ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ‘ಕೈ’ಗೆ ಬೈಕ್‌ ಕೊಟ್ಟವರಿಗೆ ಕೇಸ್‌

ವಾಹನ ನೀಡಿದವರಿಗೆ ‘ಬಿಸಿ’ ಮುಟ್ಟಿಸುತ್ತಿರುವ ಸಂಚಾರ ಪೊಲೀಸರು
ಆದಿತ್ಯ ಕೆ.ಎ.
Published 4 ಫೆಬ್ರುವರಿ 2024, 19:52 IST
Last Updated 4 ಫೆಬ್ರುವರಿ 2024, 19:52 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಬೈಕ್‌ ಹಾಗೂ ವಾಹನಗಳು ಸಿಗುತ್ತಿದ್ದು, ಇದರಿಂದ ಶಾಲೆ–ಕಾಲೇಜುಗಳ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.‌

ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಸಂಚಾರ ವಿಭಾಗದ ಪೊಲೀಸರು, ವಾಹನ ನೀಡಿದವರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ‘ಬಿಸಿ’ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಪೋಷಕರೇ ಮಕ್ಕಳಿಗೆ ವಾಹನಗಳನ್ನು ನೀಡುತ್ತಿದ್ದು, ಮಕ್ಕಳ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಇದು ನಗರದ ಸಂಚಾರ ವಿಭಾಗದ ಪೊಲೀಸರಿಗೂ ತಲೆನೋವು ತರಿಸಿದೆ. ಅಲ್ಲದೇ ಮಕ್ಕಳು ಬೈಕ್‌ ಓಡಿಸುವ ವೇಗವು ಭಯ ಹುಟ್ಟಿಸುತ್ತಿದೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸುತ್ತಾರೆ. ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ವಾಹನ ಚಲಾಯಿಸಿ ಸಂಚಾರ ವಿಭಾಗದ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

‘ಪೂರ್ವ ವಿಭಾಗದ ಕಬ್ಬನ್ ಪಾರ್ಕ್, ಹಲಸೂರು ಗೇಟ್, ಹೈಗ್ರೌಂಡ್ಸ್, ಅಶೋಕನಗರ, ವಿಲ್ಸನ್ ಗಾರ್ಡನ್, ಸದಾಶಿವನಗರ ಸುತ್ತಮುತ್ತಲಿನ ಸಂಚಾರ ಠಾಣೆ ವ್ಯಾಪ್ತಿಯ ಶಾಲೆ–ಕಾಲೇಜುಗಳಿಗೆ ವಿದ್ಯಾರ್ಥಿಗಳು ಬೈಕ್‌ನಲ್ಲಿ ಬರುತ್ತಿರುವುದನ್ನು ಗಮನಿಸಲಾಗಿದೆ. ಕೆಲವು ಶಾಲೆಗಳಲ್ಲಿ ಬೈಕ್‌ನಲ್ಲಿ ಬಂದರೂ ಶಾಲಾ ಆಡಳಿತ ಮಂಡಳಿ ಯಾವುದೇ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ. ಬುದ್ಧಿಮಾತನ್ನೂ ಹೇಳುತ್ತಿಲ್ಲ’ ಎಂದು ಪೊಲೀಸರು ಹೇಳುತ್ತಾರೆ.

‘ಕೆಲಸಕ್ಕೆ ತೆರಳುವ ದಂಪತಿಗಳು ಮಕ್ಕಳಿಗೆ ಬೈಕ್‌ ಹಾಗೂ ಕಾರು ನೀಡುತ್ತಿದ್ದಾರೆ. ಮಕ್ಕಳೇ ವಾಹನ ಚಲಾಯಿಸಿಕೊಂಡು ಶಾಲೆಗೆ ತೆರಳುತ್ತಿದ್ದಾರೆ. ಮಕ್ಕಳು ಹೆಲ್ಮೆಟ್‌ ಸಹ ಧರಿಸದೆ ಬೈಕ್‌ನಲ್ಲಿ ಬರುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಬೈಕ್‌ ತರುವುದಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿಲ್ಲ. ಅಂತಹ ಶಾಲೆಗಳಿಗೆ ರಸ್ತೆ ಬದಿಯ ಪಾರ್ಕಿಂಗ್‌ ಸ್ಥಳಗಳಲ್ಲಿ ಬೈಕ್‌ ನಿಲುಗಡೆ ಮಾಡಿ, ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಪೊಲೀಸರು ಹೇಳುತ್ತಾರೆ.

‘ಈ ಸಂಬಂಧ ನಮಗೆ ಸಾಕಷ್ಟು ದೂರುಗಳು ಬಂದಿದ್ದು, ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಪಿಯು ಕಾಲೇಜುಗಳ ಸುತ್ತಮುತ್ತಲೇ ಹೆಚ್ಚು ಪತ್ತೆಯಾಗುತ್ತಿವೆ. ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡುವಂತೆ ಕಾಲೇಜು ಆಡಳಿತ ಮಂಡಳಿಗೂ ಮನವಿ ಮಾಡಲಾಗಿದೆ’ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದರು.

‘ಜನವರಿ 21 ಶಾಲೆಗಳ ಬಳಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಅಂದು ಅತಿ ವೇಗ, ಸಂಚಾರ ನಿಯಮ ಉಲ್ಲಂಘಿಸಿದ್ದವರ ವಿರುದ್ಧ 510ಕ್ಕಿಂತಲೂ ಹೆಚ್ಚಿನ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಫೆ.2ರಂದು ನಡೆದ ಕಾರ್ಯಾಚರಣೆಯಲ್ಲಿ 1,896 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ ಬಾಲಕರೂ ಬೈಕ್‌ ಹಾಗೂ ವಾಹನ ಚಲಾಯಿಸುತ್ತಿರುವ ಪ್ರಕರಣಗಳು ಕೂಡ ಇವೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರಂಭಿಕವಾಗಿ ಪೋಷಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತಿದೆ. ತಪ್ಪು ಮರುಕಳಿಸಿದರೆ ಡಿಎಲ್‌ ಆರ್‌ಸಿ ರದ್ದತಿಗೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗುವುದು.

ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಡಿಸಿಪಿ ಪೂರ್ವ ವಿಭಾಗ (ಸಂಚಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT