ಮಂಗಳವಾರ, ಮೇ 24, 2022
23 °C

ಅನಧಿಕೃತ ಧಾರ್ಮಿಕ ಕಟ್ಟಡ ಗುರುತಿಸಲು ಫೆ 15ರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಜಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಎಲ್ಲಾ ಧಾರ್ಮಿಕ ಕಟ್ಟಡಗಳನ್ನು ಸಮಗ್ರವಾಗಿ ಸಮೀಕ್ಷೆ ನಡೆಸಿ ಇದೇ 15ರ ಒಳಗೆ ನಿಖರ ವರದಿ ನೀಡುವಂತೆ ಆಯುಕ್ತರು ಎನ್.ಮಂಜುನಾಥ್ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ವ್ಯಾಪ್ತಿಯ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸುವ ಬಗ್ಗೆ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. 

‘ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಬೇಕೆಂದು ಸುಪ್ರೀಂ ಕೋರ್ಟ್‌ 2009ರ ಸೆ. 29ರಂದು ಆದೇಶ ಮಾಡಿದೆ. ಇದಕ್ಕೆ ಮುನ್ನ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು, ಸ್ಥಳಾಂತರಿಸಲು ಅಥವಾ ಸಕ್ರಮಗೊಳಿಸಲು ಅವಕಾಶವಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಬೇಕು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತಹ ಧಾರ್ಮಿಕ ಕಟ್ಟಡಗಳ ಪಟ್ಟಿ ಮಾಡಿ ನೀಡಿದರೆ ಸಮೀಕ್ಷೆ ಆಧಾರದ ಮೇಲೆ ಅವುಗಳನ್ನು ತೆರವುಗೊಳಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ’ ಎಂದರು.

‘2009ರ ಸೆ. 29ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಇಂತಹ ಕಟ್ಟಡಗಳನ್ನು ಪಟ್ಟಿಮಾಡಿ, ನೋಟಿಸ್‌ ಜಾರಿಮಾಡಬೇಕು. ವಾರದಲ್ಲಿ ಸಮಜಾಯಿಷಿ ಪಡೆಯಬೇಕು. ಕಂದಾಯ ಅಧಿಕಾರಿಗಳು ಗುರುತಿಸಿದ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಎಂಜಿನಿಯರ್‌ಗಳು ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಬೇಕು’ ಎಂದು ತಿಳಿಸಿದರು.

ಸರ್ಕಾರಿ ಜಾಗದಲ್ಲಿ 1,588 ಅನಧಿಕೃತ ಧಾರ್ಮಿಕ ಕಟ್ಟಡಗಳಿವೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಹೈಕೋರ್ಟ್  ಮುಖ್ಯನ್ಯಾಯಮೂರ್ತಿಯವರು ಇದನ್ನು ಒಪ್ಪಿಲ್ಲ. ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಸಮಗ್ರ ಮಾಹಿತಿ ನೀಡಬೇಕು ಎಂದು ಆದೇಶ ಮಾಡಿದ್ದರು. 

‘ಬಿಬಿಎಂಪಿ ಅಧಿಕಾರಿಗಳು ಧಾರ್ಮಿಕ ಕಟ್ಟಡಗಳು ನಿರ್ಮಿಸಿರುವ ಜಾಗ, ಅದರ ದಾಖಲೆ (ಜಮೀನಿನ ಕಾಗದ ಪತ್ರ) ಹಾಗೂ ಧಾರ್ಮಿಕ ಕಟ್ಟಡ ನಿರ್ಮಿಸಲು ಯಾವುದಾದರೂ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕು. ಅವು ಸರ್ಕಾರಿ ಜಾಗದಲ್ಲಿವೆಯೇ ಅ‌ಥವಾ ಖಾಸಗಿ ಜಾಗದಲ್ಲಿವೆಯೇ ಎಂಬುದನ್ನು ನಿಖರವಾಗಿ ಗುರುತಿಸಬೇಕು’ ಎಂದು ಆಯುಕ್ತರು ಸೂಚನೆ ನೀಡಿದರು.

–0–

ಭಾವಚಿತ್ರ ತೆರವುಗೊಳಿಸಲು ಸೂಚನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರದ ಅಥವಾ ಪಾಲಿಕೆ ಅನುದಾನದಿಂದ ನಿರ್ಮಿಸಿರುವ ಕಟ್ಟಡ, ಕುಡಿಯುವ ನೀರಿನ ಘಟಕ, ಬಸ್ ತಂಗುದಾಣ ಮೊದಲಾದ ಮೂಲಸೌಕರ್ಯಗಳಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಸಚಿವರ ಭಾವಚಿತ್ರಗಳನ್ನು ಅಳವಡಿಸಲು ಮಾತ್ರ ಅವಕಾಶ ಇದೆ. ಇವುಗಳಲ್ಲಿ ಶಾಸಕರು, ಪಾಲಿಕೆ ಸದಸ್ಯರಾಗಿದ್ದವರ ಭಾವಚಿತ್ರಗಳಿದ್ದರೆ ಅವುಗಳನ್ನು ಕೂಡಲೆ ತೆರವುಗಳಿಸಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

–0–

‘ಸುರಕ್ಷಾ ಕ್ರಮ ಪಾಲನೆ ಕಡ್ಡಾಯ’

ನಗರದಲ್ಲಿ ಬಿಬಿಎಂಪಿ, ಬೆಸ್ಕಾಂ, ಸ್ಮಾರ್ಟ್ ಸಿಟಿ, ಬಿಡಿಎ, ಜಲಮಂಡಳಿ ಸೇರಿದಂತೆ ಇನ್ನಿತರೆ ಯಾವುದೇ ಇಲಾಖೆಯ ಕಾಮಗಾರಿಗಳು ನಡೆಯುತ್ತಿದ್ದರೂ ಸ್ಥಳದಲ್ಲಿ ಕಡ್ಡಾಯವಾಗಿ ಬ್ಯಾರಿಕೇಡ್, ಮಾರ್ಗ ಬದಲಾವಣೆ ಸೂಚನೆ, ಕಾಮಗಾರಿ ನಡೆಯುತ್ತಿರುವುದರ ಸೂಚನೆ ಫಲಕ, ವಿದ್ಯುತ್ ದೀಪ ಅಳವಡಿಸುವ ಮೂಲಕ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪಾಲನೆ ಮಾಡದ ಗುತ್ತಿಗೆದಾರರಿಗೆ ಕೂಡಲೆ ನೋಟೀಸ್ ಜಾರಿಮಾಡಬೇಕು ಎಂದು  ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು