ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಬಿಬಿಎಂಪಿ: ಆಸ್ತಿ ಡಿಜಿಟಲೀಕರಣ ಅಭಿಯಾನ ಆರಂಭ

Published 5 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಪಿಎಂಪಿಯಲ್ಲಿ ‘ಎ’ ಖಾತಾ ಮತ್ತು ‘ಬಿ’ ಖಾತಾ ಪ್ರಮಾಣ ಪತ್ರಗಳನ್ನು ತ್ವರಿತವಾಗಿ ನೀಡಲು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ವಿಶೇಷ ಅಭಿಯಾನ ಆರಂಭಗೊಂಡಿದೆ.

ಭ್ರಷ್ಟಾಚಾರವನ್ನು ನಿಯಂತ್ರಿಸಲು ಮತ್ತು ಕೆಲಸದ ವಿಳಂಬವನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಆಸ್ತಿ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ಮೊದಲ ಹಂತದ ಪ್ರಕ್ರಿಯೆ ಆರಂಭವಾಗಿದೆ. ಸಹಾಯಕ ಕಂದಾಯ ಅಧಿಕಾರಿಗಳು (ಎಆರ್‌ಒಗಳು) ಶನಿವಾರ ಬಿಬಿಎಂಪಿಯ ಎಂಟು ವಲಯ ಕಚೇರಿಗಳಲ್ಲಿ ದಾಖಲೆಗಳನ್ನು ನಿರ್ದಿಷ್ಟ ರೂಪದಲ್ಲಿ ಡಿಜಿಟಲೀಕರಣಗೊಳಿಸುವ ಕಾರ್ಯ ನಡೆಸಿದರು. ಸುಮಾರು 20 ಲಕ್ಷ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಬೇಕಿದೆ. ಅದಕ್ಕಾಗಿ ಕಂದಾಯ ಇಲಾಖೆ ಖಾಸಗಿ ಏಜೆನ್ಸಿಗಳ ಸಹಾಯ ಪಡೆದುಕೊಂಡಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಡಿ.ಕೆ. ಶಿವಕುಮಾರ್‌ ಅವರ ಸೂಚನೆಯ ಮೇರೆಗೆ ಡಿಜಿಟಲ್‌ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಬಹುತೇಕ ಬಿಬಿಎಂಪಿ ವಾರ್ಡ್‌ಗಳಲ್ಲಿ ಖಾತಾ ಪ್ರಮಾಣಪತ್ರಗಳನ್ನು ಮುದ್ರಿತರೂಪದಲ್ಲಿ ನೀಡಲಾಗುತ್ತಿದೆ. ಸ್ಕ್ಯಾನಿಂಗ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಸ್ತಿ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲ್‌ಗೆ ವರ್ಗಾಯಿಸಲಾಗುವುದು. ಆಗ ‘ಬಿ’ ಖಾತಾ ಪಟ್ಟಿಯಲ್ಲಿರುವ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ಪ್ರಮಾಣ ಪತ್ರ ನೀಡುವಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಬಿಬಿಎಂಪಿಗೆ ಉಂಟಾಗುವ ಆದಾಯ ನಷ್ಟವೂ ತಪ್ಪಲಿದೆ.

‘ಡಿಜಿಟಲೀಕರಣದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಲಯ ಜಂಟಿ ಆಯುಕ್ತರು ಮತ್ತು ಜಿಲ್ಲಾಧಿಕಾರಿಗೆ ವಹಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವ ವಿಶ್ವಾಸವಿದೆ. ಆಸ್ತಿ ಸಂಬಂಧಿತ ಎಲ್ಲ ವಹಿವಾಟುಗಳನ್ನು ಆನ್‌ಲೈನ್‌ ಮೂಲಕ ಮಾಡುವುದರಿಂದ ದುರುಪಯೋಗವೂ ತಪ್ಪಲಿದೆ’ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT