ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಪಾವತಿ ತಂತ್ರಾಂಶದಲ್ಲಿ ದಾಖಲಾತಿ ನಾಪತ್ತೆ!

ಹಲವು ಅನುಮಾನಗಳಿಗೆ ಕಾರಣವಾದ ಡಿ.ಸಿ.ಬಿಲ್‌
Last Updated 19 ಏಪ್ರಿಲ್ 2022, 20:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯು 2022ರ ಏಪ್ರಿಲ್‌ 1ರ ನಂತರ ₹ 53.67 ಕೋಟಿಗಳಷ್ಟು ಡಿ.ಸಿ ಬಿಲ್‌ಗಳನ್ನು ಪಾವತಿ ಮಾಡಿದೆ. ಆದರೆ, ಅದರಲ್ಲಿ ಬಹುತೇಕ ಬಿಲ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳನ್ನು ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ(ಐಎಫ್‌ಎಂಎಸ್‌) ಅಪ್‌ಲೋಡ್‌ ಮಾಡಿಲ್ಲ.

ಯಾರಿಗೆ ಬಿಲ್‌ ಪಾವತಿಸಲಾಗಿದೆ, ಬಿಲ್ಲಿನ ಪ್ರತಿ, ಅದಕ್ಕೆ ಎಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಲಾಗಿದೆ... ಮುಂತಾದ ಯಾವುದೇ ವಿವರಗಳೂ ಐಎಫ್‌ಎಂಎಸ್‌ನಲ್ಲಿ ಲಭ್ಯ ಇಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬೇರೆ ಬೇರೆ ಪಿ–ಕೋಡ್‌ಗಳಿಗೆ ಸಂಬಂಧಿಸಿ ಡಿ.ಸಿ. ಬಿಲ್‌ಗಳ ಪಾವತಿಗೆ ವಲಯ ಮಟ್ಟದ ಅಧಿಕಾರಿಗಳ ಹಂತದಲ್ಲಿ ಕ್ರಮಕೈಗೊಳ್ಳಲಾಗಿದೆ. ಉದಾಹರಣೆಗೆ ಪಿ–2021 ಕೋಡ್‌ ಅಡಿ ಭೂಮಿ ಖರೀದಿ, ಅಂಬೇಡ್ಕರ್‌ ಭವನ ನಿರ್ಮಾಣ, ಮನೆ ನಿರ್ಮಾಣ, ಹಾಸ್ಟೆಲ್‌ಗಳ ನಿರ್ಮಾಣದ ಕಾರಣಕ್ಕೆ ಬಿಲ್‌ ಪಾವತಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವ್ಯಕ್ತಿಗತ ಸಹಾಯಧನ ನೀಡುವುದಕ್ಕೆ ಸಂಬಂಧಿಸಿದ ಪಿ– ಕೋಡ್‌ ಇದು. ಈ ಪಿ ಕೋಡ್‌ ಅಡಿ ಪಾವತಿಸಿದ ಎಲ್ಲ ಬಿಲ್‌ಗಳು ₹ 1.5 ಲಕ್ಷ, ₹ 2 ಲಕ್ಷ , ₹ 3 ಲಕ್ಷ, ₹ 4.5 ಲಕ್ಷ, ₹ 5 ಲಕ್ಷ.... ಹೀಗೆ ಎಲ್ಲ ಮೊತ್ತಗಳೂ ಪೂರ್ಣ ಸಂಖ್ಯೆಯಲ್ಲಿವೆ. ಆದರೆ, ಆ ಬಿಲ್‌ ಯಾರಿಗೆ ಪಾವತಿ ಆಗಿದೆ ಎಂಬ ವಿವರಗಳೇ ಐಎಫ್‌ಎಂಎಸ್‌ನಲ್ಲಿ ಇಲ್ಲ.

‘ಈ ಹಿಂದೆ ಎಲ್ಲ ಬಿಲ್‌ಗಳನ್ನು ಬಟವಾಡೆ ಅಧಿಕಾರಿಗಳೇ ಪಾವತಿ ಮಾಡುತ್ತಿದ್ದರು. ಈಗ ಬಿಲ್‌ ಪಾವತಿಯಲ್ಲಿ ಪಾರದರ್ಶಕತೆ ತರಲೆಂದೇ ಐಎಫ್‌ಎಂಎಸ್‌ ತಂತ್ರಾಂಶ ರೂಪಿಸಲಾಗಿದೆ. ಬಿಲ್ಲಿಗೆ ಸಂಬಂಧಿಸಿದ ದಾಖಲಾತಿಗಳನ್ನು ಐಎಫ್‌ಎಂಎಸ್‌ನಲ್ಲಿ ಅಪ್‌ಲೋಡ್‌ ಮಾಡುವುದು ಕಡ್ಡಾಯ. ಬಿಲ್‌ಗಳಿಗೆ ಸಂಬಂಧಿಸಿ ಜಿಎಸ್‌ಟಿ ವಿವರಗಳೂ ಇಲ್ಲದಿದ್ದರೆ ಅನುಮಾನ ಮೂಡುವುದು ಸಹಜ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪರಿಶೀಲನೆಯ ಭರವಸೆ: ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತರಾದ (ಹಣಕಾಸು) ತುಳಸಿ ಮದ್ದಿನೇನಿ, ‘ಬಿಲ್‌ಗಳಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನೂ ಐಎಫ್‌ಎಂಎಸ್‌ನಲ್ಲೂ ಅಪ್‌ಲೋಡ್‌ ಮಾಡಲಾಗುತ್ತದೆ. ಕೆಲವು ಬಿಲ್‌ಗಳಿಗೆ ಕಾರ್ಯಾದೇಶದ ವಿವರ ನೀಡಲಾಗುವುದಿಲ್ಲ. ಉದಾಹರಣೆಗೆ ವಿದ್ಯುತ್‌ ಬಿಲ್‌ ಇದ್ದರೆ, ಬಿಲ್‌ ಮಾತ್ರ ಅಪ್‌ಲೋಡ್‌ ಮಾಡಲಾಗುತ್ತದೆ’ ಎಂದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ ಕಲ್ಯಾಣ ಕಾರ್ಯಕ್ರಮಗಳಡಿ ನೀಡುವ ಒಂಟಿ ಮನೆಗಳ ಬಿಲ್‌ ಪಾವತಿಗೆ ಮೊದಲು ಬಿಲ್‌ ಮಾತ್ರ ನಮೂದಿಸುತ್ತಿದ್ದರು. ಏಪ್ರಿಲ್‌ 1ರಿಂದ ಒಂಟಿ ಮನೆಗೆ ಬಿಲ್‌ ಪಾವತಿ ಮಾಡಬೇಕಿದ್ದರೆ, ಮನೆಯ ಛಾಯಾಚಿತ್ರವನ್ನೂ ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯ ಮಾಡಿದ್ದೇವೆ. ಇದು ಪಾಲನೆ ಆಗುತ್ತಿದೆಯೋ ಇಲ್ಲವೋ ಎಂದು ಪರಿಶೀಲಿಸುತ್ತೇನೆ’ ಎಂದು ಅವರು ತಿಳಿಸಿದರು.

--

2022ರ ಏಪ್ರಿಲ್‌ 1ರ ಬಳಿಕ
₹ 53.67 ಕೋಟಿಗಳಷ್ಟು ಡಿ.ಸಿ ಬಿಲ್‌ ಪಾವತಿ

ಯಾವುದೇ ಬಿಲ್‌ ವಿವರಗಳು ಐಎಫ್‌ಎಂ ಎಸ್‌ನಲ್ಲಿ ಲಭ್ಯವಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT