ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿ ಸೋಮಶೇಖರ್‌ ಮಗನಿಗೆ ಬ್ಲ್ಯಾಕ್‌ಮೇಲ್, ₹1 ಕೋಟಿ ಬೇಡಿಕೆ, ಆರೋಪಿ ಬಂಧನ

ಕೃತ್ಯಕ್ಕೆ ಶಾಸಕರ ಪುತ್ರಿಯ ಸಿಮ್ ಕಾರ್ಡ್‌ ಬಳಕೆ
Last Updated 9 ಜನವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಎಸ್‌.ಟಿ.ಸೋಮಶೇಖರ್‌ ಅವರ ಪುತ್ರ ನಿಶಾಂತ್‌ ಅವರನ್ನು ಬೆದರಿಸಿ ₹1 ಕೋಟಿ ಮೊತ್ತಕ್ಕೆ ಬೇಡಿಕೆ ಇಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ರಾಹುಲ್‌ ಭಟ್‌ ಎಂಬುವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ರಾಹುಲ್‌, ನಗರದ ಪ್ರಮುಖ ಜ್ಯೋತಿಷಿಯೊಬ್ಬರ ಮಗ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕಯಶವಂತರಾಯಗೌಡ ಪಾಟೀಲ ಅವರ ಮಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ಅವರ ಹೆಸರಿನಲ್ಲಿರುವ ಸಿಮ್‌ ಕಾರ್ಡ್‌ನಿಂದಲೇ ಆರೋಪಿಯು ನಿಶಾಂತ್‌ಗೆ ಕರೆ ಮಾಡಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.‌

‘ನಿಮ್ಮ ಮಗನ ಅಶ್ಲೀಲ ವಿಡಿಯೊವೊಂದು ನಮ್ಮ ಬಳಿ ಇದೆ. ₹1 ಕೋಟಿಹಣ ನೀಡದಿದ್ದರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತೇವೆ’ ಎಂಬ ಸಂದೇಶವೊಂದನ್ನು ಆರೋಪಿಯು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಕಳುಹಿಸಿದ್ದರು. ಸಚಿವರ ಆಪ್ತ ಸಹಾಯಕರ ಮೊಬೈಲ್‌ ಸಂಖ್ಯೆಗೂ ಈ ಸಂದೇಶ ರವಾನಿಸಲಾಗಿತ್ತು. ಇದು ನಕಲಿ ವಿಡಿಯೊ ಎಂಬುದು ಗೊತ್ತಾದ ಕೂಡಲೇ ನಿಶಾಂತ್‌ ಅವರು ಕಚೇರಿಗೆ ಬಂದು ದೂರು ದಾಖಲಿಸಿದ್ದರು. ಅದರ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ‍ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಅಧಿಕಾರಿಗಳು ಇಂಡಿ ಶಾಸಕ ಹಾಗೂ ಅವರ ಪುತ್ರಿಯನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದಾರೆ.

‘ನನ್ನ ಮಗಳು, ಉನ್ನತ ವ್ಯಾಸಂಗಕ್ಕಾಗಿ 10 ತಿಂಗಳಿನಿಂದ ವಿದೇಶದಲ್ಲಿ ಇದ್ದಾಳೆ. ಆಕೆಗೆ ರಾಕೇಶ್‌ ಎಂಬ ಯುವಕನ ಪರಿಚಯವಿತ್ತು. ತನ್ನ ಬಾಲ್ಯ ಸ್ನೇಹಿತನಾಗಿದ್ದ ಆತನನ್ನು ನಂಬಿ ಸಿಮ್ ಕಾರ್ಡ್ ಕೊಟ್ಟಿದ್ದಳು. ಅದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಮಗಳಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕೃತ್ಯದ ಹಿಂದಿರುವವರನ್ನು ಪತ್ತೆ ಮಾಡಿ’ ಎಂದು ಯಶವಂತರಾಯಗೌಡ, ಸಿಸಿಬಿ‌ ಪೊಲೀಸರಿಗೆ ಹೇಳಿದ್ದಾರೆ.

‘ನನ್ನ ಪುತ್ರನ ಚಿತ್ರಗಳನ್ನು ಪಡೆದು ನಕಲಿ ವಿಡಿಯೊವೊಂದನ್ನು ಸೃಷ್ಟಿಸಲಾಗಿದೆ. ಹೀಗಾಗಿ ವಿಡಿಯೊ ಸಮೇತ ದೂರು ನೀಡಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಸತ್ಯ ಗೊತ್ತಾಗಲಿದೆ’ ಎಂದು ಸೋಮಶೇಖರ್‌ ಪ್ರತಿಕ್ರಿಯಿಸಿದ್ದಾರೆ.‌

‘ನಾನು ರಾಜಕೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ತಂದೆ ಹಾಗೂ ನನ್ನ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ನಕಲಿ ವಿಡಿಯೊ ಮಾಡಲಾಗಿದೆ. ಮಹಿಳೆಯೊಬ್ಬರ ಜೊತೆ ಇರುವ ವಿಡಿಯೊ ಅದಾಗಿದೆ’ ಎಂದು ನಿಶಾಂತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT