ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ: ಡಿಪೊಗಳಲ್ಲೇ ನಿಂತ 600 ಬಿಎಂಟಿಸಿ ಬಸ್‌

ಒ.ಟಿ ನೀಡಿದರೂ ಸರಿಯಾಗದ ಸಮಸ್ಯೆ: ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡದ ಸರ್ಕಾರ
Last Updated 6 ಅಕ್ಟೋಬರ್ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ಸಿಬ್ಬಂದಿ ಕೊರತೆ ಸಮಸ್ಯೆ ಎದುರಿಸುತ್ತಿರುವ ಬಿಎಂಟಿಸಿ, ಎಲ್ಲಾ ಮಾರ್ಗಗಳ ಕಾರ್ಯಾಚರಣೆಗೆ ಪರದಾಡುತ್ತಿದೆ. ಚಾಲನಾ ಸಿಬ್ಬಂದಿಗೆಅವಧಿ ಮೀರಿದ ಹೆಚ್ಚುವರಿ ಕರ್ತವ್ಯ(ಒ.ಟಿ) ನೀಡುತ್ತಿದ್ದರೂ ನಿತ್ಯ 600ಕ್ಕೂ ಹೆಚ್ಚು ಬಸ್‌ಗಳು ಡಿಪೊಗಳಲ್ಲೇ ನಿಲ್ಲುವಂತಾಗಿದೆ.

ಕೋವಿಡ್‌ ಬಳಿಕ ಬಸ್‌ಗಳ ಕಾರ್ಯಾಚರಣೆ ಸಂಖ್ಯೆ ಕಡಿಮೆ ಮಾಡಲಾಗಿತ್ತು. ಸಹಜ ಸ್ಥಿತಿಗೆ ಮರಳಿದ ಬಳಿಕ ಎಲ್ಲಾ ಮಾರ್ಗಗಳಲ್ಲೂ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲು ಪ್ರಯತ್ನಿಸುತ್ತಿದೆ. ಆದರೆ, ಸಿಬ್ಬಂದಿ ಕೊರತೆ ಸಮಸ್ಯೆ ದೊಡ್ಡದಾಗಿದೆ.

5,632 ಮಾರ್ಗಗಳಲ್ಲಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ನಿಗಮದಲ್ಲಿ ಸದ್ಯ 6,798 ಬಸ್‌ಗಳಿದ್ದು, 29,726 ಸಿಬ್ಬಂದಿ ಇದ್ದಾರೆ. ಐದಾರು ವರ್ಷಗಳಲ್ಲಿ 6 ಸಾವಿರಕ್ಕೂ ಅಧಿಕ ಸಿಬ್ಬಂದಿ ಕಡಿಮೆಯಾಗಿದ್ದಾರೆ. ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ಸಿಬ್ಬಂದಿಯಲ್ಲಿ 650ಕ್ಕೂ ಹೆಚ್ಚು ಮಂದಿ ಇನ್ನೂ ಕರ್ತವ್ಯದಿಂದ ಹೊರಗಿದ್ದಾರೆ. ಅಂತರ ನಿಗಮ ವರ್ಗಾವಣೆ ಕೋರಿ ಹಲವರು ಕೆಎಸ್‌ಆರ್‌ಟಿಸಿ ಮತ್ತು ಇತರ ನಿಗಮಗಳಿಗೆ ವರ್ಗಾವಣೆಯಾಗಿದ್ದಾರೆ. ಜತೆಗೆ ಪ್ರತಿ ತಿಂಗಳು ಸಿಬ್ಬಂದಿ ವಯೋನಿವೃತ್ತಿ ಆಗುತ್ತಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿ ಮೇಲೆ ಕಾರ್ಯದ ಒತ್ತಡ ಹೆಚ್ಚುತ್ತಿದೆ. ಕರ್ತವ್ಯ ಮುಗಿದ ಬಳಿಕವೂ ಅವರನ್ನು ಹೆಚ್ಚುವರಿ ಸೇವೆಗೆ ನಿಯೋಜಿಸಿಕೊಳ್ಳಲಾಗುತ್ತಿದೆ. ಆದರೂ, ಬಸ್‌ಗಳು ಡಿಪೊಗಳಲ್ಲೇ ನಿಲ್ಲುವುದು ತಪ್ಪಿಲ್ಲ.

‌2018ರ ಬಳಿಕ ಸಿಬ್ಬಂದಿ ನೇಮಕ ಪ್ರಕ್ರಿಯೆಯನ್ನೇ ಬಿಎಂಟಿಸಿ ನಡೆಸಿಲ್ಲ. ಸದ್ಯ ನಿಗಮದಲ್ಲಿರುವ ಬಸ್‌ಗಳು ಮತ್ತು ಎಲ್ಲಾ ಮಾರ್ಗಗಳಲ್ಲೂ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ಕನಿಷ್ಠ 5 ಸಾವಿರ ಸಿಬ್ಬಂದಿ ಅಗತ್ಯವಿದೆ ಎನ್ನುತ್ತಾರೆ ಬಿಎಂಟಿಸಿ ಅಧಿಕಾರಿಗಳು.

‘ಹೊಸದಾಗಿ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಅನುಮತಿ ನೀಡುತ್ತಿಲ್ಲ. ಆದ್ದರಿಂದ ಇರುವ ಸಿಬ್ಬಂದಿಯಲ್ಲೇ ಕಾರ್ಯಾಚರಣೆ ಮಾಡಬೇಕಿದೆ. ಸಿಬ್ಬಂದಿ ನೇಮಕಕ್ಕೆ ಅನುಮತಿ ಕೋರಿದ್ದೇವೆ. ಕೋವಿಡ್ ಬಳಿಕ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಅನುಮತಿ ಸಿಕ್ಕಿಲ್ಲ. ಗುತ್ತಿಗೆ ಆಧಾರದಲ್ಲಿ ಒಂದು ಸಾವಿರ ಚಾಲಕರನ್ನು ನೇಮಿಸಿಕೊಳ್ಳಲು ಅವಕಾಶ ಇದೆ. ಈ ಪ್ರಯತ್ನ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT