ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಕಾಂಪ್ಲೆಕ್ಸ್‌ಗಳು ಇನ್ನು ಶಾಪಿಂಗ್‌ ಮಾಲ್‌

Published 6 ಮೇ 2024, 15:47 IST
Last Updated 6 ಮೇ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ಆರು ವರ್ಷಗಳ ಹಿಂದೆ ಅಂತಿಮಗೊಂಡಿದ್ದ ವಿವಾದಾದತ್ಮಕ ಒಪ್ಪಂದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮರುಜೀವ ನೀಡಲು ನಿರ್ಧರಿಸಿದ್ದು, ಏಳು ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್‌ ಮಾಲ್‌ಗಳನ್ನಾಗಿ ಪರಿವರ್ತಿಸಲಿದೆ.

ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್‌ ಮಾಲ್‌ಗಳನ್ನಾಗಿ ಪರಿವರ್ತಿಸಲು 60 ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರತಿ ವರ್ಷ ಬಿಡಿಎಗೆ ₹40 ಕೋಟಿ ಆದಾಯ ಬರಲಿದೆ.

‘ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಯೋಜನೆಯ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡಿದೆ. ಈ ಯೋಜನೆ ಮುಂದಿನ ಪ್ರಕ್ರಿಯೆಗಳನ್ನು ಶೀಘ್ರವೇ ನಾವು ಪೂರ್ಣಗೊಳಿಸಲಿದ್ದೇವೆ’ ಎಂದು ಬಿಡಿಎ ಆಯುಕ್ತ ಎನ್‌. ಜಯರಾಂ ತಿಳಿಸಿದರು.

ಕೋರಮಂಗಲ, ಎಚ್‌ಎಸ್ಆರ್‌ ಲೇಔಟ್‌, ಆರ್‌.ಟಿ ನಗರ, ಸದಾಶಿವನಗರಗಳಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಎಂ–ಎಫ್‌ಎಆರ್‌ ಡೆವಲಪರ್ಸ್‌ಗೆ ಬಿಡಿಎ ಗುತ್ತಿಗೆಗೆ ನೀಡಿದೆ. ಇಂದಿರಾನಗರದಲ್ಲಿರುವ ಕಾಂಪ್ಲೆಕ್ಸ್ ಅನ್ನು ಎಂಬೆಸ್ಸಿ ಗ್ರೂಪ್‌ ಮರುಅಭಿವೃದ್ಧಿಗೊಳಿಸಲಿದೆ.

ವಾಣಿಜ್ಯ ಕೇಂದ್ರವಾಗಿ ಕಾಂಪ್ಲೆಕ್ಸ್‌ಗಳನ್ನು ಪರಿವರ್ತಿಸುತ್ತಿರುವುದು ಬಿಡಿಎಯ ನಿಯಮಗಳಿಗೆ ವಿರುದ್ಧವಾಗಿದೆ. ಕಾಂಪ್ಲೆಕ್ಸ್‌ಗಳು ನಾಗರಿಕ ಸೌಲಭ್ಯದ ತಾಣಗಳಾಗಿರಬೇಕು ಎಂಬುದು ಬಿಡಿಎ ನಿಯಮಗಳಲ್ಲಿದೆ.

‘ಬಿಡಿಎ ಕಾಂಪ್ಲೆಕ್ಸ್‌ಗಳನ್ನು ವಾಣಿಜ್ಯ ಕೇಂದ್ರಗಳನ್ನಾಗಿ ಪರಿವರ್ತಿಸಿದರೆ ಬಿಡಿಎಗೆ ಹೆಚ್ಚಿನ ಸ್ಥಳಾವಕಾಶ ಸಿಗಲಿದೆ. ಈಗಿರುವ ಸ್ಥಳಕ್ಕಿಂತ ಸುಮಾರು 21ಪಟ್ಟು ಅಭಿವೃದ್ಧಿಗೊಂಡಿರುವ ಸ್ಥಳ ಈ ಏಳು ಕಾಂಪ್ಲೆಕ್ಸ್‌ಗಳಲ್ಲಿ ಸಿಗಲಿದೆ. ಇಂದಿರಾನಗರದಲ್ಲಿರುವ ಕಾಂಪ್ಲೆಕ್ಸ್‌ ಅನ್ನು ಎರಡು ಟವರ್‌ಗಳಾಗಿ ನಿರ್ಮಾಣವಾಗಲಿದ್ದು, 10 ಅಂತಸ್ತಿನಲ್ಲಿ ಕಚೇರಿಗಳು, ಐದು ಅಂತಸ್ತಿನಲ್ಲಿ ಶಾಪಿಂಗ್‌ ಹಾಗೂ ಮನೋರಂಜನಾ ತಾಣಗಳಿರುತ್ತವೆ. ಸದಾಶಿವನಗರದಲ್ಲಿ ಒಂದು ಅಂತಸ್ತಿನಲ್ಲಿದ್ದು, ಇದನ್ನು ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವನ್ನಾಗಿ ಪರಿವರ್ತಿಸಲಾಗುತ್ತದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

‘2018ರಲ್ಲೇ ಟೆಂಡರ್‌ ಅಂತಿಮಗೊಂಡು ಡೆವಲಪರ್ಸ್‌ಗಳನ್ನು ಅಂತಿಮಗೊಳಿಸಲಾಗಿತ್ತು. ಆದರೆ ಆರು ವರ್ಷವಾದರೂ ಯೋಜನೆ ಆರಂಭವಾಗಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.

2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ಈ ಟೆಂಡರ್‌ ಅನ್ನು ರದ್ದುಗೊಳಿಸಿದ್ದರು. ಇದನ್ನು ಬಿಡಿಎ ಡೆವಲಪರ್ಸ್‌ಗಳಿಗೆ ತಿಳಿಸಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಪ್ರಸ್ತಾವ ಮತ್ತೊಮ್ಮೆ ಅವರ ಮುಂದೆ ಬಂದಿದ್ದರೂ ಮುಂದುವರಿದಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ವರ್ಷ ಅಧಿಕಾರಕ್ಕೆ ಬಂದಮೇಲೆ ಅವರು ಹಿಂದೆ ಅಧಿಕಾರದಲ್ಲಿದ್ದಾಗ ಚಾಲನೆ ನೀಡಿದ್ದ ಈ ಯೋಜನೆಗೆ ಮರುಜೀವ ಬಂದಿದೆ.

ವಿರೋಧ: ಇಂದಿರಾನಗರದಲ್ಲಿರುವ ನಾಗರಿಕ ಸಂಘ–ಸಂಸ್ಥೆಗಳು ಬಿಡಿಎಯ ಈ ಯೋಜನೆಯನ್ನು ವಿರೋಧಿಸಿವೆ. ‘ಇಂದಿರಾನಗರದಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ ನಾಗರಿಕರಿಗೆ ಅಗತ್ಯವಾದ ಆರ್‌ಟಿಒ ಕಚೇರಿ, ಬೆಂಗಳೂರು ಒನ್‌ನಂತಹ ಕಚೇರಿಗಳಿವೆ. ಈ ಕಾಂಪ್ಲೆಕ್ಸ್ ಸಂಪೂರ್ಣವಾಗಿ ಸಾರ್ವಜನಿಕರಿಗೆ ಅಗತ್ಯವಾದ ಸೌಕರ್ಯಗಳನ್ನು ಮಾತ್ರ ಹೊಂದಿರಬೇಕು. ಬಿಡಿಎ ಇದೀಗ ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಇಳಿದಿದೆ ಎನಿಸುತ್ತಿದೆ. ಬಿಡಿಎ ಕಾನೂನುಬಾಹಿರವಾದ ಕೆಲಸ ಮಾಡಲು ಮುಂದಾಗಿದೆ’ ಎಂದು ‘ಐ ಚೇಂಜ್‌ ಇಂದಿರಾನಗರ’ದ ಸ್ನೇಹಾ ನಂದಿಹಾಳ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT