ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಮಾಲ್‌ ಆಫ್‌ ಏಷ್ಯಾ 16 ದಿನ ಬಂದ್‌ಗೆ ಆದೇಶ

Published 30 ಡಿಸೆಂಬರ್ 2023, 16:13 IST
Last Updated 30 ಡಿಸೆಂಬರ್ 2023, 16:13 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ಹೋಬಳಿ ಬ್ಯಾಟರಾಯನಪುರದ (ಬಳ್ಳಾರಿ ರಸ್ತೆ) ಮಾಲ್‌ ಆಫ್‌ ಏಷ್ಯಾವನ್ನು 16 ದಿನಗಳ ಬಂದ್‌ ಮಾಡುವಂತೆ ನಗರ ಪೊಲೀಸ್‌ ಕಮಿಷನರ್‌ ಆದೇಶಿಸಿದ್ದಾರೆ. ಡಿ.31ರಿಂದ ಜನವರಿ 15ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ಇತ್ತೀಚೆಗಷ್ಟೇ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಅಕ್ಷರ ಬಳಸದ ಆರೋಪದ ಮೇಲೆ ಫೋನಿಕ್ಸ್‌ ಮಾಲ್ ಆಫ್ ಏಷ್ಯಾ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಾಲ್‌ಗೆ ನುಗ್ಗಿ ಗಲಾಟೆ ನಡೆಸಲಾಗಿತ್ತು. ಈ ಬೆನ್ನಲ್ಲೇ ಸಾರ್ವಜನಿಕ ಶಾಂತಿ ಕಾಪಾಡುವುದು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಿಸುವ ದೃಷ್ಟಿಯಿಂದ ಮಾಲ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಈ ಆದೇಶ ಹೊರಡಿಸಿದ್ದಾರೆ.

ಮಾಲ್‌ ವಿರುದ್ಧ ದೂರು: ಅಲ್ಲದೇ ಮಾಲ್ ಆಫ್ ಏಷ್ಯಾ ವಿರುದ್ಧ ಕೆಲವು ದಿನಗಳ ಹಿಂದೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಮಾಲ್‌ನಿಂದಾಗಿ ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಅವಕಾಶವಾಗುತ್ತಿಲ್ಲ ಎಂದು ಆರೋಪಿಸಿದ್ದರು. ಅಲ್ಲದೆ, ಆಂಬುಲೆನ್ಸ್‌ಗಳ ಓಡಾಟಕ್ಕೂ ತೊಂದರೆಯಿದೆ. ವಿಮಾನ ನಿಲ್ದಾಣಕ್ಕೆ ಹೋಗುವವರಿಗೂ ತೊಂದರೆಯಾಗುತ್ತಿದೆ ಎಂದು ಮಾಲ್ ವಿರುದ್ಧ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದ್ದರು. ಆಗ ಮಾಲ್‌ನಲ್ಲಿ ಹಲವು ನ್ಯೂನತೆಗಳು ಕಂಡು ಬಂದಿದ್ದವು. ವಾಹನಗಳ ನಿಲುಗಡೆಗೆ ಸರಿಯಾದ ಕ್ರಮ ತೆಗೆದುಕೊಂಡಿರಲಿಲ್ಲ. ಸುರಕ್ಷತಾ ಕ್ರಮ ಸಹ ಇಲ್ಲದಿರುವುದು ಕಂಡುಬಂದಿತ್ತು.

ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಆದರೆ, ಮಾಲ್ ಸಿಬ್ಬಂದಿ ಹಾಗೂ ವಾಣಿಜ್ಯ ಮಳಿಗೆಗಳ ಮಾಲೀಕರು ಹಾಗೂ ಕೆಲಸಗಾರರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮುಂದಿನ 16 ದಿನಗಳ ಕಾಲ ಮಾಲ್‌ಗೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT