ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕನ ಕೊಂದು ₹ 75 ಲಕ್ಷ ದೋಚಿದ್ದ ಆರೋಪಿಗಳ ಸೆರೆ

2018ರ ಪ್ರಕರಣ ಭೇದಿಸಿದ ಪೊಲೀಸರು l ಹಣ ಹಂಚಿಕೊಂಡು ಕಾರು, ಚಿನ್ನ ಖರೀದಿಸಿದ್ದ ಆರೋಪಿಗಳು
Last Updated 22 ಮೇ 2021, 19:39 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂ ಯಂತ್ರಕ್ಕೆ ಹಣ ತುಂಬುವ ವಾಹನದ ಚಾಲಕನನ್ನು ಕೊಂದು ₹ 75 ಲಕ್ಷ ಸಮೇತ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಎನ್‌. ಕುಮಾರ್ (23), ಕೆ. ಮಧುಸೂದನ್ (23), ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಎಂ.ಬಿ. ಪ್ರಸನ್ನ (31) ಹಾಗೂ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಯು. ಮಹೇಶ್ (22) ಬಂಧಿತರು. ಅವರಿಂದ ₹ 3.50 ಲಕ್ಷ ನಗದು, ಮೂರು ದ್ವಿಚಕ್ರ ವಾಹನಗಳು, ಎರಡು ಕಾರುಗಳು ಹಾಗೂ 121 ಗ್ರಾಂ ಚಿನ್ನದ ಆಭರಣ ಜಪ್ತಿ ಮಾಡಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ಹೇಳಿದರು.

‘ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 2018ರಲ್ಲಿ ಚಾಲಕ ಅಬ್ದುಲ್ ಶಾಹೀದ್‌ ಸಮೇತ ₹ 75 ಲಕ್ಷ ದರೋಡೆ ಆಗಿತ್ತು. ಚಾಲಕನೇ ಹಣ ಕದ್ದುಕೊಂಡು ಹೋಗಿರುವ ಅಯಾಮದಲ್ಲಿ ತನಿಖೆ ನಡೆದಿತ್ತು. ಚಾಲಕನ ಸುಳಿವು ಸಿಗದಿದ್ದರಿಂದ ತನಿಖೆ ಅರ್ಧಕ್ಕೆ ನಿಂತಿತ್ತು. ಇದೇ ಪ್ರಕರಣವನ್ನು ಹೊಸದಾಗಿ ರಚನೆಗೊಂಡ ಗೋವಿಂದಪುರ ಠಾಣೆಗೆ ವರ್ಗಾಯಿಸಲಾಗಿತ್ತು. ಇನ್‌ಸ್ಪೆಕ್ಟರ್‌ ಆರ್. ಪ್ರಕಾಶ್ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಘಟನೆಯ ದೃಶ್ಯಗಳನ್ನು ಪರಿಶೀಲಿಸಿತ್ತು.’

‘ಆರೋಪಿ ಎನ್‌.ಕುಮಾರ್ ಘಟನಾ ಸ್ಥಳದಲ್ಲಿ ಓಡಾಡಿದ್ದ ದೃಶ್ಯ ಗಮನಿಸಿದ್ದ ತಂಡ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಹಾಗೂ ಕೊಲೆ ರಹಸ್ಯ ಬಾಯ್ಬಿಟ್ಟ. ನಂತರವೇ ಉಳಿದ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ಹೇಳಿದರು.

ಹಣದ ಆಮಿಷವೊಡ್ಡಿ ಚಾಲಕನ ಕರೆದೊಯ್ದರು; ‘ಆರೋಪಿಗಳಾದ ಕುಮಾರ್ ಹಾಗೂ ಪ್ರಸನ್ನ, ಸೇಫ್ ಗಾರ್ಡ್ ರೈಡರ್ಸ್ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲ ವರ್ಷ ಚಾಲಕರಾಗಿ ಕೆಲಸ ಮಾಡಿದ್ದರು. ಅದಕ್ಕೆ ರಾಜೀನಾಮೆ ನೀಡಿದ್ದ ಅವರು, ಹಣದ ಸಮೇತ ವಾಹನ ಕದ್ದು ಪರಾರಿಯಾಗಲು ಯು. ಮಹೇಶ್ ಜೊತೆ ಸೇರಿ ಸಂಚು ರೂಪಿಸಿದ್ದರು’ ಎಂದೂ ಶರಣಪ್ಪ ತಿಳಿಸಿದರು.

‘ಚಾಲಕ ಅಬ್ದುಲ್ ಶಾಹೀದ್ ಅವರು ₹ 75 ಲಕ್ಷ ಸಮೇತ ವಾಹನದಲ್ಲಿ ಹೊರಟಿದ್ದಾಗ ಆರೋಪಿಗಳು ಹಿಂಬಾಲಿಸಿದ್ದರು. ಕಸ್ಟೋಡಿಯನ್ ಹಾಗೂ ಸೆಕ್ಯುರಿಟಿ ಸಿಬ್ಬಂದಿ, ಯಂತ್ರದಲ್ಲಿ ಹಣ ತುಂಬಲೆಂದು ವಾಹನದಿಂದ ಇಳಿದು ಘಟಕದೊಳಗೆ ಹೋಗಿದ್ದರು. ಅದೇ ಸಂದರ್ಭದಲ್ಲೇ ಅಬ್ದುಲ್‌ನನ್ನು ಮಾತನಾಡಿಸಿದ್ದ ಆರೋಪಿಗಳು, ‘ವಾಹನ ಸಮೇತ ಎಲ್ಲರೂ ಹೊರಟು ಹೋಗೋಣ. ಹಣದಲ್ಲಿ ನಿನಗೂ ಪಾಲು ಕೊಡುತ್ತೇವೆ’ ಎಂದಿದ್ದರು. ಅದನ್ನು ನಂಬಿದ್ದ ಅಬ್ದುಲ್, ಹಣವಿದ್ದ ವಾಹನ ಸಮೇತ ಆರೋಪಿಗಳ ಜೊತೆ ಹೋಗಿದ್ದ’ ಎಂದೂ ವಿವರಿಸಿದರು.

ಸಕಲೇಶಪುರ ಘಾಟ್‌ನಲ್ಲಿ ಚಾಲಕನ ಕೊಲೆ

‘ಚಾಲಕನನ್ನು ಸಕಲೇಶಪುರಕ್ಕೆ ಕರೆದೊಯ್ದಿದ್ದ ಆರೋಪಿಗಳು, ಅಲ್ಲಿಯೇ ಅವರನ್ನು ಕೊಂದು ಘಾಟ್‌ನಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದರು. ಮೃತದೇಹ ಸಿಕ್ಕ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಶರಣಪ್ಪ ಹೇಳಿದರು.

‘ಶ್ರೀರಂಗಪಟ್ಟಣದ ವಸತಿಗೃಹಕ್ಕೆ ಹೋಗಿದ್ದ ಆರೋಪಿಗಳು, ₹ 75 ಲಕ್ಷವನ್ನು ಸಮ ಪ್ರಮಾಣದಲ್ಲಿ ಹಂಚಿಕೊಂಡು ತಮ್ಮ ಊರುಗಳಿಗೆ ತೆರಳಿದ್ದರು. ನಂತರ, ಕಾರು ಖರೀದಿಸಿ ಚಾಲಕರಾಗಿ ವೃತ್ತಿ ಆರಂಭಿಸಿದ್ದರು. ಕೆಲವರು ಚಿನ್ನ ಖರೀದಿಸಿದ್ದರು’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT