ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಸಿಗಳಲ್ಲಿ ಕಾಡಲಿದೆಯೇ ಆಮ್ಲಜನಕ ಹಾಸಿಗೆ ಕೊರತೆ?

ಮನೆ ಆರೈಕೆಯಲ್ಲಿರಲು ಹಲವು ನಿರ್ಬಂಧ * ಕೋವಿಡ್‌ ಆರೈಕೆ ಕೇಂದ್ರಗಳಲ್ಲಿರುವ ರೋಗಿಗಳಲ್ಲೂ ಕುಸಿಯುತ್ತಿದೆ ಆಮ್ಲಜನಕ ಮಟ್ಟ
Last Updated 22 ಮೇ 2021, 19:34 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ 22 ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ (ಸಿಸಿಸಿ) ಸಾಮಾನ್ಯ ಹಾಸಿಗೆಗಳಿಗೆ ಅಷ್ಟೊಂದು ಬೇಡಿಕೆ ಇಲ್ಲ. ಆದರೆ, ಆಮ್ಲಜನಕ ವ್ಯವಸ್ಥೆ ಹೊಂದಿರುವ ಹಾಸಿಗೆಗಳು ಬಹುತೇಕ ಭರ್ತಿಯಾಗಿವೆ.‌

ಮನೆಯಲ್ಲಿ ಪ್ರತ್ಯೇಕ ಕೊಠಡಿ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಹೊಂದಿರದವರು, ಮನೆಯಲ್ಲಿ ಇತರೆ ಆರೋಗ್ಯ ಸಮಸ್ಯೆ ಹೊಂದಿರುವವರು ಇದ್ದರೆ ಅಲ್ಲಿನ ಕೊರೊನಾ ಸೋಂಕಿತರು ಮನೆ ಆರೈಕೆಯಲ್ಲಿ ಇರುವಂತಿಲ್ಲ. ಕಡ್ಡಾಯವಾಗಿ ಅವರು ಪಕ್ಕದ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಬೇಕು ಎಂದು ಬಿಬಿಎಂಪಿ ಆದೇಶಿಸಿದೆ. ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ಸಿಸಿಸಿಗಳಲ್ಲಿ ಹಾಸಿಗೆ ಕೊರತೆ ಉದ್ಭವಿಸಲಿದೆ ಎಂದು ಈ ಕೇಂದ್ರಗಳ ನೋಡಲ್ ಅಧಿಕಾರಿಗಳೇ ಹೇಳುತ್ತಾರೆ.

ಸದ್ಯ, ನಗರದಲ್ಲಿ 2.90 ಲಕ್ಷ ಸಕ್ರಿಯ ಪ್ರಕರಣಗಳು ನಗರದಲ್ಲಿ ಇವೆ. ಈ ಪೈಕಿ ಶೇ 85ಕ್ಕಿಂತ ಹೆಚ್ಚು ಜನ ಮನೆ ಆರೈಕೆಯಲ್ಲಿದ್ದಾರೆ. ಇವರಲ್ಲಿ ಶೇ 10ರಷ್ಟು ಜನ ಸಿಸಿಸಿಗಳಿಗೆ ಬಂದರೂ ಕನಿಷ್ಠ 29 ಸಾವಿರ ಹಾಸಿಗೆಗಳು ಬೇಕಾಗುತ್ತವೆ. ಆದರೆ, ಈ ಕೇಂದ್ರಗಳಲ್ಲಿ ಸುಮಾರು 2,500 ಹಾಸಿಗೆಗಳಿದ್ದರೆ, ಇವುಗಳಲ್ಲಿ ಆಮ್ಲಜನಕ ವ್ಯವಸ್ಥೆ ಹೊಂದಿರುವ ಹಾಸಿಗೆಗಳ ಸಂಖ್ಯೆ 1000 ಮಾತ್ರ.

ಕುಸಿಯುತ್ತಿದೆ ಆಮ್ಲಜನಕ ಮಟ್ಟ

’ಕಳೆದ ಬಾರಿ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದವರು ಬಂದು, ಒಂದೆರಡು ದಿನ ಇದ್ದು ಗುಣಮುಖರಾಗಿ ಹೋಗುತ್ತಿದ್ದರು. ಈ ಬಾರಿ ಆಮ್ಲಜನಕ ಮಟ್ಟ 90–95 ಇದ್ದರೂ, ಆರೈಕೆ ಕೇಂದ್ರಗಳಿಗೆ ಬಂದ ನಂತರ ಈ ಮಟ್ಟ ಕೆಲವರಲ್ಲಿ ಕುಸಿಯುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗುತ್ತಿದೆ. ಆಮ್ಲಜನಕ ಹಾಸಿಗೆಗಳ ಸಂಖ್ಯೆ ಹೆಚ್ಚು ಅಗತ್ಯವಿದೆ’ ಎಂದು ಸಿಸಿಸಿ ಒಂದರ ನೋಡಲ್ ಅಧಿಕಾರಿಯೊಬ್ಬರು ಹೇಳಿದರು.

’ನಿಯಮದ ಪ್ರಕಾರ, ಆಮ್ಲಜನಕ ಮಟ್ಟ 93ಕ್ಕಿಂತ ಮೇಲ್ಪಟ್ಟವರನ್ನು ಮಾತ್ರ ಸಿಸಿಸಿಗಳಿಗೆ ದಾಖಲು ಮಾಡಿಕೊಳ್ಳಬೇಕು. ಆದರೆ, ನಾವು 85 ಇದ್ದರೂ ಮಾನವೀಯತೆಯ ದೃಷ್ಟಿಯಿಂದ ದಾಖಲು ಮಾಡಿಕೊಳ್ಳುತ್ತಿದ್ದೇವೆ. ಇಂಥವರಿಗೆ ಆಮ್ಲಜನಕ ಪೂರೈಕೆ ಅತಿ ಅವಶ್ಯಕ’ ಎಂದು ಮತ್ತೊಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದರು.

’ಒಬ್ಬ ವ್ಯಕ್ತಿಗೆ 5 ಲೀಟರ್‌ವರೆಗೆ ಆಮ್ಲಜನಕ ಪೂರೈಸಬಹುದು. ಅದರ ನಂತರವೂ ಅವರಿಗೆ ಈ ವ್ಯವಸ್ಥೆ ಅಗತ್ಯವಿದ್ದರೆ ಆಸ್ಪತ್ರೆಗೆ ದಾಖಲಿಸುವುದು ಅಗತ್ಯವಾಗಿರುತ್ತದೆ. ಸದ್ಯ, ಗುಣಮುಖ ಹೊಂದುತ್ತಿರುವವರ ಪ್ರಮಾಣವೂ ಹೆಚ್ಚಾಗುತ್ತಿರುವುದರಿಂದ ಸದ್ಯಕ್ಕೆ ಹಾಸಿಗೆಗಳ ಕೊರತೆ ಎದುರಾಗದು’ ಎಂದು ಶಾಂತಿನಗರದ ಸರ್ಕಾರಿ ಬಾಲಕರ ಕಲಾ ಕಾಲೇಜು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದರು.

‘ನಮ್ಮ ಕೇಂದ್ರದಲ್ಲಿ 51 ಹಾಸಿಗೆಗಳು ಖಾಲಿ ಇದ್ದರೆ, 46 ಭರ್ತಿಯಾಗಿವೆ. ಆಮ್ಲಜನಕ ಮಟ್ಟ ಕುಸಿದವರಿಗೆ ತಕ್ಷಣಕ್ಕೆ ಆಮ್ಲಜನಕ ಪೂರೈಸಿ ಅವರ ಆರೋಗ್ಯ ಸ್ಥಿರಗೊಳಿಸುತ್ತಿದ್ದೇವೆ. ಆರೋಗ್ಯ ಸ್ಥಿತಿ ಸ್ಥಿರವಾಗಿದ್ದ ಕೆಲವರಲ್ಲಿಯೂ ಇಲ್ಲಿಗೆ ಬಂದ ನಂತರ ಆಮ್ಲಜನಕ ಮಟ್ಟ ಕುಸಿಯುತ್ತಿದೆ. ಬಹಳಷ್ಟು ಜನ ಸಿಸಿಸಿಗಳನ್ನು ಆಸ್ಪತ್ರೆಗಳೆಂದೇ ಭಾವಿಸಿ ಬರುತ್ತಾರೆ. ಈ ಕೇಂದ್ರಗಳಲ್ಲಿ ಐಸಿಯು ವ್ಯವಸ್ಥೆ ಇರುವುದಿಲ್ಲ ಎಂಬುದು ಅನೇಕರಿಗೆ ತಿಳಿದಿಲ್ಲ‘ ಎಂದು ವಿಜಿನಾಪುರದ ಒಯೊ ನವ್ಯಶ್ರಿ ಇಂಟರ್‌ನ್ಯಾಷನಲ್ ಹೋಟೆಲ್‌ ಸಿಸಿಸಿಯ ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ವೈಭವಿ ಬಿ. ಪ್ರಸಾದ್ ಹೇಳಿದರು.

’ಸಿಸಿಸಿಗಳು ಆಸ್ಪತ್ರೆ ಹತ್ತಿರದಲ್ಲಿರಲಿ’

‘ಸಿಸಿಸಿಗಳಿಗೆ ಬಂದ ನಂತರ ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ. ಈ ಕೇಂದ್ರಗಳಲ್ಲಿ ವೆಂಟಿಲೇಟರ್ ಅಥವಾ ಐಸಿಯುದಂತಹ ವ್ಯವಸ್ಥೆ ಇರುವುದಿಲ್ಲ. ಅದಕ್ಕಾಗಿ, ಇಂತಹ ಕೇಂದ್ರಗಳನ್ನು ಆಸ್ಪತ್ರೆಗಳ ಬಳಿಯಲ್ಲಿಯೇ ಸ್ಥಾಪಿಸುವುದು ಉತ್ತಮ’ ಎಂದು ಅಧಿಕಾರಿಯೊಬ್ಬರು ಸಲಹೆ ನೀಡಿದರು.

‘ನಗರದಲ್ಲಿ ದಿನದಿಂದ ದಿನಕ್ಕೆ ಸಿಸಿಸಿಗಳ ಸಂಖ್ಯೆ ಹೆಚ್ಚುತ್ತಿರುವುದು ಸ್ವಾಗತಾರ್ಹ. ಆದರೆ, ಕಟ್ಟಡ ಅಥವಾ ಜಾಗ ಸಿಕ್ಕಿತು ಎಂಬ ಮಾತ್ರಕ್ಕೆ ಎಲ್ಲೆಂದರಲ್ಲಿ ಇಂತಹ ಕೇಂದ್ರ ಸ್ಥಾಪಿಸುವ ಬದಲು ಆಸ್ಪತ್ರೆಯ ಬಳಿಯಲ್ಲಿಯೇ ಮಾಡಬೇಕು. ಅಲ್ಲದೆ, ಶೌಚಾಲಯ ವ್ಯವಸ್ಥೆ, ನಿರಂತರ ವಿದ್ಯುತ್‌ ಮತ್ತು ನೀರು ಪೂರೈಕೆ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು’ ಎಂದರು.

‘ಆಮ್ಲಜನಕ ಹಾಸಿಗೆ ಕೊರತೆ ಬಾಧಿಸದು’

‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆರೈಕೆ ಕೇಂದ್ರಗಳಲ್ಲಿ ಹಾಸಿಗೆಯ ಕೊರತೆ ಇಲ್ಲ. ಸಾವಿರಕ್ಕೂ ಹೆಚ್ಚು ಆಮ್ಲಜನಕ ಸಹಿತ ಹಾಸಿಗೆಗಳ ಪೈಕಿ 300ರಿಂದ 400 ಹಾಸಿಗೆಗಳು ಈಗಲೂ ಖಾಲಿ ಇವೆ‘ ಎಂದು ಸಿಸಿಸಿಗಳ ಉಸ್ತುವಾರಿ ಮತ್ತು ಬಿಬಿಎಂಪಿ ಜಂಟಿ ಆಯುಕ್ತ ಸರ್ಫ್‌ರಾಜ್‌ ಖಾನ್‌ ’ಪ್ರಜಾವಾಣಿ‘ಗೆ ತಿಳಿಸಿದರು.

‘ಸಿಸಿಸಿಗಳಿಗೆ ಬರುವವರ ಸಂಖ್ಯೆ ಹೆಚ್ಚಿದರೂ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಈಗಿರುವ ಕೇಂದ್ರಗಳಲ್ಲಿಯೇ ಹೆಚ್ಚುವರಿಯಾಗಿ ಇನ್ನೂ ಒಂದೂವರೆ ಸಾವಿರದಷ್ಟು ಹಾಸಿಗೆಗಳ ಸಂಖ್ಯೆ ಹೆಚ್ಚಿಸಬಹುದಾಗಿದೆ‘ ಎಂದರು.

‘ಬಹುತೇಕ ಸಿಸಿಸಿಗಳು ನೇರ ಚಿಕಿತ್ಸಾ ಕೇಂದ್ರಗಳಂತೆಯೂ (ಟ್ರಯಾಜ್‌ ಸೆಂಟರ್‌) ಕಾರ್ಯನಿರ್ವಹಿಸುತ್ತಿವೆ. ಆರೈಕೆ ಮತ್ತು ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಇಲ್ಲಿ ಸೇವೆ ಸಿಗುತ್ತಿದೆ. ಬಹುತೇಕರು ಇಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳುತ್ತಿದ್ದಾರೆ. ಗಂಭೀರ ಸ್ಥಿತಿ ಇರುವವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ‘ ಎಂದೂ ಅವರು ಮಾಹಿತಿ ನೀಡಿದರು.

‘ಲಾಕ್‌ಡೌನ್‌ ಅವಧಿ ಮುಗಿಯುವಷ್ಟರಲ್ಲಿ ಸೋಂಕು ಹರಡುವಿಕೆಯ ಸರಪಳಿ ತುಂಡಾಗುವ ಸಾಧ್ಯತೆ ಇದೆ. ಆಗ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಲಿದ್ದು, ಗುಣಮುಖ ಹೊಂದುವವರ ಸಂಖ್ಯೆ ಹೆಚ್ಚಾಗಲಿದೆ. ಆಗ ಹೆಚ್ಚು ಹಾಸಿಗೆಗಳ ಅಗತ್ಯ ಬೀಳುವುದಿಲ್ಲ‘ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT