ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೃತ ನಗರೋತ್ಥಾನ’ 15 ಕ್ಷೇತ್ರಗಳಿಗೆ ಇನ್ನೂ ಕಾರ್ಯಾದೇಶ ನೀಡಿಲ್ಲ

‘ಅಮೃತ ನಗರೋತ್ಥಾನ’ ಕೆಲವು ಕ್ಷೇತ್ರಗಳಲ್ಲಿ ಕ್ರಿಯಾಯೋಜನೆ ಅಂತಿಮಗೊಂಡಿಲ್ಲ
Last Updated 18 ಮೇ 2022, 20:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಮೂಲಸೌಕರ್ಯ ಅಭಿವೃದ್ಧಿಗಾಗಿ ‘ಅಮೃತ ನಗರೋತ್ಥಾನ’ ಯೋಜನೆ
ಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿ ಒಂಬತ್ತು ತಿಂಗಳುಗಳು ಕಳೆದಿವೆ. ಆದರೆ, ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಈ ಯೋಜನೆಯ ಕಾಮಗಾರಿಗಳ ಕ್ರಿಯಾಯೋಜನೆಗೆ ಸರ್ಕಾರ ಇನ್ನೂ ಕಾರ್ಯಾದೇಶವನ್ನೇ ನೀಡಿಲ್ಲ.

ಕ್ರಿಯಾಯೋಜನೆಗಳಿಗೆ ಕಾರ್ಯಾದೇಶ ನೀಡುವುದಕ್ಕೆ ಬಾಕಿ ಇರುವ 15 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳನ್ನು ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿರುವ ನಾಲ್ಕು ಕ್ಷೇತ್ರಗಳ ಕ್ರಿಯಾಯೋಜನೆಗಳಿಗೂ ಇನ್ನೂ ಕಾರ್ಯಾದೇಶ ನೀಡಿಲ್ಲ!

ಐದು ಕ್ಷೇತ್ರಗಳಲ್ಲಿ ಈ ಯೋಜನೆಯ ಕಾಮಗಾರಿಗಳ ಕ್ರಿಯಾಯೊಜನೆಯನ್ನು ಬಿಬಿಎಂಪಿ ಇನ್ನೂ ಸಿದ್ಧಪಡಿಸಿಲ್ಲ. ಇನ್ನುಳಿದ 10 ಕ್ಷೇತ್ರಗಳಿಗೆ ಸಂಬಂಧಿಸಿದ ಕ್ರಿಯಾಯೋಜನೆಯ ಕಡತಗಳು ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಈಗಾಗಲೇ ಸಲ್ಲಿಕೆ ಆಗಿದ್ದರೂ ಕಾರ್ಯಾದೇಶ ಜಾರಿ ಆಗಿಲ್ಲ.

ಕ್ರಿಯಾಯೋಜನೆಗೆ ಅನುಮೋದನೆ ನೀಡಲು ವಿಳಂಬವಾಗುತ್ತಿರುವ ಬಗ್ಗೆ ಶಾಸಕರು ಅಸಮಾಧಾನ ತೋಡಿ
ಕೊಂಡಿದ್ದಾರೆ. ‘ಇನ್ನೇನು ಒಂದು ವರ್ಷದಲ್ಲಿ ತಮ್ಮ ಅಧಿಕಾರದ ಅವಧಿ ಮುಕ್ತಾಯವಾಗಿದೆ. ಸರ್ಕಾರ ಅಮೃತ ನಗರೋತ್ಥಾನ ಯೋಜನೆ ಹೆಸರಿನಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದೆ. ಕ್ರಿಯಾಯೋಜನೆಗೆ ಅನುಮೋದನೆ ನೀಡಲು ವಿಳಂಬ ಮಾಡಿದರೆ, ಇನ್ನುಳಿದ ಒಂದು ವರ್ಷದ ಅವಧಿಯಲ್ಲಿ ಕಾಮಗಾರಿ ಅನುಷ್ಠಾನಗೊಳಿಸುವುದು ಕಷ್ಟ’ ಎಂಬುದು ಶಾಸಕರ ಅಳಲು.

‘ಅಮೃತ ನಗರೋತ್ಥಾನ ಯೋಜನೆಯಡಿ ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಮುಖ್ಯಮಂತ್ರಿಯವರು ಆಡಳಿತ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗಿಂತ ತುಂಬಾ ಕಡಿಮೆ ಮೊತ್ತದ ಅನುದಾನ ಹಂಚಿಕೆ ಮಾಡಿದ್ದಾರೆ. ಈಗಾಗಲೇ ಘೋಷಣೆ ಮಾಡಿರುವ ಅನುದಾನದಡಿ ರೂಪಿಸಿದ ಕ್ರಿಯಾಯೋಜನೆಗಳಿಗೆ ಕಾರ್ಯಾದೇಶ ನೀಡುವುದಕ್ಕೂ ವಿಳಂಬ ಧೋರಣೆ ಅನುಸರಿಸುತ್ತಿರುವುದು ದುರದೃಷ್ಟಕರ’ ಎಂದು ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಬೇಸರ ವ್ಯಕ್ತಪಡಿಸಿದರು.

‘ಇನ್ನು ಕಾರ್ಯಾದೇಶ ನೀಡಿದರೂ, ಟೆಂಡರ್‌ ಕರೆದು ಕಾಮಗಾರಿ ಅನುಷ್ಠಾನಗೊಳಿಸಲು ಏಳೆಂಟು ತಿಂಗಳು ಕಾಲಾವಕಾಶ ಬೇಕು. ಅಷ್ಟರಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಾಗುತ್ತದೆ. ಕಾಂಗ್ರೆಸ್‌ನ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಚುನಾವಣೆಗೆ ಮುನ್ನ ಯಾವುದೇ ಕಾಮಗಾರಿಗಳು ನಡೆಯ
ಬಾರದು ಎಂಬ ಕಾರಣಕ್ಕೇ ಈ ರೀತಿ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

ಈ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹ 6 ಸಾವಿರ ಕೋಟಿ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಅವರು 2021ನೇ ಸಾಲಿನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ್ದರು. ಈ ಯೋಜನೆಗೆ 2022ರ ಜ. 6ರಂದು ನಡೆದ ಸಚಿವ ಸಂ‍ಪುಟ ಸಭೆಯಲ್ಲಿ ತಾತ್ವಿಕ ಅನುಮೊದನೆ ನೀಡಲಾಗಿತ್ತು. ಸರ್ಕಾರ ಈಗಾಗಲೇ ₹ 3,661 ಕೋಟಿ ಅನುದಾನವನ್ನು ಮೊದಲ ಕಂತಿನ ರೂಪದಲ್ಲಿ ನಗರದ 28 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಿದೆ.

ವಿಳಂಬ: ಅಧಿಕಾರಿ ವಿರುದ್ಧ ಆಕ್ರೋಶ

‘ಮುಖ್ಯಮಂತ್ರಿ ಸಚಿವಾಲಯದಲ್ಲಿ ಅನುದಾನ ಮಂಜೂರು ವಿಳಂಬವಾಗಲು ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಅಧಿಕಾರಿಯ ಹಸ್ತಕ್ಷೇಪವೇ ಕಾರಣ’ ಎಂದು ನಗರದ ಹಲವು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಚಿವಾಲಯದಲ್ಲಿ ಈ ಅಧಿಕಾರಿಯ ಮಾತಿಗೆ ಹೆಚ್ಚು ಬೆಲೆ. ಎಲ್ಲ ಕಡತಗಳಲ್ಲೂ ಹಸ್ತಕ್ಷೇಪ ಮಾಡುತ್ತಾರೆ. ಇದರಿಂದಾಗಿ, ಕಡತ ವಿಲೇವಾರಿ ತಿಂಗಳುಗಟ್ಟಲೆ ವಿಳಂಬವಾಗುತ್ತಿದೆ. ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಗಳ ನಿರ್ದೇಶನಕ್ಕೂ ಕಿಮ್ಮತ್ತು ಇಲ್ಲದಂತಾಗಿದೆ’ ಎಂದು ನಗರದ ಶಾಸಕರೊಬ್ಬರು ದೂರಿದರು.

‘ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದರೂ ಹೆಚ್ಚು ಪ್ರಯೋಜನ ಆಗಿಲ್ಲ. ಈ ಅಧಿಕಾರಿಯಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ’ ಎಂದು ಬಿಜೆಪಿ ಶಾಸಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT