ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಅನಾವಶ್ಯಕವಾಗಿ ರಾಜಕೀಯ ಮಾಡುತ್ತಿದೆ, ಇದನ್ನು ಸಹಿಸುವುದಿಲ್ಲ: ಪರಮೇಶ್ವರ

Published 4 ಜನವರಿ 2024, 7:41 IST
Last Updated 4 ಜನವರಿ 2024, 7:41 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾನೂನು ಇರಬಾರದು ಎಂದಾದರೆ ಪೊಲೀಸ್‌ ಠಾಣೆಗೆ ಬಿಜೆಪಿಯವರು ಮುತ್ತಿಗೆ ಹಾಕಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಕಾನೂನು ಪ್ರಕಾರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಅನಾವಶ್ಯಕವಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಬಿಜೆಪಿಯವರು ಏನು ಮಾಡಬೇಕೊ ಅದನ್ನು ಮಾಡಲಿ. ನಾವು ಏನು ಮಾಡಬೇಕು ಅದನ್ನು ಮಾಡುತ್ತೇವೆ’ ಎಂದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಅಮಾನತಿಗೆ ಬಿಜೆಪಿ ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಕಾರಣಕ್ಕೆ ಇನ್‌ಸ್ಪೆಕ್ಟರ್‌ ಅವರನ್ನು ಅಮಾನತು ಮಾಡಬೇಕು. ಅವರ ಪಾಡಿಗೆ ಅವರು ಕೆಲಸ ಮಾಡಿದ್ದಾರೆ. ಸರ್ಕಾರ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿಲ್ಲ. ಅವರು ಮೊದಲೆ ರಜೆ‌ ಕೇಳಿದ್ದರು. ಹೀಗಾಗಿ ರಜೆ ಮೇಲೆ ಹೋಗಿದ್ದಾರೆ’ ಎಂದರು.

‘ರಾಮಮಂದಿರ ಉದ್ಘಾಟನೆ ಸಂದರ್ಭ ಬಿಟ್ಟರೆ ಕಾನೂನು ವಿರುದ್ಧವಾಗಿ ಪೊಲೀಸರು ಕೆಲಸ ಮಾಡಿಲ್ಲ. ಬಿಜೆಪಿಯವರು ಅನಾವಶ್ಯಕವಾಗಿ ದೊಡ್ಡ ಪ್ರಮಾಣದ ರಾಜಕೀಯ ಮಾಡುತ್ತಿದ್ದಾರೆ. ಈ ರಾಜಕಾರಣವನ್ನು ನಾವು ಹೇಗೆ ಸಹಿಸಬೇಕು? ಬಿಜೆಪಿಯವರಿಗೆ ಇಷ್ಟ ಇಲ್ಲವೆಂದು ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಲು ಆಗುತ್ತದೆಯೇ? ಈ ವಿಚಾರದಲ್ಲಿ ಹೆಚ್ಚು ಬೆಳೆಸುವುದಕ್ಕೆ ಹೋದರೆ ಬಿಜೆಪಿಗೆ ಒಳ್ಳೆಯದಲ್ಲ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ’ ಎಂದರು.

ಗೋಧ್ರಾ ಮಾದರಿಯಲ್ಲಿ ಘಟನೆ ಸಂಭವಿಸಬಹುದೆಂಬ ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆ ರೀತಿ ಮಾಹಿತಿ ಬಂದರೆ ಅದನ್ನು ನಿಭಾಯಿಸಲು ಪೊಲೀಸ್‌ ಇಲಾಖೆ ಸಮರ್ಥವಾಗಿದೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡುವುದಿಲ್ಲ’ ಎಂದರು. 

‘ಹರಿಪ್ರಸಾದ್ ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಹೇಳುವಾಗ ಅವರ ಬಳಿ ಒಂದಷ್ಟು ಮಾಹಿತಿ ಇರುತ್ತದೆ. ಅವರಿಗೆ ನೋಟಿಸ್ ಕೊಡುವ ಅಗತ್ಯ ಇಲ್ಲ. ಹೇಳಿಕೆಗಳನ್ನು ಕೊಟ್ಟವರಿಗೆಲ್ಲ ನೋಟಿಸ್ ಕೊಡುತ್ತಾ ಹೋದರೆ ಎಷ್ಟು ಜನರಿಗೆ ಕೊಡುತ್ತೀರಿ?. ಯಾವ ಪಕ್ಷದವರೇ ಆಗಿರಲಿ ಸೂಕ್ಷ್ಮ ವಿಚಾರವನ್ನು  ಗ್ರಹಿಸುತ್ತೇವೆ. ನಮ್ಮ ಗುಪ್ತಚರ ವಿಭಾಗ ಇದನ್ನು ಗಮನಿಸುತ್ತದೆ’ ಎಂದರು. 

‘ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ದೆಹಲಿಗೆ ಹೋಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸಬೇಕಾದ ಅನಿವಾರ್ಯತೆ ಬಂದರೆ ಸ್ಫರ್ದಿಸುತ್ತಾರೆ. ಕಳೆದ ಬಾರಿ ಕೃಷ್ಣ ಬೈರೇಗೌಡ ಸ್ಫರ್ಧೆ ಮಾಡಿದ್ದರು. ನನಗೆ ದೆಹಲಿ ಭೇಟಿಯ ಕಾರ್ಯಸೂಚಿ ಏನೆಂದು ಗೊತ್ತಿಲ್ಲ. ಹೈಕಮಾಂಡ್ ಒಪ್ಪಿಗೆ ಪಡೆದು ನಿಗಮ, ಮಂಡಳಿ‌ ನೇಮಕ ಆಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT