ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿನ್ನಿಪೇಟೆ ನೌಕರರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ವಿರುದ್ಧ ಎಫ್‌ಐಆರ್‌

ನಿವೇಶನ ನೀಡದೆ ಬಿನ್ನಿಪೇಟೆ ನಿವಾಸಿಗಳ ಸೇವಾ ಸಂಘದಿಂದ ವಂಚನೆ ಆರೋಪ
Last Updated 29 ಜನವರಿ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಸಂಘದ ಸದಸ್ಯರಿಗೆ ನಿವೇಶನ ನೀಡದೆ ವಂಚನೆ ಮಾಡಿದ ಆರೋಪದಲ್ಲಿ ಬಿನ್ನಿಪೇಟೆ ನೌಕರರ ಸೇವಾ ಸಂಘದ ಅಧ್ಯಕ್ಷ ದಯಾನಂದ ಸ್ವಾಮಿ ಹಾಗೂ ಕಾರ್ಯದರ್ಶಿ ಈರಣಯ್ಯ ವಿರುದ್ಧ ಕೆ.‍ಪಿ.ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದಾಗಲೇ ಈ ಸೇವಾಸಂಘಕ್ಕೆ 2 ಎಕರೆ 22 ಗುಂಟೆ ಜಮೀನು ಹಾಗೂ 117 ನಿವೇಶನಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನೋಂದಣಿ ಮಾಡಿಕೊಟ್ಟಿತ್ತು.

ಒಟ್ಟು 5 ಎಕರೆ ಜಮೀನಿನ ಮಾರುಕಟ್ಟೆ ದರ ₹200 ಕೋಟಿ ಎಂದು ಅಂದಾಜಿಸಲಾಗಿದ್ದು, ನೋಂದಣಿಯಲ್ಲಿ ಅಕ್ರಮದ ಸುಳಿವು ಸಿಕ್ಕ ಕಾರಣಕ್ಕೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಅವರು ಪ್ರಾಧಿಕಾರದ ಉಪನೋಂದಣಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದರು.

ಈ ಬಗ್ಗೆ ‘‍‍ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

ನಿವೇಶನ ಹಂಚಿಕೆ ಅಕ್ರಮದ ಬಗ್ಗೆ ಪ್ರಾಧಿಕಾರದ ನಿವೃತ್ತ ನೌಕರರು ನಾಲ್ಕನೇ ಹೆಚ್ಚುವರಿ ಸಿಎಂಎಂ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಸಂಬಂಧ ಮರಿಯಪ್ಪನಪಾಳ್ಯದ ರಾಜಮ್ಮ ಎಂಬುವರು ದೂರು ನೀಡಿದ್ದರು.

‘ನನ್ನ ಪತಿ ದಿವಂಗತ ಕೃಷ್ಣಯ್ಯ ಬಿನ್ನಿಮಿಲ್‌ನ ನೌಕರರಾಗಿದ್ದರು. ಅವರು ಕೆಲಸ ಮಾಡುವ ವೇಳೆ ಬಿನ್ನಿಪೇಟೆ ನೌಕರರ ಸೇವಾ ನಿವಾಸಿಗಳ ಸಂಘಕ್ಕೆ ರಾಜಗೋಪಾಲ್‌ ಅಧ್ಯಕ್ಷರಾಗಿದ್ದರು. ಪತಿ ಸದಸ್ಯರಾಗಿದ್ದರು. ಈ ವೇಳೆಯಲ್ಲಿ, ಸೇವಾ ಸಂಘದ ಸದಸ್ಯರಿಂದ ಹಣ ಕಟ್ಟಿಸಿಕೊಂಡು ನಿವೇಶನಗಳನ್ನು ಹಂಚಿಕೆ ಮಾಡುತ್ತಿದ್ದರು.

ಪತಿ 1998ರಲ್ಲಿ ₹4,500 ಹಾಗೂ 1991ರಲ್ಲಿ ₹5,500 ಮೊತ್ತವನ್ನು ಸಂಘಕ್ಕೆ ಕಟ್ಟಿದ್ದರು. ಸಂಘವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 750 ನಿವೇಶನಗಳ ಮುಂಗಡ ಹಣ ‍ಪಾವತಿ ಮಾಡಿತ್ತು. ಬಿಡಿಎ ವತಿಯಿಂದ ಸಂಘದ ಮೂಲಕ 80 ಜನರಿಗೆ 600 ಚದರ ಅಡಿಯ ನಿವೇಶನಗಳನ್ನು ನೀಡಲಾಗಿತ್ತು. ಆದರೆ, ನನ್ನ ಪತಿಗೆ ನಿವೇಶನ ನೀಡಿರಲಿಲ್ಲ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ರಾಜಗೋಪಾಲ್‌ ನಿಧನದ ನಂತರ ಅವರ ಪುತ್ರ ಈರಣಯ್ಯ ಕಾರ್ಯದರ್ಶಿಯಾಗಿ ಹಾಗೂ ದಯಾನಂದ ಸ್ವಾಮಿ ಅಧ್ಯಕ್ಷರಾಗಿ ನೇಮಕವಾದರು. ಈ ನಡುವೆ, ಪ್ರಾಧಿಕಾರವು 2017ರಲ್ಲಿ 5 ಎಕರೆ 2 ಗುಂಟೆ ಜಮೀನನ್ನು ಸಂಘಕ್ಕೆ ನೀಡಿದೆ. ಈ ಜಮೀನನ್ನು ಸಂಘದ ಸದಸ್ಯರಿಗೆ ಹಂಚಬೇಕಿತ್ತು.

ಆದರೆ, ಸಂಘವು 1 ಎಕರೆ 32 ಗುಂಟೆಯನ್ನು ಕಣ್ಮಣಿ ಕನ್‌ಸ್ಟ್ರಕ್ಷನ್‌ಗೆ 2018ರ ಏಪ್ರಿಲ್‌ 21ರಂದು ಹಾಗೂ 600 ಚದರ ಅಡಿ ಖಾಲಿ ನಿವೇಶನವನ್ನು ಜೆ.ಜೆ. ಆನಂದ್‌ ಅವರಿಗೆ ಮಾರಾಟ ಮಾಡಿತು. ಸಂಘವು ಖಾಸಗಿ ಬಿಲ್ಡರ್‌ಗಳಿಗೆ ಜಾಗ ಮಾರಾಟ ಮಾಡಿ ಸಂಘದ ಸದಸ್ಯರಿಗೆ ನಂಬಿಕೆ ದ್ರೋಹ ಮಾಡಿದೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT