ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯೂಟಿ ಪಾರ್ಲರ್ ಯುವತಿಗೆ ಕಿರುಕುಳ: ಸ್ನೇಹಿತ ಬಂಧನ

Last Updated 8 ಜನವರಿ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯೂಟಿ ಪಾರ್ಲರ್‌ ಯುವತಿಯನ್ನು ಪರಿಚಯಿಸಿಕೊಂಡು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಆರೋಪಿ ಸಮರ್ ಪರಮಾನಿಕ್ (47) ಎಂಬುವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪಶ್ಚಿಮ ಬಂಗಾಳದ ಸಮರ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಹಲಸೂರು ಗೇಟ್ ಠಾಣೆ ಸಮೀಪದಲ್ಲಿ ವಾಸವಿದ್ದ. ನಗರದ ಅವೆನ್ಯೂ ರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಕೃತ್ಯದ ಬಗ್ಗೆ ಯುವತಿ ಇತ್ತೀಚೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಪಶ್ಚಿಮ ಬಂಗಾಳದ 23 ವರ್ಷದ ಯುವತಿ, ಬ್ಯೂಟಿಷಿಯನ್ ಕೋರ್ಸ್ ಅಧ್ಯಯನಕ್ಕಾಗಿ 2019ರಲ್ಲಿ ನಗರಕ್ಕೆ ಬಂದಿದ್ದರು. ಕೋರ್ಸ್ ಮುಗಿಸಿ ಯಲಹಂಕದಲ್ಲಿರುವ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಅದೇ ಬ್ಯೂಟಿ ಪಾರ್ಲರ್‌ಗೆ ಆರೋಪಿ ಭೇಟಿ ನೀಡಿದ್ದ. ಒಂದೇ ಊರಿನವರಾಗಿದ್ದರಿಂದ, ಇಬ್ಬರ ನಡುವೆ ಸ್ನೇಹ ಏರ್ಪಟ್ಟಿತ್ತು’ ಎಂದು ತಿಳಿಸಿದರು.

‘ಇಬ್ಬರ ನಡುವೆ ಸಲುಗೆ ಸಹ ಬೆಳೆದಿತ್ತು. ಇಬ್ಬರೂ ಹಲವು ಬಾರಿ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಅದರ ಫೋಟೊ ಹಾಗೂ ವಿಡಿಯೊವನ್ನು ಆರೋಪಿ ಚಿತ್ರೀಕರಿಸಿಟ್ಟುಕೊಂಡಿದ್ದ. ಯುವತಿಯನ್ನು ಡ್ಯಾನ್ಸ್ ಬಾರ್‌ನಲ್ಲಿ ಕೆಲಸಕ್ಕೆ ಸೇರಿಸಿದ್ದ ಆರೋಪಿ, ವೇತನದಲ್ಲಿ ಕಮಿಷನ್ ಪಡೆಯುತ್ತಿದ್ದ. ಜೊತೆಗೆ, ಯುವತಿಗೆ ಕಿರುಕುಳ ಸಹ ನೀಡುತ್ತಿದ್ದ. ಇದರಿಂದ ಬೇಸತ್ತ ಯುವತಿ, ವಾಪಸು ತಮ್ಮೂರಿಗೆ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

‘ತಮ್ಮೂರಿನಲ್ಲಿ ಪರಿಚಯಸ್ಥರೊಬ್ಬರನ್ನು ಯುವತಿ ಮದುವೆಯಾಗಿದ್ದರು. ನಂತರ, ದಂಪತಿ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದು ಕೋಡಿಗೇಹಳ್ಳಿಯಲ್ಲಿ ವಾಸವಿದ್ದರು. ಇದು ಗೊತ್ತಾಗುತ್ತಿದ್ದಂತೆ ಪುನಃ ಯುವತಿಯನ್ನು ಸಂಪರ್ಕಿಸಿದ್ದ ಆರೋಪಿ, ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸಲಾರಂಭಿಸಿದ್ದ. ಈ ರೀತಿ ಮಾಡದಿದ್ದರೆ, ಖಾಸಗಿ ಕ್ಷಣಗಳ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ’ ಎಂದು ತಿಳಿಸಿದರು.

‘ಆರೋಪಿ ಕೃತ್ಯವನ್ನು ಯುವತಿ, ಪತಿಗೆ ತಿಳಿಸಿದ್ದರು. ನಂತರವೇ ಠಾಣೆಯಲ್ಲಿ ದೂರು ದಾಖಲಿಸಿದ್ದರು’ ಎಂದು +ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT