ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇವಪುರ: ಅವ್ಯವಸ್ಥೆಯ ಆಗರ

ಬಿ.ಪ್ಯಾಕ್ ಸಂಸ್ಥೆಯಿಂದ ನಾಗರಿಕ ಸಮೀಕ್ಷಾ ವರದಿ ಪ್ರಕಟ
Last Updated 21 ಸೆಪ್ಟೆಂಬರ್ 2022, 21:01 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ ವಲಯದ ವಾರ್ಡ್‌ಗಳಲ್ಲಿ ನಾಗರಿಕ ಸೇವೆ ಮತ್ತು ಸೌಲಭ್ಯಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ರಾಜರಾಜೇಶ್ವರಿನಗರ ವಲಯ ಹೆಚ್ಚು ತೃಪ್ತಿಕರವಾಗಿದೆ ಎಂದು ಬಿ.ಪ್ಯಾಕ್‌ ನಾಗರಿಕ ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ.

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇವತಿ ಅಶೋಕ್ ಬುಧವಾರ ವರದಿ ಬಿಡುಗಡೆಗೊಳಿಸಿ ಮಾತನಾಡಿದರು. ‘ಬಿ.ಪ್ಯಾಕ್‌ ಸಂಸ್ಥೆಯು ಫೆಬ್ರುವರಿ–ಮೇ ಅವಧಿಯಲ್ಲಿ ನಾಗರಿಕ ಸೇವೆಗಳ ಆದ್ಯತೆಗಳು ಮತ್ತು ಸೇವಾ ಗುಣಮಟ್ಟದ ಬಗ್ಗೆ ನಾಗರಿಕರ ಗ್ರಹಿಕೆ ಕುರಿತು, ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳ ಪೈಕಿ 186 ವಾರ್ಡ್‌ಗಳನ್ನು 8 ವಲಯಗಳನ್ನಾಗಿ ವಿಂಗಡಿಸಿ 8,405 ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಮಹದೇವಪುರ ವಲಯ ಅವ್ಯವಸ್ಥೆಯ ಆಗರವಾಗಿದೆ ಎಂದು ಜನ ಅಸಮಾಧಾನ’ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

‘ಈ ಸಮೀಕ್ಷೆಯಲ್ಲಿ ನಾಗರಿಕ ಜಾಗೃತಿ ಮತ್ತು ಭಾಗವಹಿಸುವಿಕೆ (ಪಾಲಿಕೆ ವಾರ್ಡ್‌ ಸಂಬಂಧಿತ), ಆಡಳಿತ ಮತ್ತು ನಾಗರಿಕ ಸೌಕರ್ಯಗಳ ತೃಪ್ತಿಯ ಮಟ್ಟ ಮತ್ತು ಪಾಲಿಕೆ ಚುನಾವಣೆ ಎಂಬ ಮೂರು ವಿಭಾಗಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. 2015–20ರ ಅವಧಿಯಲ್ಲಿ ಪಾಲಿಕೆ ವಾರ್ಡ್‌ ಸದಸ್ಯರ ಬಗ್ಗೆ ಶೇ 85ರಷ್ಟು ಜನರಿಗೆ ಅರಿವಿರುವುದು ಗೊತ್ತಾಗಿದೆ. ಈ ಅವಧಿಯಲ್ಲಿ ಸದಸ್ಯರು ಮಾಡಿದ ಕೆಲಸಗಳಿಂದ 35ರಷ್ಟು ಜನ ತೃಪ್ತರಾಗಿದ್ದಾರೆ’ ಎಂದು ತಿಳಿಸಿದರು.

‘ಪಾಲಿಕೆ ಮಾಜಿ ಸದಸ್ಯರು ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದ ಉದಾಹರಣೆಗಳಿವೆ ಎಂದು ಶೇಕಡಾ 57ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡಾ 70ರಷ್ಟು ಜನ ವಾರ್ಡ್‌ ಸಮಿತಿಗಳು ಪರಿಣಾಮಕಾರಿಯಾಗಿವೆ ಎಂದರೆ, ಶೇ 47ರಷ್ಟು ಜನರು ಇದರ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ. ಶೇ 23ರಷ್ಟು ಜನ ವಾರ್ಡ್‌ ಸಮಿತಿಗಳು ಸರಿಯಾಗಿ ನಡೆಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ’ ಎಂದರು.

‘ಹಿಂದಿನ ಚುನಾವಣೆಯಲ್ಲಿ ಶೇಕಡಾ 88ರಷ್ಟು ಜನ ಮತ ಚಲಾಯಿಸಿದ್ದಾರೆ. ಶೇಕಡಾ 40ರಷ್ಟು ಜನ ಸ್ಥಳೀಯರು ಚುನಾವಣೆಯಲ್ಲಿ ಮತ ಚಲಾಯಿಸಲು ಗುರುತಿನ ಚೀಟಿ ಹೊಂದಿರಲಿಲ್ಲ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಶೇಕಡಾ 93ರಷ್ಟು ಜನ ಮತ ಚಲಾಯಿಸಯತ್ತೇವೆ’ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಹೇಳಿದರು.

ಬಿಬಿಎಂಪಿ ಆಡಳಿತ ಬಗ್ಗೆ
ಶೇ 57ರಷ್ಟು ಜನರಲ್ಲಿ ಅತೃಪ್ತಿ

ಪಾಲಿಕೆಯ ಆಡಳಿತ ಮತ್ತು ನಾಗರಿಕ ಸೌಕರ್ಯಗಳು ಸಮರ್ಪಕ
ವಾಗಿಲ್ಲ ಎಂದು ಶೇಕಡಾ 57ರಷ್ಟು ಜನ ಹೇಳಿದ್ದರೆ, ಶೇಕಡಾ 30ರಷ್ಟು ಜನ ನಗರದಲ್ಲಿರುವ ರಸ್ತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೇಕಡಾ 37ರಷ್ಟು ಜನ ಉದ್ಯಾನ ಮತ್ತು ಆಟದ ಮೈದಾನಗಳ ನಿರ್ವಹಣೆ ಕುರಿತು ತೃಪ್ತಿ ಹೊಂದಿದ್ದಾರೆ. ಶೇಕಡಾ 63ರಷ್ಟು ಮಂದಿ ಅತೃಪ್ತರಾಗಿದ್ದಾರೆ. ಕೆರೆಗಳ ಅಭಿವೃದ್ಧಿ ಮತ್ತು ಪುನರುಜ್ಜೀವಗೊಳಿಸುವ ಕೆಲಸದ ಕುರಿತು 46ರಷ್ಟು ಜನ ತೃಪ್ತರಾಗಿದ್ದಾರೆ ಎಂದು ಬಿ.ಪ್ಯಾಕ್ ಸದಸ್ಯ ಆನಂದ ಗುಂಡೂರಾವ್ ತಿಳಿಸಿದರು.

ವಾರ್ಡ್‌ಗಳಲ್ಲಿರುವ ಐದು ಪ್ರಮುಖ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ರಸ್ತೆ ನಿರ್ಮಾಣ ಮತ್ತು ನಿರ್ವಹಣೆ, ರಸ್ತೆಗಳ–ಹೊಂಡಗಳ ನಿರ್ವಹಣೆಗೆ ಆದ್ಯತೆ. ಕುಡಿಯುವ ನೀರು, ಕಸ ತೆಗೆಯುವಿಕೆ ಮತ್ತು ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ನೀರು ನಿರ್ವಹಣೆ, ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಡಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT