ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಶುರು

ವಾರ್ಡ್‌ಗಳ ಸಂಖ್ಯೆ 243ಕ್ಕೆ ಹೆಚ್ಚಳ: ಸಮಿತಿ ರಚನೆಯಾಗಿ 9 ತಿಂಗಳ ಬಳಿಕ ಮೊದಲ ಸಭೆ
Last Updated 17 ಜುಲೈ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಕೌನ್ಸಿಲ್‌ನ ಒಟ್ಟು ಸದಸ್ಯರ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಿ ನಗರಾಭಿವೃದ್ಧಿ ಇಲಾಖೆಯು ಅಧಿಸೂಚನೆ ಹೊರಡಿಸಿ 9 ತಿಂಗಳ ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷರ ಅಧ್ಯಕ್ಷತೆಯ ಸಮಿತಿಯು ಶನಿವಾರ ತನ್ನ ಮೊದಲ ಸಭೆಯನ್ನು ನಡೆಸಿದೆ. ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿ ವಿಸ್ತರಣೆ, ವಾರ್ಡ್‌ಗಳ ಹಾಗೂ ವಲಯಗಳ ಮರುವಿಂಗಡಣೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ.

ಸರ್ಕಾರ 2020ರ ಮಾರ್ಚ್‌ 24ರಂದು ಬಿಬಿಎಂಪಿ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿತ್ತು. ಈ ಮಸೂದೆಯನ್ನು ಶಾಸಕ ಎಸ್.ರಘು ಅಧ್ಯಕ್ಷತೆಯ ವಿಧಾನ ಮಂಡಲದ ಜಂಟಿ ಸಲಹಾ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿತ್ತು. ಸಮಿತಿಯು 2020ರ ಸೆ. 15ರಂದು ವಿಧಾನಸಭಾಧ್ಯಕ್ಷರಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಬಿಬಿಎಂಪಿ ಮಸೂದೆ ಅಂತಿಮಗೊಳ್ಳದ ಕಾರಣ ಸದ್ಯಕ್ಕೆ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು 1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಬೇಕು. ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 250ಕ್ಕೆ ಹೆಚ್ಚಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಸಮಿತಿಯ ಶಿಫಾರಸನ್ನು ಒಪ್ಪಿದ್ದ ಸರ್ಕಾರ ವಾರ್ಡ್‌ಗಳ ಸಂಖ್ಯೆಯನ್ನು ಗರಿಷ್ಠ 250ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸಿ 1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. 2020ರ ಅ. 14ರಂದು ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ ಕೌನ್ಸಿಲ್‌ ಸದಸ್ಯರ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಿತ್ತು. ವಾರ್ಡ್‌ಗಳ ಮರುವಿಂಗಡಣೆಗಾಗಿ ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಅದೇ ದಿನ ಸಮಿತಿಯನ್ನೂ ರಚಿಸಲಾಗಿತ್ತು. ಈ ಸಮಿತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು, ಬಿಬಿಎಂಪಿಯ ವಿಶೇಷ ಆಯುಕ್ತರು (ಕಂದಾಯ) ಸದಸ್ಯರಾಗಿದ್ದಾರೆ.

‘ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿ ವಾರ್ಡ್‌ ಮರುವಿಂಗಡಣೆ ಮಾಡುವ ಕುರಿತು ಸಮಿತಿಯು ಮೊದಲ ಸಭೆಯನ್ನು ಶನಿವಾರ ನಡೆಸಿದ್ದೇವೆ. ಈ ಕುರಿತು ಏನೆಲ್ಲ ಸಿದ್ಧತೆ ನಡೆಸಲಾಗಿದೆ ಎಂಬ ಕುರಿತು ಸಮಾಲೋಚನೆ ನಡೆಸಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿಗೆ ಯಾವೆಲ್ಲ ಪ್ರದೇಶಗಳು ಸೇರ್ಪಡೆ ಆಗಬೇಕಿದೆ ಎಂಬ ಕುರಿತು ಸಲ್ಲಿಕೆ ಆಗಿರುವ ಬೇರೆ ಬೇರೆ ಪ್ರಸ್ತಾವನೆಗಳು ಬೇರೆ ಬೇರೆ ಹಂತದಲ್ಲಿವೆ. ಈ ಬಗ್ಗೆ ಈ ಹಂತದಲ್ಲಿ ಏನೂ ಹೇಳಲಾಗದು. ಕೆಲವು ಪ್ರಸ್ತಾವನೆಗಳು ಬೆಂಗಳೂರು ನಗರ ಜಿಲ್ಲಾಡಳಿತದ ಮುಂದಿವೆ. ಕೆಲವು ಪ್ರಸ್ತಾವನೆಗಳು ಬಿಬಿಎಂಪಿಯ ಮುಂದಿವೆ. ಯಾವ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿಂದೆ ಯಾವ ರೀತಿ ಮರುವಿಂಗಡಣೆ ನಡೆಸಲಾಗಿತ್ತು, ಏನು ಕ್ರಮ ಕೈಗೊಳ್ಳಲಾಗಿತ್ತು. ಇನ್ನು ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಎಂಬ ಪ್ರಾರಂಭಿಕ ಹಂತದ ಸಮಾಲೋಚನೆ ನಡೆಸಿದ್ದೇವೆ’ ಎಂದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಎನ್‌.ಮಂಜುನಾಥ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ರಾಜೇಶ್‌ ಗೌಡ, ಬಿಬಿಎಂಪಿ ವಿಶೇಷ ಆಯುಕ್ತ ಕಂದಾಯ ಎಸ್‌.ಬಸವರಾಜು ಅವರು ಸಭೆಯಲ್ಲಿ ಭಾಗವಹಿಸಿದರು.

ಬಿಬಿಎಂಪಿ ವ್ಯಾಪ್ತಿಯನ್ನು ಈಗಿರುವಷ್ಟೇ ಉಳಿಸಿಕೊಂಡು ವಾರ್ಡ್‌ಗಳ ಸಂಖ್ಯೆಯನ್ನು ಮಾತ್ರ ಹೆಚ್ಚಿಸಲು ಸರ್ಕಾರ ಆರಂಭದಲ್ಲಿ ಚಿಂತನೆ ನಡೆಸಿತ್ತು. ನಂತರ ಗಡಿ ಪ್ರದೇಶದಲ್ಲಿ 1 ಕಿ.ಮೀ ವ್ಯಾಪ್ತಿಯ ಗ್ರಾಮಗಳನ್ನು ಬಿಬಿಎಂಪಿ ತೆಕ್ಕೆಗೆಸೇರಿಸಿಕೊಳ್ಳಲು ನಿರ್ಧರಿಸಿತ್ತು. ಯಾವ ಪ್ರದೇಶಗಳು ಬಿಬಿಎಂಪಿಗೆ ಸೇರ್ಪಡೆಯಾಗಬೇಕು ಎಂಬ ಕುರಿತು ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಹೊಸ ವಾರ್ಡ್‌ಗಳ ಹಾಗೂ ವಲಯಗಳ ವ್ಯಾಪ್ತಿ ಹಾಗೂ ಗಡಿಗಳನ್ನೂ ನಿರ್ಧರಿಸುವ ಕುರಿತೂ ಸಲಹೆ ನೀಡಲಿದೆ.

ಬಿಬಿಎಂಪಿ ಚುನಾವಣೆ- ಇನ್ನೂ ಅನಿಶ್ಚಿತ

ನಿಯಮ ಪ್ರಕಾರ 2020ರ ಸೆ.10ರ ಒಳಗೆ ಬಿಬಿಎಂಪಿ ಚುನಾವಣೆ ನಡೆಯಬೇಕಿತ್ತು. ಬಿಬಿಎಂಪಿ ವಿಸ್ತರಣೆ ಮತ್ತು ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆಗಳಿಂದಾಗಿ ಚುನಾವಣೆ ಮುಂದಕ್ಕೆ ಹೋಗಿದೆ. ಈ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಎಷ್ಟು ಸಮಯ ತಗಲುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ. ಇನ್ನೊಂದೆಡೆ ಚುನಾವಣೆ ಮುಂದೂಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಇನ್ನಷ್ಟೇ ಅಂತಿಮ ತೀರ್ಪು ಪ್ರಕಟವಾಗಬೇಕಿದೆ.

ಬಿಬಿಎಂಪಿ ಚುನಾವಣೆಯನ್ನು ಮುಂದೂಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್‌ ಮುಖಂಡರಾದ ಎಂ.ಶಿವರಾಜು ಹಾಗೂ ಅಬ್ದುಲ್‌ ವಾಜಿದ್‌ ಅವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠವು 1976 ಕೆಎಂಸಿ ಕಾರ್ಯೆಗೆ ತಿದ್ದುಪಡಿ ತಂದು ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದ್ದರೂ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು ಎಂದು 2020ರ ಡಿಸೆಂಬರ್‌ 4ರಂದು ಆದೇಶ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಡಿ.10ರಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಆ ಬಳಿಕ, 2020ರ ಬಿಬಿಎಂಪಿ ಕಾಯ್ದೆಯನ್ನು ಸರ್ಕಾರವು ವಿಧಾನ ಮಂಡಲದಲ್ಲಿ ಅಂಗೀಕರಿಸಿ, ಜಾರಿಗೊಳಿಸಿತ್ತು. ಪಾಲಿಕೆಯ ಆಡಳಿತವು 2021ರ ಜ. 11ರಿಂದ ಬಿಬಿಎಂಪಿ ಕಾಯ್ದೆ ಪ್ರಕಾರ ನಡೆಯುತ್ತಿದೆ.

ವರ್ಷದ ಬಳಿಕ ಮತ್ತೆ ಮರುವಿಂಗಡಣೆ

2011ರ ಜನಗಣತಿ ಆಧಾರದಲ್ಲಿ ಬಿಬಿಎಂಪಿ ವಾರ್ಡ್‌ಗಳ ವಾರ್ಡ್‌ ಮರುವಿಂಗಡಣೆ ನಡೆಸಲು ಸರ್ಕಾರ 2020ರ ಮಾರ್ಚ್‌ 2ರಂದು ಕರಡು ಅಧಿಸೂಚನೆ ಪ್ರಕಟಿಸಿತ್ತು. ಈ ಕುರಿತ ಅಂತಿಮ ಅಧಿಸೂಚನೆಯನ್ನು 2020ರ ಜೂನ್‌ 23ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಮರುವಿಂಗಡಣೆಗೊಂಡ ವಾರ್ಡ್‌ಗಳ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಪರಿಷ್ಕರಿಸಲಾಗಿತ್ತು. ವಾರ್ಡ್‌ಗಳ ಮರುವಿಂಗಡಣೆಯಾಗಿ ವರ್ಷ ಪೂರ್ಣಗೊಂಡ ಬೆನ್ನಲ್ಲೇ ಬಿಬಿಎಂಪಿಯ ವಾರ್ಡ್‌ಗಳನ್ನು ಮತ್ತೆ ಮರುವಿಂಗಡಣೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT