ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಣತಿಗೆ ಮುಂದಾದ ಬಿಬಿಎಂಪಿ

2024 ಮಾರ್ಚ್‌ ಅಂತ್ಯಕ್ಕೆ ವರದಿ | ಮೊಬೈಲ್‌ ಆ್ಯಪ್‌ನಲ್ಲಿ ಪ್ರಭೇದ ಸಹಿತ ಮಾಹಿತಿ ದಾಖಲು
Published 7 ಅಕ್ಟೋಬರ್ 2023, 20:20 IST
Last Updated 7 ಅಕ್ಟೋಬರ್ 2023, 20:20 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಮರಗಳ ಗಣತಿ ನಡೆಸಲು ಬಿಬಿಎಂಪಿ ಕೊನೆಗೂ ನಿರ್ಧರಿಸಿದ್ದು, 2024ರ ಮಾರ್ಚ್‌ ಅಂತ್ಯಕ್ಕೆ ಗಣತಿ ಮುಗಿಸಲು ಯೋಜಿಸಿದೆ. ಮರ–ಗಿಡಗಳ ಚಿತ್ರ, ಪ್ರಭೇದ ಸಹಿತ ಸಮಗ್ರ ಮಾಹಿತಿ ಆ್ಯಪ್‌ನಲ್ಲಿ ದಾಖಲಾಗಲಿದೆ.

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಸಿದ್ಧಪಡಿಸಿರುವ ಮೊಬೈಲ್‌ ಆ್ಯಪ್‌ನಲ್ಲಿ ಮರಗಣತಿ ಕಾರ್ಯ ನಡೆಯಲಿದೆ. ಮರಗಳ ಗಣತಿ ಹಾಗೂ ಮಾಹಿತಿ ಸಂಗ್ರಹಕ್ಕೆ ಬಿಬಿಎಂಪಿ ಅರಣ್ಯ ವಿಭಾಗದಿಂದ ಅ.7ರಂದು ಟೆಂಡರ್‌ ಆಹ್ವಾನಿಸಲಾಗಿದೆ. ಎಂಟು ವಲಯಗಳಿಗೆ ಪ್ರತ್ಯೇಕ ಟೆಂಡರ್‌ ಕರೆಯಲಾಗಿದ್ದು, ಅ.25ಕ್ಕೆ ಟೆಂಡರ್‌ ಅಂತಿಮಗೊಳಿಸಲಾಗುತ್ತದೆ. ನಂತರದ ಪ್ರಕ್ರಿಯೆಗಳು ಮುಗಿದ ಮೇಲೆ, 2024ರ ಮಾರ್ಚ್‌ 31ರ ಅಂತ್ಯಕ್ಕೆ ಮರಗಣತಿ ಕಾರ್ಯ ಮುಗಿಸುವ ಯೋಜನೆ ಹೊಂದಲಾಗಿದೆ.

‘ಬೆಂಗಳೂರಿನಲ್ಲಿರುವ ಮರಗಳ ಗಣತಿ ಮಾಡಿ, ಅದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಮೂರು ತಿಂಗಳಲ್ಲಿ ಗಣತಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ಹೈಕೋರ್ಟ್‌ 2019ರಲ್ಲಿ ಬಿಬಿಎಂಪಿಗೆ ಸೂಚಿಸಿತ್ತು. ನಾಲ್ಕು ವರ್ಷವಾದ ಮೇಲೆ ಬಿಬಿಎಂಪಿ ಮರಗಣತಿಗೆ ಮುಂದಾಗಿದೆ.

ಬಿಬಿಎಂಪಿ ಪ್ರಾಯೋಗಿಕವಾಗಿ ನಡೆಸಿದ ಗಣತಿ ಆರು ಸಂಪುಟದಲ್ಲಿದ್ದು, 46,593 ಮರಗಳ ಮಾಹಿತಿಯನ್ನು ಮಾತ್ರ ಬಿಬಿಎಂಪಿ ಸದ್ಯಕ್ಕೆ ಹೊಂದಿದೆ.

‘ಮರಗಳ ಸಂರಕ್ಷಣೆ ಕಾಯಿದೆ ಪ್ರಕಾರ, ಗಣತಿ ನಡೆಯಲೇಬೇಕು.  ಹೈಕೋರ್ಟ್‌ 2019ರಲ್ಲಿ ಆದೇಶ ನೀಡಿದ್ದರೂ ಮರಗಣತಿ ಆರಂಭವಾಗಿಲ್ಲ. ಬಿಬಿಎಂಪಿ ಅಧಿಕಾರಿಗಳು ಏನೇನೋ ಕಾರಣಗಳನ್ನು ಹೇಳುತ್ತಿದ್ದರು’ ಎಂದು ಬೆಂಗಳೂರು ಎನ್ವಿರಾನ್‌ಮೆಂಟ್‌ ಟ್ರಸ್ಟ್‌ನ ದತ್ತಾತ್ರೇಯ ಟಿ.ದೇವರೆ ತಿಳಿಸಿದರು.

‘ಮರಗಳ ಗಣತಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುತ್ತಿದೆ. ಈ ಸಂಖ್ಯೆ ನಮಗೆ ದೊರೆತ ಮೇಲೆ ಮುಂದಿನ ಯೋಜನೆಗಳಿಗೆ ನೆರವಾಗುತ್ತದೆ. ಪ್ರತಿಯೊಂದು ಮರದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲೂ ಪ್ರಕಟಿಸುತ್ತೇವೆ. ಯಾವ ಯೋಜನೆಗಳಿಗೆ ಎಲ್ಲಿ ಎಷ್ಟು ಮರಗಳನ್ನು ಕಡಿಯಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಜೊತೆಗೆ, ಹೊಸದಾಗಿ ಸಸಿ ನೆಡುತ್ತಿರುವ ವಿವರವನ್ನೂ ಪ್ರಕಟಿಸಲಾಗುತ್ತದೆ’ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಡಿಸಿಎಫ್‌ ಸ್ವಾಮಿ ಹೇಳಿದರು.

ಬಾರ್‌ಕೋಡ್‌ ಫಲಕ

ಮರಗಣತಿಯ ತಂಡದಲ್ಲಿ ಸಸ್ಯಶಾಸ್ತ್ರಜ್ಞರು ಇರಲಿದ್ದಾರೆ. 5.5 ಸೆಂ.ಮೀ ಸುತ್ತಳತೆ ಅಥವಾ 1 ಮೀಟರ್‌ ಎತ್ತರವಿರುವ ಎಲ್ಲ ಮರ–ಗಿಡಗಳ ಗಣತಿ ಪ್ರಭೇದ ಸೇರಿದಂತೆ ಹಲವು ಮಾಹಿತಿ ಸಂಗ್ರಹ ನಡೆಯಲಿದೆ. ಗಣತಿ ಸಂದರ್ಭದಲ್ಲೇ ಪ್ರತಿ ಮರದ ಮೇಲೆ ಸಂಖ್ಯೆ ನಮೂದಿಸಲಾಗುತ್ತದೆ. ಇದೆಲ್ಲ ವರದಿ ತಯಾರಾದ ಮೇಲೆ ಮರದ ಚಿತ್ರ ಅದರ ಸಂಖ್ಯೆ ಜತೆಗೆ ಅದರ ವಯಸ್ಸು ಪ್ರಭೇದದ ಮಾಹಿತಿಯನ್ನು ಬಾರ್‌ಕೋಡ್‌ ಮೂಲಕ ಪಡೆದುಕೊಳ್ಳಬಹುದು. ರಸ್ತೆಯ ಒಂದು ಬದಿ ನಿಂತರೆ ಕಾಣುವ ಮರಗಳಿಗೆ ಸಂಬಂಧಿಸಿದ ಬಾರ್‌ಕೋಡ್‌ ಫಲಕವನ್ನು ಹಾಕಲಾಗುತ್ತದೆ. ಈ ಮೂಲಕ ಸಾರ್ವಜನಿಕರಿಗೆ ತಮ್ಮ ಪ್ರದೇಶದಲ್ಲಿರುವ ಮರಗಳ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. 

‘ಪ್ರತಿ ಮನೆಗೆ 2 ಮರ’

‘ನಗರದಲ್ಲಿರುವ ಪ್ರತಿ ಮನೆಗೆ ಎರಡು ಮರಗಳಿರಬೇಕು ಎಂಬ ನಿಯಮವನ್ನು ಜಾರಿಗೊಳಿಸಿ ಎಲ್ಲರಿಗೂ ಸಸಿ ನೆಟ್ಟು ಬೆಳೆಸಲು ಪ್ರೋತ್ಸಾಹಿಸಲಾಗುವುದು’ ಎಂದು ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ ತಿಳಿಸಿದರು. ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆಯ ನಿಯಮಗಳ ಪ್ರಕಾರ ನಗರ ಪ್ರದೇಶಗಳಲ್ಲಿ 222 ಚದರ ಮೀಟರ್‌ (2389 ಚದರಡಿ) ಮನೆ–ಕಟ್ಟಡಗಳ ನಿವೇಶನಗಳಲ್ಲಿ ಎರಡು ಮರಗಳಿರಬೇಕು. 892 ಚದರ ಮೀಟರ್‌ (9600 ಚದರಡಿ) ಒಳಗಿನ ಕಟ್ಟಡ–ನಿವೇಶನಗಳಲ್ಲಿ ಮೂರು ನಂತರ ವಿಸ್ತೀರ್ಣದಲ್ಲಿ ನಾಲ್ಕು ಮರಗಳಿರಬೇಕು. ಕೈಗಾರಿಕೆ ಹಾಗೂ ಸಂಸ್ಥೆಗಳ ಆವರಣದಲ್ಲಿ ಪ್ರತಿ ಹೆಕ್ಟೇರ್‌ಗೆ 25 ಮರಗಳಿರಬೇಕು. ಈ ನಿಯಮವನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದರು. ಸಮುದಾಯ ವಸತಿ ಪ್ರದೇಶದಲ್ಲಿ (ಗೇಟೆಡ್‌ ಕಮ್ಯುನಿಟಿ) ಪ್ರತಿ ಮನೆಗೆ ಎರಡು ಸಸಿ–ಮರಗಳನ್ನು ಕಡ್ಡಾಯ ಮಾಡಲಾಗುತ್ತದೆ. ನಂತರ ನಗರದ ಎಲ್ಲೆಡೆ ಜಾರಿಗೆ ತರಲಾಗುತ್ತದೆ. ನಗರದಲ್ಲಿ ಹಸಿರು ಹೊದಿಕೆ ಪ್ರಮಾಣ ಹೆಚ್ಚಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು. ‘ನಗರದಲ್ಲಿ 1.30 ಕೋಟಿ ಜನಸಂಖ್ಯೆಯ ಬೆಂಗಳೂರಿನಲ್ಲಿ ಏಳು ಜನರಿಗೆ ಒಂದು ಮರವಿದೆ. ಚಂಡೀಗಡ ಮತ್ತು ಗಾಂಧಿನಗರಗಳಲ್ಲಿ ಪ್ರತಿ ವ್ಯಕ್ತಿಗೆ ನಾಲ್ಕು ಗಿಡಗಳಿವೆ ನಾಸಿಕ್‌ನಲ್ಲಿ ಪ್ರತಿಯೊಬ್ಬರಿಗೆ ಎರಡು ಮರಗಳಿವೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಟಿ.ವಿ. ರಾಮಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT