ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಆರಂಭದಿಂದಲೇ ಬಿಜೆಪಿಗೆ ಮುನ್ನಡೆ

ಗೊಂದಲ, ಗದ್ದಲಗಳಿಲ್ಲದೇ ಸುಸೂತ್ರವಾಗಿ ನಡೆದ ಎಣಿಕೆ ಕಾರ್ಯ
Published 4 ಜೂನ್ 2024, 16:33 IST
Last Updated 4 ಜೂನ್ 2024, 16:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಲ್ಯರಸ್ತೆಯ ಸೇಂಟ್‌ ಜೋಸೆಫ್‌ ಪಿಯು ಕಾಲೇಜಿನ ಕೊಠಡಿಗಳಲ್ಲಿ ಮಂಗಳವಾರ ಬೆಳಿಗ್ಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಿತು.

ಬೆಳಿಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಆರಂಭವಾಯಿತು. ಹಲವು ಸುತ್ತುಗಳ ಎಣಿಕೆ ನಡೆಯಿತು. ಆರಂಭದಿಂದ ಮುನ್ನಡೆ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕೊನೆಯವರೆಗೂ ಅದನ್ನು ಬಿಟ್ಟುಕೊಡದೇ 2,59,476 ಮತಗಳ ಭಾರಿ ಅಂತರದಿಂದ ಜಯದ ನಗೆ ಬೀರಿದರು. ಶೋಭಾ ಕರಂದ್ಲಾಜೆ 9,82,805 ಮತಗಳನ್ನು ಪಡೆದರೆ, ರಾಜೀವ್‌ ಗೌಡ 7,25,190 ಮತ ಗಳಿಸಿದರು. 13,554 ನೋಟಾಕ್ಕೆ ಚಲಾವಣೆಯಾಗಿದ್ದು, ನೋಟಾ ಮೂರನೇ ಸ್ಥಾನ ಪಡೆಯಿತು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆಗಾಗಿ ಕಾಲೇಜಿನ ಒಂದೊಂದು ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಜೋಡಿಸಲಾಗಿತ್ತು. ಮೊದಲು 6,263 ಅಂಚೆ ಮತಗಳ ಎಣಿಕೆ ನಡೆಯಿತು. ಯಾವುದೇ ಗೊಂದಲ, ಗದ್ದಲಗಳಿಲ್ಲದೇ 34 ಸುತ್ತುಗಳಲ್ಲಿ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಯಿತು.

ಬೆಳಿಗ್ಗೆ ಮತ ಎಣಿಕೆ ಆರಂಭವಾಗುವ ಮೊದಲೇ ಕಾಂಗ್ರೆಸ್‌ ಅಭ್ಯರ್ಥಿ ಎಂ.ವಿ. ರಾಜೀವ್‌ ಗೌಡ ಕೇಂದ್ರಕ್ಕೆ ಬಂದರು. ಬೆಳಿಗ್ಗೆ 10 ಗಂಟೆಯವರೆಗೆ ಕೇಂದ್ರದಲ್ಲಿದ್ದ ಅವರು, ಬಿಜೆಪಿಯ ಅಭ್ಯರ್ಥಿ ಪ್ರತಿ ಸುತ್ತಿನಲ್ಲಿ ಮುನ್ನಡೆ ಸಾಧಿಸುತ್ತಿರುವುದನ್ನು ಕಂಡು ಹೊರಟು ಹೋದರು. ಮಧ್ಯಾಹ್ನ 3.20ರ ಹೊತ್ತಿಗೆ ಮತ್ತೆ ಮಾಧ್ಯಮ ಕೇಂದ್ರಕ್ಕೆ ರಾಜೀವ್‌ ಗೌಡ ಆಗಮಿಸಿದರು. ‘ನಮ್ಮ ಕ್ಷೇತ್ರದ ಫಲಿತಾಂಶ ನಿರಾಸೆ ತಂದಿದೆ. ಆದರೆ, ಇಂಡಿಯಾ ಒಕ್ಕೂಟದ ಸಾಧನೆ ಚೆನ್ನಾಗಿದೆ’ ಎಂದು ಸಮಾಧಾನಪಟ್ಟರು.

ಸ್ಪಷ್ಟ ಫಲಿತಾಂಶ ಬಂದ ಬಳಿಕ ಬಿಜೆಪಿಯ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಕಾರ್ಯಕರ್ತರೊಂದಿಗೆ ಮಧ್ಯಾಹ್ನ 3.45ಕ್ಕೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಮಾಧ್ಯಮ ಕೇಂದ್ರಕ್ಕೆ ಬಂದು ಸಂಭ್ರಮ ಹಂಚಿಕೊಂಡರು.

‘ಸರಳ ಬಹುಮತಕ್ಕೆ ಬೇಕಿರುವ ಸ್ಥಾನಗಳಿಗಿಂತ ಅಧಿಕ ಸ್ಥಾನಗಳನ್ನು ಎನ್‌ಡಿಎ ಪಡೆದಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆಯಾಗಲಿದೆ‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಚುನಾವಣಾ ಅಧಿಕಾರಿಗಳ ಕೊಠಡಿಗೆ ತೆರಳಿ ಸಹಿ ಮಾಡಿ ಪ್ರಮಾಣಪತ್ರ ಸ್ವೀಕರಿಸಿದರು. ಚುನಾವಣಾಧಿಕಾರಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಪ್ರಮಾಣಪತ್ರ ವಿತರಿಸಿದರು.‌

ಮತ ಎಣಿಕೆಯ ಸುತ್ತುಗಳು ಮುಗಿದಂತೆ ಬಿಜೆಪಿ ಮುನ್ನಡೆ ಗಳಿಸುತ್ತಾ ಹೋದರೂ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಸಂಭ್ರಮ ಕಾಣಿಸಲಿಲ್ಲ. ಕೇಂದ್ರಕ್ಕೆ ಅಭ್ಯರ್ಥಿ ಬಂದ ಬಳಿಕವಷ್ಟೇ ಕಾರ್ಯಕರ್ತರು ಸಂಭ್ರಮಪಟ್ಟರು.

ಸಣ್ಣ ಪಕ್ಷಗಳು ಮತ್ತು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು ಮಾಧ್ಯಮ ಕೇಂದ್ರದಲ್ಲಿ ಕುಳಿತು ಫಲಿತಾಂಶ ವೀಕ್ಷಿಸಿದರು. ರಾಣಿ ಚೆನ್ನಮ್ಮ ಪಕ್ಷದಿಂದ ಸ್ಪರ್ಧಿಸಿದ್ದ ಪರಸಪ್ಪ ಭೀಮ‍ಪ್ಪ ಗಜ್ಜೇರಿ (313 ಮತ) ಅವರಿಗಿಂತ ಇಂಡಿಯನ್‌ ಲೇಬರ್‌ ಪಕ್ಷದ ಅಭ್ಯರ್ಥಿ ಶೋಬನ್‌ಬಾಬು (320 ಮತ) ಅವರು 7 ಮತಗಳು ಹೆಚ್ಚು ಪಡೆದಿರುವುದನ್ನು ಪರಸ್ಪರ ಕಿಚಾಯಿಸಿಕೊಂಡರು. ‘ನೀವು ಲೀಡ್‌ ಪಡೆದಿದ್ದೀರಿ ನೋಡಿ’ ಎಂದು ಪರಸಪ್ಪ ಭೀಮ‍ಪ್ಪ ಗಜ್ಜೇರಿ ಅವರು ಹೇಳಿದ್ರೆ, ‘ಎಲ್ಲ ನಿಮ್ಮ ಆಶೀರ್ವಾದ’ ಎಂದು ಶೋಬನ್‌ ಬಾಬು ಚಟಾಕಿ ಹಾರಿಸಿದರು.

ಎಣಿಕೆ ಕೇಂದ್ರದ ಸಿಬ್ಬಂದಿಗೆ, ಪೊಲೀಸರಿಗೆ, ಮಾಧ್ಯಮಗಳ ಪ್ರತಿನಿಧಿಗಳಿಗೆ ಬೆಳಿಗ್ಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT