಲ್ಲೇನಿದೆ ಎಂದು ಗೊತ್ತಿಲ್ಲ. ನೋಡಿದ ಬಳಿಕ ಮುಂದುವರಿಯಬಹುದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟರು.

ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಪಂಚ್‌...

*ವಿಕೇಂದ್ರೀಕರಣದ ಬಗ್ಗೆ ನೇಮಿಸಲಾದ ಸಮಿತಿಯ ‘ತಜ್ಞರ’ನ್ನು ಮೇಯರ್‌ ಮಾಡೋಣ. ಆಗ ಅವರು ಈಗಿನವ್ಯವಸ್ಥೆಯೇ ಚೆನ್ನಾಗಿದೆ ಎನ್ನುತ್ತಾರೆ.

*ಮೇಯರ್‌ಗೆ ಅಧಿಕಾರವಿಲ್ಲದಿರುವುದನ್ನು 'ನಾಮಕಾವಸ್ಥೆ ಮೇಯರ್‌’ ಎಂಬ ಪದ ಬಳಕೆ ಮೂಲಕ ಅವಮಾನಿಸಿದ್ದಾರೆ. ಇದು ನಗರದ ನಾಗರಿಕರಿಗೆ ಮಾಡಿದ ಅವಮಾನ

* 12 ಸ್ಥಾಯಿ ಸಮಿತಿಗಳನ್ನು ಪ್ರಯೋಜನಕ್ಕೆ ಬಾರದವು ಎಂದು ಹೇಳಿದ್ದಾರೆ. ಅಂದರೆ, ಅವು ಹಲ್ಲಿಲ್ಲದ ಹಾವು?

* ಐದು ಪಾಲಿಕೆ ಮಾಡಿದರೆ ಅವುಗಳೊಳಗೆ ದಾಯಾದಿ ಕಲಹ ಶುರುವಾಗುತ್ತದೆ

* ಆಡಳಿತ ಪಕ್ಷದ ನಾಯಕ ಶಿವರಾಜ್‌ ಅವರ ಅಪ್ಪನಾಣೆಗೂ ಈ ಪ್ರಸ್ತಾವದಿಂದ ಪಾಲಿಕೆಗಾಗಲಿ, ಸದಸ್ಯರಿಗಾಗಲಿ ಅಥವಾ ಜನರಿಗಾಗಲಿ ಒಳಿತಾಗುವುದಿಲ್ಲ

* ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಕ್ಲಚ್‌ನಲ್ಲಿ (ಬಿಗಿಹಿಡಿತ) ಇದ್ದಾರೆ. ಹಾಗಾಗಿ ಅವರು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ

ಮೇಯರ್‌: ಒಂದು ವೇಳೆ ನೀವು ಶಾಸಕರಾಗಿದ್ದರೆ ಏನು ಮಾಡುತ್ತಿದ್ದಿರಿ?

ರೆಡ್ಡಿ: ಅದು ನನ್ನ ಹಣೇಲಿ ಬರೆದಿಲ್ಲ ಸ್ವಾಮಿ. ಆದರೆ, ಶಾಸಕನಾಗಿದ್ದರೂ ಪಾಲಿಕೆ ವಿಕೇಂದ್ರೀಕರಣವನ್ನು ವಿರೋಧಿಸುತ್ತೇನೆ. ಜನರಿಗೆ ಹೆಚ್ಚು ಹತ್ತಿರವಾಗಿರುವವನು ಪಾಲಿಕೆ ಸದಸ್ಯ. ಹಾಗಾಗಿ ಈ ಕೆಲಸದಲ್ಲೇ ಹೆಚ್ಚು ಸಂತೋಷವಿದೆ (ಈ ಮಾತಿಗೆ ಎಲ್ಲರೂ ಮೇಜು ಕುಟ್ಟಿ ಸ್ವಾಗತಿಸಿದರು)

* 30 ಸಾವಿರ ಜನರಿಗೆ ಒಂದು ವಾರ್ಡ್‌ ರಚನೆ ಮಾಡಿದರೆ ಅದಕ್ಕೊಂದಿಷ್ಟು ಸಿಬ್ಬಂದಿ ನೇಮಕದ ಹೆಸರಿನಲ್ಲಿ ಆರ್ಥಿಕ ಹೊರೆ ಬೀಳುತ್ತದೆ
*
ಸದಸ್ಯರ ಆತಂಕವೇನು?
* ಅಧಿಕಾರ ವ್ಯಾಪ್ತಿ ಕಡಿಮೆಯಾಗುವುದು
* ಪ್ರಸ್ತಾವದ ಬಗ್ಗೆ ಅರಿವಿನ ಕೊರತೆ
* ಎಲ್ಲರ ಜತೆ ಚರ್ಚಿಸಿಲ್ಲ ಎಂಬ ಕೋಪ
* ಸಾಧಕ ಬಾಧಕಗಳ ಬಗ್ಗೆ ಗೊತ್ತಿಲ್ಲ
* ಮುಂಬೈನಲ್ಲಿ ಈ ವ್ಯವಸ್ಥೆ ವಿಫಲವಾದ ಉದಾಹರಣೆ

ಚರ್ಚೆಯಾದ ಬೇರೆ ವಿಚಾರಗಳು
ಖಾತೆ ಬದಲಾವಣೆಗೆ ಕೇವಲ ಆನ್‌ಲೈನ್‌ನಲ್ಲಿ ಮಾತ್ರವಲ್ಲ, ಮ್ಯಾನ್ಯುವಲ್‌ ಮೋಡ್‌ನಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಬೇಕು.

ನಗರದಲ್ಲಿ ಸಾವಿರಾರು ನಕಲಿ ಮತದಾರರಿದ್ದಾರೆ. ಖಾಲಿ ಸೈಟುಗಳ ವಿಳಾಸ ತೋರಿಸಿ ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ ಬಾಂಗ್ಲಾ ವಲಸಿಗರೂ ಇದ್ದಾರೆ. ಪಟ್ಟಿಯನ್ನು ಮರು ಪರಿಷ್ಕರಿಸಿ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಅಸಲಿ ಮತದಾರರಿರುವಂತೆ ನೋಡಿಕೊಳ್ಳಬೇಕು.

ಬೊಮ್ಮನಹಳ್ಳಿಯಲ್ಲಿ ಮಂಗಮ್ಮನಪಾಳ್ಯ ಕೆರೆಯನ್ನು ಒತ್ತುವರಿ ಮಾಡಿ ಕೆರೆ ಮಧ್ಯೆ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಅಣ್ಣಯ್ಯಪುರ ಕೆರೆಯಲ್ಲೂ ಇದೇ ಕೃತ್ಯ ನಡೆಯುತ್ತಿದೆ. ಇದನ್ನು ತಡೆಯಬೇಕು.

ಮಂಗಮ್ಮನಪಾಳ್ಯ ಕೆರೆ ಪ್ರಕರಣ ಸಂಬಂಧಿಸಿ ಅಲ್ಲಿನ ಕಾರ್ಯಪಾಲಕ ಎಂಜಿನಿಯರ್‌ನನ್ನು ಅಮಾನತು ಮಾಡಬೇಕು. ಕ್ರಮ ಕೈಗೊಂಡ ಬಗ್ಗೆ ವರದಿ ನೀಡಬೇಕು ಎಂದು ಮೇಯರ್‌ ಸೂಚಿಸಿದರು.
*
ಪಾಲಿಕೆ ವಿಕೇಂದ್ರೀಕರಣದ ಬಗ್ಗೆ ಪ್ರಸ್ತಾವಿತ ವರದಿಯನ್ನು ತರಿಸಲು ಇಂದೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಅದನ್ನು ಮಂಡಿಸಿ ಚರ್ಚಿಸೋಣ.
– ಮೇಯರ್‌ ಆರ್‌. ಸಂಪತ್‌ರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT