ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸುರಂಗ ನಿಲ್ದಾಣ ಕಾಮಗಾರಿ ಚುರುಕು

ಏಪ್ರಿಲ್‌ವರೆಗಿನ ಪ್ರಗತಿ ವಿವರ ಬಿಡುಗಡೆ ಮಾಡಿದ ಬಿಎಂಆರ್‌ಸಿಎಲ್‌
Last Updated 24 ಮೇ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ’ನಮ್ಮ ಮೆಟ್ರೊ‘ದ ಏಪ್ರಿಲ್‌ವರೆಗಿನ ಕಾಮಗಾರಿಯ ಪ್ರಗತಿಯ ವಿವರವನ್ನು ಸೋಮವಾರ ಬಿಡುಗಡೆ ಮಾಡಿದೆ. ಬೇರೆ ಎಲ್ಲದಕ್ಕಿಂತ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಹೆಚ್ಚು ಪ್ರಗತಿ ಕಂಡಿದೆ.

ಡೇರಿ ವೃತ್ತದಿಂದ ಸೌತ್‌ ರ‍್ಯಾಂಪ್‌ವರೆಗೆ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಅಣಿಗೊಳಿಸಲಾಗಿದೆ. ಇದು ದಕ್ಷಿಣದಿಂದ ಉತ್ತರದ ಕಡೆಗೆ ಸುಮಾರು 600 ಮೀ. ಉದ್ದದ ಸುರಂಗ ಕೊರೆಯಲಿದೆ. ಏ. 22ರಂದು ಇದು ಕಾರ್ಯಾರಂಭ ಮಾಡಿದೆ.

ಡೇರಿ ವೃತ್ತದಿಂದ ಟ್ಯಾನರಿ ರಸ್ತೆ ನಡುವಿನ 9.28 ಕಿ.ಮೀ. ಮಾರ್ಗದಲ್ಲಿ ಈಗಾಗಲೇ ಐದು ಟಿಬಿಎಂಗಳ ಸುರಂಗ ಕಾಮಗಾರಿ ವಿವಿಧ ಹಂತದಲ್ಲಿದೆ. ಕಂಟೋನ್ಮೆಂಟ್‌- ಶಿವಾಜಿನಗರ ಮಧ್ಯೆ ಸುರಂಗ ನಿರ್ಮಿಸುತ್ತಿರುವ ಟಿಬಿಎಂ ಊರ್ಜಾ 576 ರಿಂಗ್‌ಗಳ ಪೈಕಿ 286 ರಿಂಗ್‌ಗಳನ್ನು ಜೋಡಿಸಿದೆ. ಇದೇ ಮಾರ್ಗದಲ್ಲಿ ಬರುತ್ತಿರುವ ‘ವಿಂಧ್ಯ’ ಸುಮಾರು 254 ರಿಂಗ್‌ಗಳನ್ನು ಜೋಡಿಸುವಲ್ಲಿ ಯಶಸ್ವಿಯಾಗಿದೆ.

ಶಿವಾಜಿನಗರದಿಂದ ಎಂ.ಜಿ. ರಸ್ತೆ ಕಡೆಗೆ ಸಾಗುತ್ತಿರುವ ‘ಅವನಿ’ 309 ರಿಂಗ್‌ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಳಿಸಿದ್ದು, ಹಿಂದೆಯೇ ಪಯಣ ಬೆಳೆಸಿರುವ ‘ಲವಿ’ 56 ರಿಂಗ್‌ಗಳನ್ನು ಜೋಡಣೆ ಮಾಡಿದೆ.

ವೆಲ್ಲಾರ ಜಂಕ್ಷನ್‌ನಿಂದ ಲ್ಯಾಂಗ್‌ಫೋರ್ಡ್ ರಸ್ತೆ ಮಧ್ಯೆ ಮಾರ್ಚ್‌ನಿಂದ ಸುರಂಗ ಕೊರೆಯುವ ಕಾರ್ಯ ಆರಂಭಿಸಿರುವ ಆರ್‌ಟಿ01 ಟಿಬಿಎಂ 429 ರಿಂಗ್‌ಗಳ ಪೈಕಿ 55 ರಿಂಗ್‌ಗಳನ್ನು (ಶೇ. 13ರಷ್ಟು) ಜೋಡಣೆ ಮಾಡಿದೆ ಎಂದು ಬಿಎಂಆರ್‌ಸಿಎಲ್ ವಾರ್ತಾಪತ್ರದಲ್ಲಿ ತಿಳಿಸಿದೆ.

ಪೈಲಿಂಗ್‌ ಕಾಮಗಾರಿ ಜೋರು: ಸುರಂಗ ಕಾಮಗಾರಿಯೊಂದಿಗೆ ಮಾರ್ಗದುದ್ದಕ್ಕೂ ಬರುವ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಕೂಡ ಚುರುಕಿನಿಂದ ಸಾಗಿದೆ. ಇಲ್ಲಿ ಪೈಲಿಂಗ್ ಕಾರ್ಯದಲ್ಲಿ (ಸಿಮೆಂಟ್‌ ಕಂಬಗಳ ಅಳವಡಿಕೆ ಕಾಮಗಾರಿ) ಶೇ 60ರಿಂದ 70ರಷ್ಟು ಪ್ರಗತಿ ಕಂಡುಬಂದಿದೆ.

ಇನ್ನು, ಕಾರ್ಮಿಕರ ಕೊರತೆಯ ನಡುವೆಯೂ ಸಿವಿಲ್‌ ಕಾಮಗಾರಿ ಪ್ರಗತಿ ತೃಪ್ತಿಕರವಾಗಿದೆ ಎಂದು ನಿಗಮ ಹೇಳಿದೆ.

ಐದು ಆಮ್ಲಜನಕಸಾಂದ್ರಕ ಹಸ್ತಾಂತರ

ಬಿಎಂಆರ್‌ಸಿಎಲ್‌ನಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಮತ್ತು ಉದ್ಯೋಗಿಗಳಿಗಾಗಿ ಏಪ್ರಿಲ್‌ನಲ್ಲಿ ನಿಗಮವು ನೂರು ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ತೆರೆದಿದೆ. 80ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದು, 15ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.

ಇದೇ ಕೇಂದ್ರಕ್ಕೆ ಸೋಮವಾರ ಹತ್ತು ಲೀಟರ್ ಸಾಮರ್ಥ್ಯದ ಐದು ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಹಸ್ತಾಂತರಿಸಲಾಯಿತು. ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಮತ್ತಿತರ ಅಧಿಕಾರಿಗಳುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT