ಭಾನುವಾರ, ಮಾರ್ಚ್ 26, 2023
23 °C

ಕಪ್ಪು ಶಿಲೀಂಧ್ರ: ತಿಂಗಳಲ್ಲಿ 27 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಒಂದು ತಿಂಗಳ ಅವಧಿಯಲ್ಲಿ 119 ಮಂದಿಗೆ ಕಪ್ಪು ಶಿಲೀಂಧ್ರ ಸೋಂಕು ದೃಢಪಟ್ಟಿದ್ದು, ಸೋಂಕಿತರಲ್ಲಿ 27 ಮಂದಿ ಸಾವಿಗೀಡಾಗಿದ್ದಾರೆ.

ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 1,161ಕ್ಕೆ ಹಾಗೂ ಸಾವಿಗೀಡಾದವರ ಸಂಖ್ಯೆ 110ಕ್ಕೆ ತಲುಪಿದೆ. ಸೋಂಕಿತರಿಗೆ ವಿಕ್ಟೋರಿಯಾ, ಬೌರಿಂಗ್, ಕೆ.ಸಿ. ಜನರಲ್ ಹಾಗೂ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈವರೆಗೆ 209 ಪ್ರಕರಣಗಳು ವರದಿಯಾಗಿವೆ. ಬೌರಿಂಗ್ ಆಸ್ಪತ್ರೆಯಲ್ಲಿ 391, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನಾಲ್ಕು ಹಾಗೂ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮೂರು ಪ್ರಕರಣಗಳು ದೃಢಪಟ್ಟಿವೆ. ಕಪ್ಪು ಶಿಲೀಂಧ್ರ ಸೋಂಕಿತರಲ್ಲಿ ಈವರೆಗೆ 607 ಮಂದಿ ಸರ್ಕಾರಿ ಕೋಟಾದಡಿ ದಾಖಲಾಗಿದ್ದಾರೆ. ಇನ್ನುಳಿದವರು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಈವರೆಗೆ 3,648 ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕಿತರಲ್ಲಿ 337 ಮಂದಿ ಸಾವಿಗೀಡಾಗಿದ್ದಾರೆ.

‘ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿರುವುದರಿಂದ ತಿಂಗಳಿಂದ ಶಿಲೀಂಧ್ರ ಸೋಂಕು ಹೊಸ ಪ್ರಕರಣಗಳ ಸಂಖ್ಯೆ ಸಹ ಇಳಿಕೆ ಕಂಡಿದೆ. ಪ್ರತಿನಿತ್ಯ ಸರಾಸರಿ ಎರಡರಿಂದ ಮೂರು ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆಯಿಲ್ಲ. ಕೆಲವರು ತಡವಾಗಿ ದಾಖಲಾಗುವ ಕಾರಣ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ’ ಎಂದು ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕ ಅನ್ಸರ್ ಅಹಮದ್ ಹೇಳಿದರು.

ಶೇ 96ರಷ್ಟು ಹಾಸಿಗೆ ಖಾಲಿ

ಕೋವಿಡ್ ಚಿಕಿತ್ಸೆಗೆ ನಗರದಲ್ಲಿ ಸರ್ಕಾರಿ ಕೋಟಾದಡಿ ಗುರುತಿಸಲಾದ ಹಾಸಿಗೆಗಳಲ್ಲಿ ಶೇ 96ರಷ್ಟು ಹಾಸಿಗೆಗಳು ಖಾಲಿ ಇವೆ. ಸದ್ಯ ನಗರದಲ್ಲಿ 8,176 ಸಕ್ರಿಯ ಪ್ರಕರಣಗಳಿದ್ದು, ಬಹುತೇಕ ಸೋಂಕಿತರು ಮನೆ ಆರೈಕೆಗೆ ಒಳಗಾಗಿದ್ದಾರೆ. 254 ಮಂದಿ ಮಾತ್ರ ಸರ್ಕಾರಿ ಕೋಟಾದಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ನಗರದಲ್ಲಿ ಕೋವಿಡ್ ಚಿಕಿತ್ಸೆಗೆ ಸದ್ಯ 6,446 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅವುಗಳಲ್ಲಿ 6,191 ಹಾಸಿಗೆಗಳು ಖಾಲಿ ಉಳಿದಿವೆ. 569 ಐಸಿಯು ಹಾಸಿಗೆಗಳಲ್ಲಿ 538 ಲಭ್ಯವಿದ್ದು, 31 ಮಂದಿ ಐಸಿಯು ಹಾಸಿಗೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ, ವೆಂಟಿಲೇಟರ್ ಸಹಿತ 643 ಹಾಸಿಗೆಗಳಲ್ಲಿ 594 ಹಾಸಿಗೆಗಳು ಖಾಲಿಯಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು