ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನಿಗೆ ಬ್ಲ್ಯಾಕ್‌ಮೇಲ್: ಚಿನ್ನಾಭರಣ ದೋಚಿದ್ದವರ ಬಂಧನ

ರಾಜರಾಜೇಶ್ವರಿನಗರ ಪೊಲೀಸರಿಂದ ತನಿಖೆ * ₹ 23.50 ಲಕ್ಷ ನಗದು, 302 ಗ್ರಾಂ ಚಿನ್ನಾಭರಣ ಜಪ್ತಿ
Published 30 ಏಪ್ರಿಲ್ 2024, 20:14 IST
Last Updated 30 ಏಪ್ರಿಲ್ 2024, 20:14 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್ ಗೇಮ್ ಆಡುತ್ತಿದ್ದ ಬಾಲಕನನ್ನು ಬ್ಲ್ಯಾಕ್‌ಮೇಲ್ ಮಾಡಿ ಚಿನ್ನಾಭರಣ ದೋಚಿದ್ದ ಆರೋಪದಡಿ ಇಬ್ಬರು ಸ್ನೇಹಿತರು ಸೇರಿ ಆರು ಮಂದಿಯನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಜರಾಜೇಶ್ವರಿನಗರದ ಸಚ್ಚಿದಾನಂದನಗರದ ವೇಮನ್ (19), ಕೆಂಗೇರಿ ಸ್ಯಾಟ್‌ಲೈಟ್‌ ಟೌನ್‌ನ ಆರ್. ವಿವೇಕ್ (19), ಕೊಪ್ಪಳ ಜಿಲ್ಲೆಯ ಗಂಗಾವತಿಯ ಎಂ. ಕಾರ್ತಿಕ್ ಕುಮಾರ್ (32) ಹಾಗೂ ಸುನೀಲ್ (30) ಬಂಧಿತರು. ಆರೋಪಿಗಳಲ್ಲಿ ಇಬ್ಬರು ಬಾಲಕರಾಗಿದ್ದು, ಹೆಸರು ಬಹಿರಂಗಪಡಿಸಲಾಗದು’ ಎಂದು ಪೊಲೀಸರು ಹೇಳಿದರು.

‘ಸಂತ್ರಸ್ತ ಬಾಲಕನ ತಂದೆ ಕೃತ್ಯದ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರು ಮಂದಿಯನ್ನು ಸೆರೆ ಹಿಡಿಯಲಾಗಿದೆ. ಬಂಧಿತರಿಂದ ₹ 23.50 ಲಕ್ಷ ನಗದು ಹಾಗೂ ₹ 18 ಲಕ್ಷ ಮೌಲ್ಯದ 302 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ತಿಳಿಸಿದರು.

ಸ್ನೇಹಿತರ ಸಂಚು: ‘ದೂರುದಾರ, ರಾಜರಾಜೇಶ್ವರಿನಗರ ನಿವಾಸಿ. ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಾಲ್ವರು ಮಕ್ಕಳಿದ್ದಾರೆ. ಅದರಲ್ಲಿ ಮೂವರು ಹೆಣ್ಣು ಮಕ್ಕಳು. 16 ವರ್ಷ ವಯಸ್ಸಿನ ಒಬ್ಬನೇ ಮಗನಿದ್ದಾನೆ. ಅದೇ ಮಗನನ್ನು ಬ್ಲ್ಯಾಕ್‌ಮೇಲ್ ಮಾಡಿ ಆರೋಪಿಗಳು ಚಿನ್ನಾಭರಣ ದೋಚಿದ್ದರು’ ಎಂದು ಪೊಲೀಸರು ಹೇಳಿದರು.

‘10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ, ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದ. ಹೀಗಾಗಿ, ಆತನನ್ನು ತರಬೇತಿಗೆಂದು ಸಂಸ್ಥೆಯೊಂದಕ್ಕೆ ಸೇರಿಸಲಾಗಿತ್ತು. ಇದರ ನಡುವೆಯೇ ಬಾಲಕ, ಹೆಚ್ಚಾಗಿ ಆನ್‌ಲೈನ್ ಗೇಮ್‌ ಆಡುತ್ತಿದ್ದ. ಇದಕ್ಕಾಗಿ ತಮ್ಮ ಸ್ನೇಹಿತರ ಮೊಬೈಲ್ ಬಳಸುತ್ತಿದ್ದ. ಈ ಸಂಗತಿ ಪೋಷಕರಿಗೆ ಗೊತ್ತಿರಲಿಲ್ಲ.’

‘ಬಾಲಕನ ಮನೆಗೆ ಆಗಾಗ ಹೋಗಿ ಬರುತ್ತಿದ್ದ ಸ್ನೇಹಿತರಿಬ್ಬರು, ಚಿನ್ನಾಭರಣ ಇರುವುದನ್ನು ನೋಡಿದ್ದರು. ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದರು. ‘ಆನ್‌ಲೈನ್ ಗೇಮ್ ಆಡುವ ವಿಚಾರವನ್ನು ನಿನ್ನ ತಂದೆ–ತಾಯಿಗೆ ಹೇಳುತ್ತೇವೆ’ ಎಂಬುದಾಗಿ ಬಾಲಕನನ್ನು ಬೆದರಿಸಿದ್ದ ಸ್ನೇಹಿತರು, ತಮಗೆ ಹಣ ಹಾಗೂ ಚಿನ್ನಾಭರಣ ತಂದುಕೊಡುವಂತೆ ಬೇಡಿಕೆ ಇರಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರಂಭದಲ್ಲಿ ಬಾಲಕ, ಕೆಲ ಚಿನ್ನಾಭರಣ ತಂದುಕೊಟ್ಟಿದ್ದ. ಇದಾದ ನಂತರವೂ ಸ್ನೇಹಿತರು ಪುನಃ ಬೆದರಿಕೆಯೊಡ್ಡಿದ್ದರು. ‘ನಮಗೆ ರೌಡಿಗಳು ಪರಿಚಯ ಇದ್ದಾರೆ. ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಹೆದರಿಸಿದ್ದರು. ಅವಾಗಲೂ ಬಾಲಕ ಮತ್ತಷ್ಟು ಚಿನ್ನಾಭರಣ ತಂದುಕೊಟ್ಟಿದ್ದ’ ಎಂದು ಹೇಳಿದರು.

‘ದೂರುದಾರ ಹಾಗೂ ಅವರ ಹೆಣ್ಣುಮಕ್ಕಳು ಇತ್ತೀಚೆಗೆ ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕೆ ಹೊರಟಿದ್ದರು. ಚಿನ್ನಾಭರಣ ಧರಿಸಲೆಂದು ಕಬೋರ್ಡ್‌ ತೆರೆದು ನೋಡಿದ್ದರು. ಆದರೆ, ಕಬೋರ್ಡ್‌ನಲ್ಲಿ ಚಿನ್ನಾಭರಣ ಇರಲಿಲ್ಲ. ಮಗನನ್ನು ವಿಚಾರಿಸಿದಾಗ, ಬ್ಲ್ಯಾಕ್‌ಮೇಲ್ ವಿಷಯ ಗೊತ್ತಾಗಿತ್ತು. ಬಳಿಕವೇ ಅವರು ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ದೋಚಿದ್ದ ಆಭರಣ ಖರೀದಿ: ‘ಬಾಲಕನಿಂದ ದೋಚಿದ್ದ ಆಭರಣಗಳನ್ನು ಸ್ನೇಹಿತರು, ಪರಿಚಯಸ್ಥ ವೇಮನ್‌ಗೆ ನೀಡಿದ್ದರು. ಪ್ರಕರಣದ ಇತರೆ ಆರೋಪಿಗಳು, ವೇಮನ್‌ ಕಡೆಯಿಂದ ಆಭರಣ ಖರೀದಿಸಿದ್ದರು’ ಎಂದು ಪೊಲೀಸರು ಹೇಳಿದರು.

ವೇಮನ್
ವೇಮನ್
ಕಾರ್ತಿಕ್ ಕುಮಾರ್
ಕಾರ್ತಿಕ್ ಕುಮಾರ್
ಸುನೀಲ್‌
ಸುನೀಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT