ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ರದ್ದುಗೊಳಿಸದಂತೆ ಡಿಕೆಶಿ ಕಾಲಿಗೆ ಬೀಳಲು ಮುಂದಾದ ಬಿಜೆಪಿ ಶಾಸಕ ಮುನಿರತ್ನ

ಕಾಲಿಗೆ ಬೀಳಿಸಿಕೊಳ್ಳಲು ನಾನೇನು ಸ್ವಾಮೀಜಿಯೇ? – ಡಿ.ಕೆ.ಶಿವಕುಮಾರ್
Published 11 ಅಕ್ಟೋಬರ್ 2023, 13:17 IST
Last Updated 11 ಅಕ್ಟೋಬರ್ 2023, 13:17 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್‌.ಆರ್‌. ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕಾಲಿಗೆ ಬೀಳಿಸಿಕೊಳ್ಳಲು ನಾನೇನು ಮಠದ ಸ್ವಾಮೀಜಿಯೇ?’ ಎಂದು ಉಪ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್ ಹೇಳಿದರು.

ಸದಾಶಿವನಗರದ ನಿವಾಸದಲ್ಲಿ ಮುನಿರತ್ನ ತಮ್ಮನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್‌, ‘ನನ್ನ ಭೇಟಿಗೆ ಮೊದಲೇ ಅವಕಾಶ ಕೇಳಿದ್ದರೆ ಕೊಡುತ್ತಿದ್ದೆ. ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕಂಬಳ ಕರೆಪೂಜೆ (ಗುದ್ದಲಿಪೂಜೆ) ಬಳಿ ಬಂದು ಸೀನ್ ಕ್ರಿಯೇಟ್ ಮಾಡುವ ಅವಶ್ಯಕತೆ ಏನಿತ್ತು’ ಎಂದರು. 

‘ಮುನಿರತ್ನ ಅವರು ರಾಜರಾಜೇಶ್ವರಿ ಕ್ಷೇತ್ರಕ್ಕೆ ಅನುದಾನದ ವಿಚಾರವಾಗಿ ಚರ್ಚಿಸಿ, ದ್ವೇಷದ ರಾಜಕಾರಣ ಎಂದರು. ಅದಕ್ಕೆ ನಾನು, ಬಿಜೆಪಿ ಸರ್ಕಾರದ ವಧಿಯಲ್ಲಿ ಕಾಂಗ್ರೆಸ್ ಶಾಸಕರ ಅನುದಾನಕ್ಕೆ ಏಕೆ ಕತ್ತರಿ ಹಾಕಿದ್ದರು? ಹೋಗಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರನ್ನೇ ಕೇಳಿ ನೋಡಿ. ಕನಕಪುರಕ್ಕೆ ಬಂದಿದ್ದ ವೈದ್ಯಕೀಯ ಕಾಲೇಜನ್ನು ಹೇಗೆ ತೆಗೆದರೆಂದೂ ಕೇಳಿ. ಅದನ್ನು ಯಾವ ರಾಜಕಾರಣ ಎಂದು ಕರೆಯುತ್ತಾರೆ ಎಂದು ನಾನು ಮುನಿರತ್ನ ಅವರಿಗೆ ಕೇಳಿದೆ’ ಎಂದರು.

‘ಅದಕ್ಕೆ ಮುನಿರತ್ನ, ‘ನಾನು ಚಿಕ್ಕವನು, ಅದಕ್ಕೆಲ್ಲ ನನ್ನನ್ನು ಮುಂದೆ ಬಿಡಬೇಡಿ’ ಎಂದರು. ಇನ್ನೂ ಅನೇಕ ವಿಚಾರಗಳು ಚರ್ಚೆಯಾದವು. ಅದನ್ನೆಲ್ಲಾ ಮಾಧ್ಯಮಗಳಿಗೆ ಹೇಳಲು ಆಗುವುದಿಲ್ಲ. ಕಾಲಿಗೆ ಬೀಳುವುದೆಲ್ಲ ಇಟ್ಟುಕೊಳ್ಳಬೇಡಿ. ಸುಮ್ಮನೆ ಹೊರಡಿ ಎಂದವರಿಗೆ ಹೇಳಿದೆ’ ಎಂದರು.

ಕಾಮಗಾರಿಗಳ ಪಟ್ಟಿ ತಂದುಕೊಡುವುದಾಗಿ ಮುನಿರತ್ನ ಅವರು ಹೇಳಿರುವ ಬಗ್ಗೆ ಕೇಳಿದಾಗ, ‘ಯಾವ ಕಾಮಗಾರಿ, ಯಾವುದು ಆದ್ಯತೆಯ ಮೇಲೆ ನಡೆಯಬೇಕು, ಯಾವ ಕೆಲಸ ಎಂದು ಪಟ್ಟಿ ತಂದುಕೊಡಿ ಎಂದು ಹೇಳಿ ಕಳುಹಿಸಿದ್ದೇನೆ’ ಎಂದರು.

‘ಡಿ.ಕೆ. ಸಹೋದರರು ಏನು ಮಾಡಿಕೊಂಡು ಬಂದಿದ್ದಾರೋ ಅದನ್ನೇ ನಾನು ಮಾಡುತ್ತಿದ್ದೇನೆ’ ಎಂಬ ಮುನಿರತ್ನ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ನಾನು ಸಿನಿಮಾ ವಿತರಕ, ನಟ, ನಿರ್ಮಾಪಕ ಅಲ್ಲ. ಆದರೆ, ನಮ್ಮಲ್ಲಿ ಹಾಗೂ ನಮ್ಮ ಲೋಕಸಭಾ ಕ್ಷೇತ್ರದಲ್ಲಿ ಬಹಳಷ್ಟು ಜನ ನಟರು, ನಿರ್ಮಾಪಕರು, ವಿತರಕರು ಸೇರಿಕೊಂಡು ಬಿಟ್ಟಿದ್ದಾರೆ. ನಾನು ಈ ಹಿಂದೆ ಪ್ರದರ್ಶಕ ಆಗಿದ್ದೆ, ಈಗಲ್ಲ’ ಎಂದರು.

ಅರಮನೆ ಮೈದಾನದಲ್ಲಿ ಮುನಿರತ್ನ ಹೈ ಡ್ರಾಮಾ: ಅರಮನೆ ಮೈದಾನದಲ್ಲಿ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದಾಗ, ಅಲ್ಲಿಗೆ ಬಂದ ಮುನಿರತ್ನ ಮನವಿ ಸಲ್ಲಿಸಲು ಬಂದಿರುವುದಾಗಿ ಹೇಳಿ ಕೆಲಕಾಲ ಗೊಂದಲ ಮೂಡಿಸಿದರು.

ಇದನ್ನು ಗಮನಿಸಿದ ವೇದಿಕೆಯಿಂದಲೇ ಮಾತನಾಡಿದ ಶಿವಕುಮಾರ್, ‘ನಾಟಕ ಮಾಡಬೇಕು ಎಂದು ಇಲ್ಲಿಗೆ ಬಂದಿದ್ದಾರೆ. ನಾಟಕ ಮಾಡುವ, ಸಿನಿಮಾ ತೆಗೆಯುವ ನಿರ್ಮಾಪಕರಲ್ಲವೇ? ಅವರದ್ದು ಒಂದೊಂದು ಕಥೆ ಇರುತ್ತದೆ. ನಡೆ ಮುಂದೆ, ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ನಾವು ಮುನ್ನಡೆಯಬೇಕು’ ಎಂದರು.

ಕಾರ್ಯಕ್ರಮ ಮುಗಿಸಿ ಶಿವಕುಮಾರ್ ಹೊರಡುತ್ತಿದ್ದಂತೆ ಮನವಿ ಸಲ್ಲಿಸಲು ಮುನಿರತ್ನ ಬಂದರು. ಅದಕ್ಕೆ ಶಿವಕುಮಾರ್‌, ‘ಮನೆಯ ಬಳಿ ಬನ್ನಿ, ಈ ಕುರಿತು ಚರ್ಚೆ ಮಾಡೋಣ’ ಎಂದರು. ಈ ಸಂದರ್ಭದಲ್ಲಿ ಶಾಸಕ ಮುನಿರತ್ನ ಅವರು ಶಿವಕುಮಾರ್ ಅವರ ಕಾಲಿಗೆ ಬಿದ್ದು, ಮನವಿ ಪತ್ರ ನೀಡಿದರು.

ಬಳಿಕ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಧಾವಿಸಿದ ಮುನಿರತ್ನ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಬಿಎಸ್‌ವೈ ಭರವಸೆ: ಅದಕ್ಕೂ ಮೊದಲು, ತಮ್ಮ ಕ್ಷೇತ್ರಕ್ಕೆ ಅನುದಾನವನ್ನು ರದ್ದುಗೊಳಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸೌಧದ ಗಾಂಧೀಜಿ ಪ್ರತಿಮೆ ಎದುರು ಮುನಿರತ್ನ ಮೌನ ಪ್ರತಿಭಟನೆ ನಡೆಸಿದರು. ಅಲ್ಲಿಗೆ ಬಂದ ಬಿ.ಎಸ್. ಯಡಿಯೂರಪ್ಪ, ‘ನಿಮ್ಮ ಬೆಂಬಲಕ್ಕೆ ನಾನಿದ್ದೇನೆ. ಈ ಬಗ್ಗೆ ಸಿಎಂ ಮತ್ತು ಡಿಕೆಶಿ ಜೊತೆ ಮಾತನಾಡುತ್ತೇನೆ. ಧರಣಿ ಕೈಬಿಡಿ’ ಎಂದು ಭರವಸೆ ನೀಡಿದರು. ಬಳಿಕ ಮುನಿರತ್ನ ಪ್ರತಿಭಟನೆ ಕೈ ಬಿಟ್ಟು, ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಲು ಅರಮನೆ ಮೈದಾನಕ್ಕೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT