ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ‌| ಬಿಲ್‌ ವಿಳಂಬ: ಜಂಕ್ಷನ್‌ ಅಭಿವೃದ್ಧಿ ಕುಂಠಿತ

ಬಿಬಿಎಂಪಿ: ವಿಹಾರ, ಕಾರಂಜಿಗಳ ತಾಣವಾಗಬೇಕಿದ್ದ 25 ಸ್ಥಳಗಳು ಭಣಭಣ
Published 30 ಮೇ 2024, 23:19 IST
Last Updated 30 ಮೇ 2024, 23:19 IST
ಅಕ್ಷರ ಗಾತ್ರ

ಬೆಂಗಳೂರು: ಕಳಾಹೀನಗೊಂಡಿದ್ದ ಸ್ಥಳಗಳ ಸ್ಪರೂಪ ಬದಲಿಸಿ, ನಾಗರಿಕರಿಗೆ ವಿರಮಿಸಲು ತಂಪನೆಯ ತಾಣವಾಗ ಬೇಕಿದ್ದ ನಗರದ 25 ಜಂಕ್ಷನ್‌ಗಳು ಭಣಭಣಗುಡುತ್ತಿವೆ. ಕಾಮಗಾರಿಗಳಿಗೆ ಬಿಬಿಎಂಪಿ ಬಿಲ್‌ ಪಾವತಿಸದ್ದರಿಂದ ಅಭಿವೃದ್ಧಿ ಕಾಣುತ್ತಿರುವ ಜಂಕ್ಷನ್‌ಗಳು ಮುಸುಕುಹೊದ್ದು ದೂಳು ಹಿಡಿಯುತ್ತಿವೆ.

ದೂಳು, ಕಸ, ಮುರಿದುಬಿದ್ದ ಕಲ್ಲು, ಬೇಲಿಯಿಂದ ತುಂಬಿದ್ದ 25 ಜಂಕ್ಷನ್‌ಗಳನ್ನು ₹23.80 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಬಿಬಿಎಂಪಿ ನಿರ್ಧರಿಸಿ, 2023ರ ಜನವರಿಯಲ್ಲಿ ಕಾಮಗಾರಿ ಆರಂಭಿಸಿತ್ತು. 10 ತಿಂಗಳಲ್ಲಿ ಈ ಎಲ್ಲ ಜಂಕ್ಷನ್‌ಗಳು ಅಭಿವೃದ್ಧಿ ಯಾಗಬೇಕಿತ್ತು. 2023ರ ಡಿಸೆಂಬರ್‌ನಲ್ಲೇ ಸಿದ್ಧವಾಗಬೇಕಿದ್ದ ಜಂಕ್ಷನ್‌ಗಳ ಅಭಿವೃದ್ಧಿಗೆ 2024ರ ಮಾರ್ಚ್ ಎಂಬ ಮತ್ತೊಂದು ಗಡುವು ನೀಡಲಾಗಿತ್ತು. ಆದರೆ, ಸರ್ಕಾರ ಬದಲಾದ್ದರಿಂದ ಸಕಾಲದಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಯಾಗಿಲ್ಲ. ಹೀಗಾಗಿ, ಇನ್ನೂ ಮೂರ್ನಾಲ್ಕು ತಿಂಗಳು ಈ ಜಂಕ್ಷನ್‌ಗಳ ಅಭಿವೃದ್ಧಿ ಕಾರ್ಯ ಮುಗಿಯುವುದಿಲ್ಲ. ಬಿಲ್‌ ಪಾವತಿ ಮತ್ತಷ್ಟು ವಿಳಂಬವಾದರೆ ಕಾಮಗಾರಿ ಮುಂದುವರಿಯುವ ಲಕ್ಷಣಗಳೂ ಇಲ್ಲ.

ಜಂಕ್ಷನ್‌ಗಳು ಸೌಂದರ್ಯೀಕರಣಗೊಳ್ಳುವ ಜೊತೆಗೆ ನಾಗರಿಕರು ವಿರಮಿಸಲು ಅವಕಾಶವನ್ನೂ ಕಲ್ಪಿಸಲಾಗುತ್ತಿದೆ. ಅಲ್ಲಲ್ಲಿ ಕಲ್ಲಿನ ಕುರ್ಚಿಗಳನ್ನೂ ಅಳವಡಿಸಲಾಗುತ್ತದೆ. ಗಿಡ–ಮರಗಳನ್ನು ಉಳಿಸಿಕೊಂಡು ಅಂದಗೊಳಿಸಲಾಗುತ್ತಿದೆ. 25ರಲ್ಲಿ 23 ಜಂಕ್ಷನ್‌ಗಳಲ್ಲಿ ಕಾರಂಜಿಗಳನ್ನು ಸೃಷ್ಟಿಸಲಾ ಗುತ್ತಿದೆ. ಇದು ಆಹ್ಲಾದಕರ ವಾತಾವರಣ ನೀಡುವ ಜೊತೆಗೆ ವಾಯು ಮಾಲಿನ್ಯವನ್ನು ಅಲ್ಪಮಟ್ಟಿಗೆ ತಡೆಯುತ್ತದೆ ಎಂಬ ಉದ್ದೇಶವಿದೆ. ಆದರೆ ಈ ಕಾಮಗಾರಿಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ. ಕಾಮಗಾರಿ ಹಲವು ಜಂಕ್ಷನ್‌ ಗಳಲ್ಲಿ ಬಹುತೇಕ ಸ್ಥಗಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಅವುಗಳ ವೆಚ್ಚವೂ ಹೆಚ್ಚಾಗಲಿವೆ.

ಹಡ್ಸನ್‌ ವೃತ್ತದಲ್ಲಿ ಬಿಬಿಎಂಪಿ ಕೆಂಪೇಗೌಡ ಗೋಪುರವನ್ನು ನಿರ್ಮಿಸಿದ್ದು, ಇದರ ಸುತ್ತಲಿನ ಜಂಕ್ಷನ್‌ ಅನ್ನು ವಿಶಿಷ್ಟ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ₹2 ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡುತ್ತಿದೆ. ಒಂದೂವರೆ ವರ್ಷದಿಂದಲೂ ಇಲ್ಲಿ ಕಾಮಗಾರಿ ನಡೆಯುತ್ತಲೇ ಇದೆ. ಆಗಾಗ್ಗೆ ಒಂದಷ್ಟು ದಿನ ಕಾಮಗಾರಿ ಸ್ಥಗಿತಗೊಂಡು, ಒಂದಷ್ಟು ದಿನ ನಡೆಯುತ್ತಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಮುಂದಿನ ಜಂಕ್ಷನ್‌ನಲ್ಲೂ ಕಾಮಗಾರಿ ಸ್ಥಿತಿ ಇದೇ ರೀತಿ ಇದೆ. ಇನ್ನು ಕೆ.ಆರ್‌. ವೃತ್ತ– ನೃಪತುಂಗ ರಸ್ತೆ ಜಂಕ್ಷನ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಅಂತಿಮಘಟ್ಟದಲ್ಲಿದ್ದರೂ ಅದನ್ನು ಪೂರ್ಣಗೊಳಿಸಿಲ್ಲ. ಕಾರಂಜಿಗೆ ಪ್ಲಾಸ್ಟಿಕ್‌ ಹೊದಿಕೆ ಮುಚ್ಚಲಾಗಿದೆ. ದೂಳು ಕಡಿಮೆ ಮಾಡುವ ಅಭಿವೃದ್ಧಿಗೇ ಇಲ್ಲಿ ದೂಳು ಹಿಡಿದಿದೆ. ಹೊಸದಾಗಿ ನೆಟ್ಟಿದ್ದ ಸಸಿಗಳು ಒಣಗಿವೆ.

ಸಂಕಷ್ಟ: ಕಾಮಗಾರಿ ವೇಗ ಕಡಿತಕ್ಕೆ ಕಾರಣವೇನು ಎಂದು ಗುತ್ತಿಗೆದಾರರನ್ನು ಪ್ರಶ್ನಿಸಿದಾಗ, ‘ಬಿಬಿಎಂಪಿಯಿಂದ ಬಿಲ್‌ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಹಣವಿಲ್ಲದಿದ್ದರೆ ಕೆಲಸ ಹೇಗೆ ಮಾಡುವುದು’ ಎಂದು ಮರುಪ್ರಶ್ನಿಸಿದರು. ಅಲ್ಲದೆ, ‘ಬಿಲ್‌ ಸಂದಾಯ ಮಾಡಿದಾಗ ಶೇ 75ರಷ್ಟನ್ನು ಮಾತ್ರ ಪಾವತಿ ಮಾಡುತ್ತಿರುವುದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತಿದೆ’ ಎಂದೂ ಹೇಳಿದರು.

ಎರಡು ತಿಂಗಳಲ್ಲಿ: ‘ಟೌನ್‌ಹಾಲ್‌, ಶೇಷಾದ್ರಿ ರಸ್ತೆಯ ಮೌರ್ಯ ವೃತ್ತ, ಹಡ್ಸನ್‌ ವೃತ್ತ, ಎನ್‌.ಆರ್‌.ಸ್ಕ್ವೇರ್‌, ಬ್ರಿಗೇಡ್ ರಸ್ತೆ, ಮೆಯೊ ಹಾಲ್‌,  ಕೆ.ಎಚ್.ವೃತ್ತ, ಅಶೋಕ ಪಿಲ್ಲರ್‌ ಸೇರಿದಂತೆ ಹಲವು ಜಂಕ್ಷನ್‌ಗಳ ಕಾಮಗಾರಿ ಅಂತಿಮ ಹಂತದಲ್ಲಿವೆ. ಚುನಾವಣೆ ನೀತಿಸಂಹಿತೆ ಸೇರಿದಂತೆ, ಗುತ್ತಿಗೆದಾರರಿಗೆ ಬಿಲ್‌ಪಾವತಿ ಸ್ವಲ್ಪ ವಿಳಂಬವಾಗಿದ್ದರಿಂದ ಒಂದಷ್ಟು ಕಡೆ ಕಾಮಗಾರಿ ವಿಳಂಬವಾಗಿದೆ.

ಇನ್ನೆರಡು ತಿಂಗಳಲ್ಲಿ ಎಲ್ಲ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿ ಮುಗಿಯಲಿದೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ಮಾಹಿತಿ ನೀಡಿದರು.

75 ಜಂಕ್ಷನ್‌ಗಳಿಗೆ ಅನುಮೋದನೆ ಸಿಕ್ಕಿಲ್ಲ!

ಪಾದಚಾರಿಗಳ ಸುರಕ್ಷಿತೆ,, ವಾಯುಮಾಲಿನ್ಯ ನಿಯಂತ್ರಿಸಲು 75 ಜಂಕ್ಷನ್‌ಗಳನ್ನು ಕಾರಂಜಿ ಸಹಿತ ಅಭಿವೃದ್ಧಿಪಡಿಸುವ ‘ಸುರಕ್ಷ 75 –ಮಿಷನ್ 2023’ ಯೋಜನೆಗೆ 2023ರ ಜನವರಿಯಲ್ಲಿಯೇ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು.  ಆದರೆ, ಈ ಕಾಮಗಾರಿಗಳನ್ನು ಆರಂಭಿಸಲು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಿಂದ ಇನ್ನೂ ಅನುಮತಿಯೇ ಸಿಕ್ಕಿಲ್ಲ.

₹150 ಕೋಟಿ ವೆಚ್ಚದಲ್ಲಿ 75 ಜಂಕ್ಷನ್‌ಗಳನ್ನು ಅಭಿವೃದ್ಧಿ ಪಡಿಸುವುದಾಗಿ 2023–24ರ ಬಿಬಿಎಂಪಿ ಬಜೆಟ್‌ನಲ್ಲೇ ವಿವರ ನೀಡಲಾಗಿತ್ತು. ಪೂರ್ವ ವಲಯದಲ್ಲಿ ಹೆಚ್ಚು ಅಂದರೆ 13, ಮಹದೇವಪುರ– ದಕ್ಷಿಣ ವಲಯದಲ್ಲಿ ತಲಾ 12, ಪೂರ್ವ ವಲಯದಲ್ಲಿ 11 ಜಂಕ್ಷನ್‌ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಸರ್ಕಾರದಿಂದ ಮುಂದುವರಿಯುವ ಅನುಮತಿ ದೊರೆಯದ ಕಾರಣ ಈವರೆಗೂ ‘ಯೋಜನೆ ಸಿದ್ಧಪಡಿಸುವ ಕಡತದ ಮಟ್ಟದಲ್ಲೇ’ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT