ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರಿಗೆ ಬೇಕು ಮಾಸ್ಟರ್‌ ಪ್ಲಾನ್‌

‘ಸಂಚಾರಯುಕ್ತ ಬೆಂಗಳೂರು’ ವಿಚಾರ ಸಂಕಿರಣದಲ್ಲಿ ಮೂಡಿಬಂದ ಅಭಿಪ್ರಾಯ
Published 9 ಆಗಸ್ಟ್ 2023, 0:37 IST
Last Updated 9 ಆಗಸ್ಟ್ 2023, 0:37 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರ್ಯಾಂಡ್‌ ಬೆಂಗಳೂರು’ ಆಗಬೇಕು ನಿಜ. ಆದರೆ, ಬೆಂಗಳೂರು ಮಹಾನಗರದಲ್ಲಿ ರಸ್ತೆ ಸಂಚಾರಕ್ಕೆ ಸಂಬಂಧಿಸಿದ ಮಹಾಯೋಜನೆ (ಮಾಸ್ಟರ್‌ ಪ್ಲಾನ್‌) ಅವಧಿ 2015ರಲ್ಲೇ ಮುಗಿದಿದೆ. ಹೀಗಾಗಿ, ಹೊಸದಾಗಿ ಮಹಾಯೋಜನೆಯನ್ನು ತುರ್ತಾಗಿ ರೂಪಿಸಬೇಕು.

ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ಸಭಾಂಗಣದಲ್ಲಿ ಮಂಗಳವಾರ ನಡೆದ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ‘ಸಂಚಾರಯುಕ್ತ ಬೆಂಗಳೂರು’ ವಿಚಾರ ಸಂಕಿರಣದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ತಜ್ಞರಿಂದ ಬಂದ ಸಲಹೆ ಇದು.

ನಗರಕ್ಕೆ ಸಮಗ್ರ ಚಲನಶೀಲ ಯೋಜನೆ ರೂಪಿಸಬೇಕು. ಉತ್ತಮ ಆಹಾರ, ಉತ್ತಮ ಶಿಕ್ಷಣ, ಉತ್ತಮ ವ್ಯವಸ್ಥೆಗಳಿರುವ ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆಯೇ ಬಹು ದೊಡ್ಡ ಸಮಸ್ಯೆ. ‘ನಮ್ಮ ಮೆಟ್ರೊ’ ಇರುವುದರಿಂದ ಸ್ವಲ್ಪ ಅನುಕೂಲವಾಗಿದ್ದರೂ ಇನ್ನಷ್ಟು ಸುಧಾರಣೆಯ ಅಗತ್ಯವಿದೆ ಎಂದು ಹಲವರು ಅಭಿಪ್ರಾಯಪಟ್ಟರು.

ಪಾದಚಾರಿ ಮಾರ್ಗಗಳ ಒತ್ತುವರಿ ತಡೆಯದೇ ಇದ್ದರೆ ಸಮಸ್ಯೆಯಾಗಲಿದೆ. ಮಹಿಳೆಯರ ಸುರಕ್ಷತೆಗೆ ಕ್ರಮಕೈಗೊಳ್ಳಬೇಕು. ಹತ್ತಿರದ ಸ್ಥಳಗಳಿಗೆ ವಾಹನಗಳಲ್ಲಿ ಓಡಾಡುವ ಬದಲು ನಡೆದುಕೊಂಡೇ ಹೋಗುವಂತೆ ಜನರಲ್ಲಿ ಅರಿವು ಮೂಡಿಸಬೇಕು. ಇದು ದೈಹಿಕ ಆರೋಗ್ಯಕ್ಕೂ ಮತ್ತು ಪರಿಸರದ ಆರೋಗ್ಯಕ್ಕೂ ಪೂರಕವಾಗಿದೆ ಎಂದು ಸಲಹೆಗಳನ್ನು ನೀಡಿದರು.

ಬೆಂಗಳೂರಿನಲ್ಲಿ 1985ರಲ್ಲಿ ಕೇವಲ 1.7 ಲಕ್ಷ ವಾಹನಗಳು ಇದ್ದವು. 2022ರ ಅಂತ್ಯಕ್ಕೆ 1.09 ಕೋಟಿಗೆ ತಲುಪಿರುವುದನ್ನು ಗಮನಿಸಿದರೆ ಬೆಂಗಳೂರಿನ ವಾಹನ ದಟ್ಟಣೆ ಅರ್ಥವಾಗುತ್ತದೆ. ಸುರಕ್ಷತೆಗೆ ಗಮನಕೊಡುವುದು, ಮಾಲಿನ್ಯ ಕಡಿಮೆ ಮಾಡುವುದು, ಅಪಘಾತಗಳಾಗದಂತೆ ಸಂಚಾರ ವ್ಯವಸ್ಥೆ ರೂಪಿಸುವುದೂ ಸೇರಿದಂತೆ ಬ್ರ್ಯಾಂಡ್‌ ಬೆಂಗಳೂರು ಮಾಡಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಸಿದ್ಧವಾಗಿದೆ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್. ಪ್ರಹ್ಲಾದ್ ತಿಳಿಸಿದರು.

ಬಿಬಿಎಂಪಿ, ನಗರ ಭೂ ಸಾರಿಗೆ ನಿರ್ದೇಶನಾಲಯ, ಸಂಚಾರ ಪೊಲೀಸ್‌, ಬಿಎಂಟಿಸಿ, ಬಿಎಂಆರ್‌ಸಿಎಲ್, ಕೆ–ರೈಡ್‌ ಅಧಿಕಾರಿಗಳು, ಐಐಎಸ್‌ಸಿ ಪ್ರೊಫೆಸರ್‌ಗಳು, ಸ್ಟಾರ್ಟಪ್‌, ವಿವಿಧ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನಾಗರಿಕರು ಭಾಗವಹಿಸಿದ್ದರು.

8412 ಸಲಹೆ:

 ಬ್ರ‍್ಯಾಂಡ್ ಬೆಂಗಳೂರು ಯೋಜನೆಯಡಿ ‘ಸಂಚಾರಯುಕ್ತ ಬೆಂಗಳೂರು’ ವಿಷಯಕ್ಕೆ ಸಂಬಂಧಿಸಿದಂತೆ ಬಂದಿರುವ 10479 ಸಲಹೆಗಳನ್ನು ಅಧ್ಯಯನ ನಡೆಸಿ ಒಂದೇ ರೀತಿಯ ಸಲಹೆಗಳನ್ನು ತೆಗೆದ ಬಳಿಕ ಒಟ್ಟಾರೆ 8412 ಸಲಹೆಗಳನ್ನು ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಿ ಅದನ್ನೆಲ್ಲ ಕ್ರೋಢೀಕರಿಸಿ ವರದಿಯನ್ನು ಸಿದ್ದಪಡಿಸಲಾಗುತ್ತದೆ. ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್  ಮ್ಯಾನೇಜ್‌ಮೆಂಟ್‌ನ ಸುಸ್ಥಿರತೆಯ ಕೇಂದ್ರ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ ಈ ವರದಿ ತಯಾರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಕೇಳಿಬಂದ ಸಲಹೆಗಳು

 • ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್‌ ಸಿಟಿಗೆ ಮೆಟ್ರೊ ವಿಸ್ತರಣೆಯಾಗಿರುವುದು ಬೆಂಗಳೂರಿನ ಅಭಿವೃದ್ಧಿಯಲ್ಲಿ ಬಹಳ ದೊಡ್ಡ ಹೆಜ್ಜೆ. ಮೆಟ್ರೊ ನಿಲ್ದಾಣಗಳಿಂದ ಫೀಡರ್‌ ಬಸ್‌ಗಳ ಸಂಪರ್ಕ ಪ್ರತಿ ಐದು ನಿಮಿಷಕ್ಕೆ ಇದ್ದಾಗ ಪ್ರಯಾಣಿಕರಿಗೆ ಉಪಯೋಗವಾಗುತ್ತದೆ. ಇಲ್ಲದಿದ್ದರೆ ಪ್ರಯಾಣಿಕರು ಬೇರೆ ವಾಹನಗಳನ್ನು ಅವಲಂಬಿಸಬೇಕಾಗುತ್ತದೆ.

 • ಮಳೆ ಸುರಿದು ಮಹಾನಗರ ಕೆಸರಿನಲ್ಲಿ ಮುಳುಗಿದ ಮೇಲೆ ಚರ್ಚಿಸುವ ಬದಲು ಮಳೆಗಾಲಕ್ಕಿಂತ ಪೂರ್ವದಲ್ಲಿಯೇ ಈ ಬಗ್ಗೆ ಚಿಂತನೆ ನಡೆಸಬೇಕು. ಎಲ್ಲಿ ನೀರು ನುಗ್ಗುತ್ತದೆ  ಎನ್ನುವುದನ್ನು ಪರಿಶೀಲಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

 • ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಮಾತ್ರವಲ್ಲ ಬಸ್‌ ತಂಗುದಾಣಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.

 • ಶಕ್ತಿ ಯೋಜನೆ ಜಾರಿಯಾದ ಮೇಲೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ. ಬೇಡಿಕೆ ಇರುವ ಪ್ರದೇಶಗಳಿಗೆ ಬಸ್‌ ಸಂಖ್ಯೆ ಹೆಚ್ಚಿಸಬೇಕು.

 • ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು ಇರುವ ಪ್ರದೇಶಗಳಲ್ಲಿ ಬಸ್‌ ನಿಲುಗಡೆ ನೀಡಬೇಕು.

 • ಸಂಚಾರ ಸಮಸ್ಯೆ ಹೆಚ್ಚು ವೆಚ್ಚ ಇರುವ ನಗರ ಎಂದು ಜನರು ಜೀವನಕ್ಕಾಗಿ ಬೇರೆ ನಗರಗಳನ್ನು ಆಯ್ಕೆ ಮಾಡುವಂತಾಗಬಾರದು. ಬೆಂಗಳೂರನ್ನೇ ವಾಸಯೋಗ್ಯ ನಗರ ಎಂದು ತಿಳಿಯಲು ಬೇಕಾದ ಕ್ರಮ ಕೈಗೊಳ್ಳಬೇಕು.

 • ಅಂಗವಿಕಲರು ವೃದ್ಧರು ಆಟೊ ಚಾಲಕರು ಹೀಗೆ ಎಲ್ಲ ವರ್ಗದ ಜನರು ಒಳಗೊಳ್ಳುವ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಬೇಕು.

 • ಪಾರ್ಕಿಂಗ್ ಪ್ರದೇಶಗಳನ್ನು ಹೆಚ್ಚು ಮಾಡಬೇಕು. ಸೈಕಲ್‌ ಮಾರ್ಗ ಎಲ್ಲೆಡೆ ನಿರ್ಮಾಣವಾಗಬೇಕು. ಮೆಟ್ರೊ ನಿಲ್ದಾಣಗಳಲ್ಲಿ ಸೈಕಲ್‌ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು. 

 • ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅನಧಿಕೃತವಾಗಿ ಪಾರ್ಕಿಂಗ್ ಮಾಡುವುದನ್ನು ತಡೆಯಬೇಕು. ಸೈನೇಜ್ ಅಳವಡಿಸಬೇಕು. ಅಗತ್ಯವಿದ್ದಲ್ಲಿ ಸುರಂಗ ರಸ್ತೆ ನಿರ್ಮಿಸಬೇಕು.

 • ಮೆಟ್ರೊ ಮಾರ್ಗವನ್ನು ಹೆಚ್ಚಿಸುವ ಜೊತೆಗೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು.

 • ನಗರದಲ್ಲಿರುವ ರಸ್ತೆ ಜಾಲ ಜಂಕ್ಷನ್‌ಗಳು ತಿರುವು ರಸ್ತೆ ರಸ್ತೆ ಹುಬ್ಬುಗಳು ಯು-ಟರ್ನ್ ರಸ್ತೆ ಮಧ್ಯಭಾಗ ವಿಭಜಕ ಅಳವಡಿಸಬೇಕು. ಸರಿಯಾಗಿ ನಿರ್ವಹಿಸಬೇಕು. ಚರಂಡಿ ಕಾಲುವೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT