ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಬಿಟ್ ಕಾಯಿನ್ ಲಾಭದ ಆಮಿಷ: ₹ 95.25 ಲಕ್ಷ ವಂಚನೆ

‘ಸಿಎನ್‌ಬಿಸಿ’ ಸುದ್ದಿ ವಾಹಿನಿ ನಿರೂಪಕಿ ಹೆಸರಿನಲ್ಲಿ ಗ್ರೂಪ್ - ಮೂವರ ವಿರುದ್ಧ ಎಫ್‌ಐಆರ್
Published 24 ಡಿಸೆಂಬರ್ 2023, 0:30 IST
Last Updated 24 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿದರೆ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಲಾಭ ಗಳಿಸಬಹುದೆಂದು ಆಮಿಷವೊಡ್ಡಿ ನಗರದ ಎಂಜಿನಿಯರೊಬ್ಬರಿಂದ ₹95.25 ಲಕ್ಷ ಪಡೆದು ವಂಚಿಸಲಾಗಿದೆ.

‘ಸಿಎನ್‌ಬಿಸಿ’ ಸುದ್ದಿ ವಾಹಿನಿ ನಿರೂಪಕಿ ಸೋನಿಯಾ ಶೆಣೈ ಹೆಸರಿನಲ್ಲಿ ಟೆಲಿಗ್ರಾಂ ಗ್ರೂಪ್ ಸೃಷ್ಟಿಸಿದ್ದ ಆರೋಪಿಗಳು, ನಿರೂಪಕಿ ಹೆಸರಿನಲ್ಲೇ ಎಂಜಿನಿಯರ್ ಅವರಿಂದ ಹಣ ಪಡೆದು ನಾಪತ್ತೆಯಾಗಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶಾಂತಲಾನಗರದ ನಿವಾಸಿಯಾಗಿರುವ 53 ವರ್ಷದ ಎಂಜಿನಿಯರ್, ವಂಚನೆಗೆ ಸಂಬಂಧಪಟ್ಟಂತೆ ದೂರು ನೀಡಿದ್ದಾರೆ. ಆರೋಪಿಗಳಾದ ರಿಯಾನ್, ಇಮ್ಯಾನ್ಯುಲ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಣಕಾಸು ವ್ಯವಹಾರ ಹಾಗೂ ಹೂಡಿಕೆಗೆ ಸಂಬಂಧಪಟ್ಟಂತೆ ಸಿಎನ್‌ಬಿಸಿ ವಾಹಿನಿಯಲ್ಲಿ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಕೆಲ ಕಾರ್ಯಕ್ರಮಗಳಲ್ಲಿ ಸೋನಿಯಾ ಅವರು ನಿರೂಪಣೆ ಮಾಡುತ್ತಾರೆ. ಇವರ ವಿಡಿಯೊಗಳನ್ನು ಯೂಟ್ಯೂಬ್, ಫೇಸ್‌ಬುಕ್ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹೆಚ್ಚು ವೀಕ್ಷಿಸುತ್ತಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

2022ರ ಜೂನ್‌ನಲ್ಲಿ ಮೊದಲ ಸಂದೇಶ:

‘ದೂರುದಾರ ಎಂಜಿನಿಯರ್ ಅವರ ಟೆಲಿಗ್ರಾಂಗೆ 2022ರ ಜೂನ್‌ನಲ್ಲಿ ಸಂದೇಶ ಬಂದಿತ್ತು. ‘ನಾನು ಸೋನಿಯಾ ಶೆಣೈ. ಸಿಎನ್‌ಬಿಸಿ ಸುದ್ದಿ ವಾಹಿನಿ ನಿರೂಪಕಿ. ಷೇರು ಮಾರುಕಟ್ಟೆ ಹಾಗೂ ಹೂಡಿಕೆಯಲ್ಲಿ 15 ವರ್ಷಗಳ ಅನುಭವವಿದೆ. ನೀವು ಈಗ ₹ 20 ಲಕ್ಷ ಹೂಡಿಕೆ ಮಾಡಿದರೆ, ತಿಂಗಳ ಒಳಗಾಗಿ ₹ 2 ಕೋಟಿ ಲಾಭ ಬರುತ್ತದೆ’ ಎಂದು ಸಂದೇಶದಲ್ಲಿ ಬರೆಯಲಾಗಿತ್ತು. ಅದನ್ನು ನಂಬಿದ್ದ ದೂರುದಾರ, ಹಣ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿವಿಧ ಜಾಲತಾಣಗಳ ಲಿಂಕ್ ಕಳುಹಿಸಿದ್ದ ಆರೋಪಿಗಳು, ಬಿಟ್ ಕಾಯಿನ್ ಖರೀದಿಸುವಂತೆ ಹೇಳಿ ದೂರುದಾರರಿಂದ ಹಂತ ಹಂತವಾಗಿ ₹ 95.25 ಲಕ್ಷ ವರ್ಗಾಯಿಸಿಕೊಂಡಿದ್ದರು. ಭರವಸೆ ನೀಡಿದ್ದ ಒಂದು ತಿಂಗಳ ನಂತರವೂ ಯಾವುದೇ ಹಣ ವಾಪಸು ಬಂದಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ಹಣ ನೀಡುವುದಾಗಿ ದಿನ ದೂಡಿದ್ದರು. ಇತ್ತೀಚಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೊಂದ ಎಂಜಿನಿಯರ್, ಠಾಣೆಗೆ ದೂರು ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪುರಾವೆ ಕಲೆ ಹಾಕಿ ಕ್ರಮ: ‘ಸೋನಿಯಾ ಶೆಣೈ ಅವರು ವಂಚನೆ ಮಾಡಿರುವುದಾಗಿ ದೂರುದಾರ ಎಂಜಿನಿಯರ್ ಹೇಳುತ್ತಿದ್ದಾರೆ. ಹೀಗಾಗಿ, ಆರೋಪಿಗಳ ಪಟ್ಟಿಯಲ್ಲಿ ಸೋನಿಯಾ ಹೆಸರು ಸೇರಿಸಲಾಗಿದೆ. ಆದರೆ, ಸೋನಿಯಾ ಶೆಣೈ ಹೆಸರು ಬಳಸಿಕೊಂಡು ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸೋನಿಯಾ ಹೆಸರಿನಲ್ಲಿ ದೂರುದಾರರ ಜೊತೆ ವ್ಯವಹಾರ ಮಾಡಿದ್ದು ಯಾರು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಪ್ರಕರಣದ ಬಗ್ಗೆ ಪುರಾವೆಗಳನ್ನು ಕಲೆಹಾಕಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT