ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ, ಸಂಸ್ಕಾರ ಅನುವಂಶೀಯವಲ್ಲ: ಹಂಸಲೇಖ

Published 16 ಮಾರ್ಚ್ 2024, 23:58 IST
Last Updated 16 ಮಾರ್ಚ್ 2024, 23:58 IST
ಅಕ್ಷರ ಗಾತ್ರ

ಬೆಂಗಳೂರು: ‘ಜ್ಞಾನ, ಸಂಸ್ಕಾರಗಳು ಅನುವಂಶೀಯ ಬಳುವಳಿಯಲ್ಲ, ಅವು ನಮ್ಮ ಪರಿಶ್ರಮ, ನಡವಳಿಕೆಯಿಂದ ರೂಪುಗೊಳ್ಳುತ್ತವೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ನಗರದಲ್ಲಿ ಶನಿವಾರ ಮಾನವ ಬಂಧುತ್ವ ವೇದಿಕೆ - ಕರ್ನಾಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಆರ್‌. ಜಯಕುಮಾರ್‌ ಅವರ ‘ಗಾಂಧಿ ಮರೆತ ನಾಡಿನಲ್ಲಿ’ ಹಾಗೂ ‘ಕಾಡು ಹಾದಿಯ ಬೆಳಕಿನ ಜಾಡು’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಮ್ಮ ಮನೆತನದಲ್ಲೂ ಯಾರು ಸಂಗೀತ ಕಲಿತವರಿಲ್ಲ. ಹವ್ಯಾಸ, ಆಸಕ್ತಿ, ಶ್ರಮದಿಂದ ಕಲಿತೆ. ಜನರ ಪ್ರೀತಿ, ಪ್ರೋತ್ಸಾಹದಿಂದ ಇಲ್ಲಿಯವರೆಗೂ ಸಾಗಿದೆ. ನಾನೊಬ್ಬ ಶಾಪಗ್ರಸ್ತ ಗಂಧರ್ವ’ ಎಂದರು. 

‘ಕಾಡು ಹಾದಿಯ ಬೆಳಕಿನ ಜಾಡು’ ಕೃತಿ ಕುರಿತು ಮಾತನಾಡಿದ ಸಾಹಿತಿ ಪುರುಷೋತ್ತಮ ಬಿಳಿಮಲೆ, ‘ಜಯಕುಮಾರ್ ಅವರ ತಾಯಿ ಸಾಮಾಜಿಕ ಸಂಕಷ್ಟದಿಂದ ಕೇರಳದ ಪಾಲಕ್ಕಾಡ್‌ನಿಂದ ಮಡಕೇರಿವರೆಗೂ ಕಾಡಹಾದಿಯಲ್ಲಿ ನಡೆದಿದ್ದರು. ಇಂತಹ ಘಟನೆ ನಾವು ಕೋವಿಡ್ ಸಮಯದಲ್ಲಿ ನೋಡಿದೆವು. ಬಡವರು, ಶೋಷಿತರಿಗೆ ಎಲ್ಲ ಸಮಯವೂ ಕೋವಿಡ್‌ ರೀತಿಯೆ ಇರುತ್ತದೆ’ ಎಂದು ಹೇಳಿದರು.

‘ಗಾಂಧಿ ಮರೆತ ನಾಡಿನಲ್ಲಿ’ ಕುರಿತು ಮಾತನಾಡಿದ ಸಾಮಾಜಿಕ ಚಿಂತಕ ಸಿದ್ದನಗೌಡ ಪಾಟೀಲ, ಗಾಂಧಿ ಕೊಂದು ಶಾಪಗ್ರಸ್ತವಾಗಿದ್ದ ಆರ್‌ಎಸ್‌ಎಸ್, ತುರ್ತು ಪರಿಸ್ಥಿತಿಯ ಸಮಯದಲ್ಲಿ ಗಾಂಧಿ ಶಿಷ್ಯ ಜೆಪಿಯಿಂದ ಶಾಪವಿಮೋಚನೆ ಪಡೆಯಿತು. ಅಂದು ಇಂದಿರಾ ಸಾಮಾಜಿಕ ಕಾರ್ಯ ಅನುಷ್ಠಾನಕ್ಕಾಗಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಇಂದಿನ ಅಘೋಷಿತ ತುರ್ತು ಪರಿಸ್ಥಿತಿ ಕಾರ್ಪೋರೇಟ್‌ ಕಂಪನಿಗಳಿಗೆ ವರವಾಗಿದೆ’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಂ, ಪತ್ರಕರ್ತೆ ಶಾಂತಲಾ ಧರ್ಮರಾಜ್, ಚಿಂತಕಿ ಲೀಲಾ ಸಂಪಿಗೆ, ಬುಡಕಟ್ಟು ಚಳವಳಿಯ ಮುಖಂಡ ಎಸ್‌.ವೈ. ಗುರುಶಾಂತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT