ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೊಬೈಲ್‌ನಲ್ಲೇ ಪರೀಕ್ಷಾ ವರದಿ, ಚಿಕಿತ್ಸಾ ವಿವರ

ನಗರದ ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಪ್ರಯೋಗ
Published 12 ಜೂನ್ 2023, 0:19 IST
Last Updated 12 ಜೂನ್ 2023, 0:19 IST
ಅಕ್ಷರ ಗಾತ್ರ

ಬೆಂಗಳೂರು: ಅನಾರೋಗ್ಯ ಸಮಸ್ಯೆಗಳಿಗೆ ನಡೆಸುವ ವಿವಿಧ ಪರೀಕ್ಷೆಗಳ ವರದಿ, ಚಿಕಿತ್ಸೆಯ ವಿವರಗಳನ್ನು ರೋಗಿಗಳು ತಮ್ಮ ಮೊಬೈಲ್‌ ಫೋನ್‌ಗಳ ಮೂಲಕವೇ ಪಡೆಯುವ ವ್ಯವಸ್ಥೆಯು ನಗರದ ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. 

ರೋಗಿಗಳು ಸರದಿಯಲ್ಲಿ ಕಾಯುವುದನ್ನು ತಪ್ಪಿಸಲು ಹಾಗೂ ಕಾಗದ ರಹಿತ ವೈದ್ಯಕೀಯ ಸೇವೆಗಳನ್ನು ಒದಗಿಸಲು ಆರೋಗ್ಯ ಇಲಾಖೆಯು ಈ ಯೋಜನೆ ಕೈಗೆತ್ತಿಕೊಂಡಿದೆ. ‘ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌’ನ ಭಾಗ ಇದಾಗಿದ್ದು, ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ ಹಾಗೂ ಸರ್.ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಈಗಾಗಲೇ ವಿಭಾಗವಾರು ಡಿಜಿಟಲೀಕರಣ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಆಸ್ಪತ್ರೆಗಳಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆಯನ್ನು ಆಧರಿಸಿ, ರಾಜ್ಯದಾದ್ಯಂತ ಸೇವೆ ವಿಸ್ತರಿಸಲು ಇಲಾಖೆ ಯೋಜನೆ ರೂಪಿಸಿದೆ.  

ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಹೊರರೋಗಿಗಳು ಭೇಟಿ ನೀಡುತ್ತಾರೆ. ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಸಂಖ್ಯೆ 500ರಿಂದ 600 ಇದೆ. ಅಧಿಕ ಸಂಖ್ಯೆಯಲ್ಲಿ ರಾಜ್ಯದ ವಿವಿಧೆಡೆಯಿಂದ ರೋಗಿಗಳು ಭೇಟಿ ನೀಡುತ್ತಿರುವುದರಿಂದ ಚಿಕಿತ್ಸೆಗೆ ಸರದಿಯಲ್ಲಿ ಹೆಚ್ಚಿನ ಸಮಯ ಕಾಯಬೇಕಾದ ಪರಿಸ್ಥಿತಿಯಿದೆ. ವೈದ್ಯಕೀಯ ಸಿಬ್ಬಂದಿಗೂ ನಿರ್ವಹಣೆ ಸವಾಲಾಗಿದೆ. ನೂತನ ವ್ಯವಸ್ಥೆಯಲ್ಲಿ ರೋಗಿಗಳ ಚಿಕಿತ್ಸಾ ವಿವರವನ್ನು ಡಿಜಿಟಲೀಕರಣ ಗೊಳಿಸುತ್ತಿರುವುದರಿಂದ ಈ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. 

ಖಾಸಗಿ ಕಂಪನಿ ನೆರವು: ಆಸ್ಪತ್ರೆಗಳಲ್ಲಿನ ವೈದ್ಯಕೀಯ ವ್ಯವಸ್ಥೆಯ ಡಿಜಿಟಲೀಕರಣಕ್ಕೆ ಡ್ರುಕೇರ್ ಮತ್ತು ಏಕಕೇರ್ ಕಂಪನಿಗಳ ನೆರವು ಪಡೆಯಲಾಗುತ್ತಿದೆ. ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಗಳು ಹಾಗೂ ಪರೀಕ್ಷೆಯ ವರದಿಯನ್ನು ನಿಗದಿತ ಆ್ಯಪ್‌ಗಳು, ವಾಟ್ಸ್‌ಆ್ಯಪ್ ಹಾಗೂ ದೂರವಾಣಿ ಸಂದೇಶದ ಮೂಲಕ ಕಳುಹಿಸಲಾಗುತ್ತದೆ. ಈ ವ್ಯವಸ್ಥೆ ಇಲ್ಲಿನ ಖಾಸಗಿ ಆಸ್ಪತ್ರೆಗಳಿವೆ.  

‘ವೈದ್ಯಕೀಯ ದಾಖಲೆಗಳ ಡಿಜೀಟಲೀಕರಣ ಪ್ರಕ್ರಿಯೆ ನಡೆಯುತ್ತಿದೆ. ಪೂರ್ಣಗೊಳ್ಳಲು ಎರಡು ವಾರ ಬೇಕಾಗಬಹುದು. ರೋಗಿಗಳು ‘ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ’ (ಆಭಾ) ಹೊಂದಿದ್ದಲ್ಲಿ ನೋಂದಾಯಿತ ಸಂಖ್ಯೆಯ ಮೂಲಕ ಮೊಬೈಲ್‌ಗಳ ಮೂಲಕವೇ ವರದಿ ನೋಡಬಹುದು. ದೇಶದ ಎಲ್ಲ ಕಡೆ ಚಿಕಿತ್ಸೆ ಪಡೆಯಲು ಇದು ಸಹಕಾರಿಯಾಗಲಿದೆ. ಆರೋಗ್ಯ ಸೇತು ಸೇರಿ ವಿವಿಧ ಆ್ಯಪ್‌ಗಳ ಮೂಲಕ ಈ ಸೇವೆ ಪಡೆದುಕೊಳ್ಳಬಹುದು’ ಎಂದು ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಧಾಕೃಷ್ಣ ತಿಳಿಸಿದರು.

.
.

ಡಿಜಿಟಲ್ ದಾಖಲಾತಿಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಮೂರು ಆಸ್ಪತ್ರೆಗಳಲ್ಲಿ ನೂತನ ವ್ಯವಸ್ಥೆ ಪರಿಚಯಿಸಲಾಗಿದೆ. ರೋಗಿಗಳಿಗೆ ವೈದ್ಯಕೀಯ ದಾಖಲಾತಿ ಸುಲಭವಾಗಿ ಸಿಗುತ್ತದೆ.

-ಡಿ. ರಂದೀಪ್ ಆರೋಗ್ಯ ಇಲಾಖೆ ಆಯುಕ್ತ

ಎಲ್ಲವೂ ಡಿಜಿಟಲ್ ರೂಪದಲ್ಲಿ ಲಭ್ಯ

‘ರಕ್ತ ಸೇರಿ ವಿವಿಧ ಪರೀಕ್ಷೆಗಳಿಗೆ ಮಾದರಿ ನೀಡಿದ ಬಳಿಕ ರೋಗಿಗಳು ವರದಿಗೆ ಕೆಲ ಗಂಟೆಗಳು ಆಸ್ಪತ್ರೆಯಲ್ಲಿಯೇ ಕಾಯಬೇಕಾಗಿತ್ತು. ನೂತನ ವ್ಯವಸ್ಥೆಯಿಂದ  ಆಭಾ ಸಂಖ್ಯೆಯ ಮೂಲಕ ಮೊಬೈಲ್‌ನಲ್ಲಿ ವರದಿ ಪಡೆದುಕೊಳ್ಳಬಹುದು. ವರದಿಯ ಪ್ರತಿ ಇಲ್ಲದೆಯೇ ರೋಗಿಯು ವೈದ್ಯರನ್ನು ಭೇಟಿ ಮಾಡಬಹದು. ವೈದ್ಯರು ತಮ್ಮ ಕಂಪ್ಯೂಟರ್‌ನಲ್ಲಿ ರೋಗಿಯ ವರದಿಯನ್ನು ಪರಿಶೀಲಿಸಿ ಚಿಕಿತ್ಸೆ ನೀಡುತ್ತಾರೆ. ಔಷಧಗಳ ವಿವರ ಚಿಕಿತ್ಸಾ ವರದಿ ಹೊರರೋಗಿ ಚೀಟಿ ಎಲ್ಲವೂ ಡಿಜಿಟಲ್ ರೂಪದಲ್ಲಿ ದೊರೆಯುತ್ತದೆ’ ಎಂದು ಡಾ. ರಾಧಾಕೃಷ್ಣ ತಿಳಿಸಿದರು.  ‘ಈ ವ್ಯವಸ್ಥೆಯಿಂದ ರೋಗಿಯು ಯಾವುದೇ ಆಸ್ಪತ್ರೆಗೆ ತೆರಳಿದರೂ ವೈದ್ಯಕೀಯ ಇತಿಹಾಸ ಪರಿಶೀಲಿಸಿ ಸುಲಭವಾಗಿ ಚಿಕಿತ್ಸೆ ನೀಡಬಹುದು. ರೋಗಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಹ ಈ ವ್ಯವಸ್ಥೆ ಸಹಕಾರಿ ಆಗಲಿದೆ. ಯಾವ ವಯೋಮಾನದವರಿಗೆ ಯಾವೆಲ್ಲ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವಿಶ್ಲೇಷಲು ಸಾಧ್ಯವಾಗುತ್ತದೆ. ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಬಹುದು. ಎಕ್ಸ್‌ ರೇ ಫಿಲ್ಮ್ ಸಹ ಪೋರ್ಟಲ್‌ನಲ್ಲಿ ಅಪ್ಲೋಡ್‌ ಮಾಡಿ ರೋಗಿಗಳಿಗೆ ಸುಲಭವಾಗಿ ಸಿಗುವಂತೆ ಮಾಡುವುದೂ ಈ ಯೋಜನೆಯಲ್ಲಿದೆ’ ಎಂದು ಹೇಳಿದರು.

ಸೇವೆ ಪಡೆಯುವುದು ಹೇಗೆ?

‘ಇ–ಆಸ್ಪತ್ರೆ ವ್ಯವಸ್ಥೆಯಡಿ ಈ ಮೊದಲು ರೋಗಿಗಳ ವೈದ್ಯಕೀಯ ಇತಿಹಾಸವನ್ನು ಡಿಜಿಟಲೀಕರಣ ಮಾಡಲಾಗುತ್ತಿತ್ತು. ಆ ದಾಖಲಾತಿಗಳು ವೈದ್ಯರಿಗೆ ಮಾತ್ರ ಲಭ್ಯವಾಗುತ್ತಿತ್ತು. ನೂತನ ವ್ಯವಸ್ಥೆಯಲ್ಲಿ ರೋಗಿಗಳಿಗೂ ವೈದ್ಯಕೀಯ ದಾಖಲಾತಿ ಲಭ್ಯವಾಗುತ್ತದೆ. ಪರೀಕ್ಷಾ ವರದಿ ಚಿಕಿತ್ಸಾ ದಾಖಲಾತಿಗಳನ್ನು ಪೋರ್ಟಲ್‌ಗೆ ಅಪ್ಲೋಡ್ ಮಾಡಿದ ಬಳಿಕ ಲಿಂಕ್‌ಗಳನ್ನು ವಾಟ್ಸ್‌ಆ್ಯಪ್‌ ದೂರವಾಣಿ ಸಂಖ್ಯೆಗೂ ಕಳುಹಿಸುವ ವ್ಯವಸ್ಥೆಯಿದೆ. ಈ ವ್ಯವಸ್ಥೆಗೆ ಒಳಪಡಲು ರೋಗಿಗಳು ಆಧಾರ್ ನಂಬರ್ ನೀಡಿ ಆಭಾ ಸಂಖ್ಯೆ ಸೃಷ್ಟಿಸಿಕೊಂಡರೆ ವೈದ್ಯಕೀಯ ದಾಖಲಾತಿಗಳನ್ನು ಲಿಂಕ್ ಮಾಡಲಾಗುತ್ತದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT