ಶುಕ್ರವಾರ, ಸೆಪ್ಟೆಂಬರ್ 24, 2021
21 °C
₹ 10 ಲಕ್ಷಕ್ಕೆ ಬೇಡಿಕೆ ಇಟ್ಟು, ₹ 5 ಲಕ್ಷ ಸುಲಿಗೆ ಆರೋಪ

ಇನ್‌ಸ್ಪೆಕ್ಟರ್‌, ಪಿಎಸ್‌ಐ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಹಕರೊಬ್ಬರು ನೀಡಿದ್ದ ದೂರನ್ನೇ ಬಳಸಿಕೊಂಡು ಒಳಾಂಗಣ ವಿನ್ಯಾಸಕಾರರೊಬ್ಬರಿಂದ ₹ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹ 5 ಲಕ್ಷ ಸುಲಿಗೆ ಮಾಡಿರುವ ಆರೋಪದ ಮೇಲೆ ನಗರದ ವೈಟ್‌ ಫೀಲ್ಡ್‌ ವಿಭಾಗದ ಸೈಬರ್‌ ಅಪರಾಧ ಠಾಣೆಯ ಮಹಿಳಾ ಇನ್‌ಸ್ಪೆಕ್ಟರ್‌, ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಕಾನ್‌ಸ್ಟೆಬಲ್‌ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್‌ ದಾಖಲಿಸಿದೆ.

ಸುದೀಪ್ ವಿ.ವಿ. ಎಂಬುವವರು ನೀಡಿರುವ ದೂರನ್ನು ಆಧರಿಸಿ ವೈಟ್‌ಫೀಲ್ಡ್‌ ಸೈಬರ್‌ ಅಪರಾಧ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ನವೀನ್‌, ಇನ್‌ಸ್ಪೆಕ್ಟರ್‌ ರೇಣುಕಾ, ಸಬ್‌ ಇನ್‌ಸ್ಪೆಕ್ಟರ್‌ ಗಣೇಶ್‌ ಮತ್ತು ಕಾನ್‌ಸ್ಟೆಬಲ್‌ ಹೇಮಂತ್‌ ವಿರುದ್ಧ ಇದೇ 20ರಂದು ಎಸಿಬಿ ಬೆಂಗಳೂರು ನಗರ ಘಟಕದಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಜುಲೈ 16ರಂದು ಮನೆಯ ಬಳಿ ಬಂದ ನಾಲ್ವರು ಪೊಲೀಸರು, ಹಣ ಪಡೆದು ಒಳಾಂಗಣ ವಿನ್ಯಾಸ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಶ್ವೇತಾ ಸಿಂಗ್‌ ಎಂಬುವವರು ತಮ್ಮ ವಿರುದ್ಧ ದೂರು ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು. ಪತ್ನಿಯೊಂದಿಗೆ ತಮ್ಮನ್ನು ಬಲವಂತವಾಗಿ ಠಾಣೆಗೆ ಕರೆದೊಯ್ದಿದ್ದರು. ಬಾಕಿ ಇರುವ ಕೆಲಸ ಪೂರ್ಣಗೊಳಿಸಲು ಕಾಲಾವಕಾಶ ನೀಡುವಂತೆ ಆಗ ಮನವಿ ಮಾಡಲಾಗಿತ್ತು ಎಂದು ಸುದೀಪ್‌ ಎಸಿಬಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಶ್ವೇತಾ ಸಿಂಗ್‌ ಅವರಿಗೆ ನೀಡಬೇಕಿರುವ ₹ 5 ಲಕ್ಷ ಮತ್ತು ₹ 10 ಲಕ್ಷ ಲಂಚ ನೀಡಿದರೆ ಬಂಧಿಸುವುದಿಲ್ಲ ಎಂದು ನವೀನ್‌ ತಿಳಿಸಿದ್ದರು. ಬಳಿಕ ಸಂಬಂಧಿ ಚಂದ್ರನ್‌ ಅವರ ಬಳಿ ಮನವಿ ಮಾಡಿ ₹ 10 ಲಕ್ಷ ಹಣ ನನ್ನ ಪತ್ನಿಯ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದೆ. ಬ್ಯಾಂಕ್‌ಗೆ ಹೋಗಿ ₹ 5 ಲಕ್ಷವನ್ನು ಶ್ವೇತಾ ಸಿಂಗ್‌ ಖಾತೆಗೆ ವರ್ಗಾವಣೆ ಮಾಡಿದ್ದೆ. ₹ 5 ಲಕ್ಷ ನಗದನ್ನು ತಂದು ಪಿಎಸ್‌ಐ ನವೀನ್‌ ಅವರಿಗೆ ನೀಡಿದ್ದೆ. ಹಣ ಡ್ರಾ ಮಾಡಲು ಹೋಗಿದ್ದಾಗ ಪೊಲೀಸರು ಮಂಜು ಎಂಬಾತನನ್ನು ಜತೆಗೆ ಕಳಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಬಾಕಿ ₹ 5 ಲಕ್ಷ ತರುವಂತೆ ಪೊಲೀಸರು ಸೂಚಿಸಿದ್ದರು. ಜುಲೈ 17ರಂದು ಠಾಣೆಗ ಹೋಗಿ ಹಣ ಹೊಂದಿಸಲು ಆಗಿಲ್ಲವೆಂದು ತಿಳಿಸಿ ಬಂದಿದ್ದೆ. ಜುಲೈ 19ರಂದು ಪುನಃ ಮೊಬೈಲ್‌ಗೆ ಕರೆಮಾಡಿ ಹಣ ತರುವಂತೆ ಸೂಚಿಸಿದ್ದರು. ಠಾಣೆಗೆ ಹೋಗಿ ನವೀನ್‌ ಅವರನ್ನು ಭೇಟಿಮಾಡಿದ್ದೆ. ₹ 5 ಲಕ್ಷವನ್ನು ಮೇಡಂ ಮನೆಗೆ ಕೊಂಡೊಯ್ದರು. ನಮಗೆ ಒಂದು ರೂಪಾಯಿಯನ್ನೂ ಕೊಡಲಿಲ್ಲ. ಇವತ್ತು ₹ 2 ಲಕ್ಷ ಕೊಡು. ನಾಳೆ ₹ 2 ಲಕ್ಷ ತಂದು ಕೊಡು ಎಂದು ಸೂಚಿಸಿದ್ದರು. ಎಲ್ಲವನ್ನೂ ಆಡಿಯೊ ರೆಕಾರ್ಡ್‌ ಮಾಡಿಕೊಂಡು ಬಂದಿದ್ದೇನೆ’ ಎಂದು ತಿಳಿಸಿರುವ ಸುದೀಪ್‌, ಆಡಿಯೊ ರೆಕಾರ್ಡಿಂಗ್‌ ಅನ್ನು ಸಲ್ಲಿಸಿದ್ದಾರೆ.

ಕಾನ್‌ಸ್ಟೆಬಲ್‌ ವಿರುದ್ಧ ಎಫ್‌ಐಆರ್‌

ಬಟ್ಟೆ ವ್ಯಾಪಾರಿ ಮತ್ತು ಅವರ ಸ್ನೇಹಿತರನ್ನು ಠಾಣೆಗೆ ಕರೆತಂದು ಗಾಂಜಾ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ₹ 4 ಲಕ್ಷ ಲಂಚ ಪಡೆದು, ಇನ್ನೂ ₹ 3 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಮೇಲೆ ಕೋಣನಕುಂಟೆ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಮೊಹಮ್ಮದ್‌ ಹನೀಫ್‌ ವಿರುದ್ಧ ಎಸಿಬಿ ಬೆಂಗಳೂರು ನಗರ ಘಟಕ ಜುಲೈ 19ರಂದು ಎಫ್‌ಐಆರ್‌ ದಾಖಲಿಸಿದೆ.

‘ಜುಲೈ 7ರಂದು ನಮ್ಮ ಕೊಠಡಿಯ ಶೋಧನೆ ಮಾಡಿದ್ದ ಕಾನ್‌ಸ್ಟೆಬಲ್‌ ಮೊಹಮ್ಮದ್ ಹನೀಫ್‌, ಗೆಳೆಯರಾದ ಆದರ್ಶ್‌ ಮತ್ತು ಅನಿರುದ್ಧ್‌ ಅವರನ್ನು ಠಾಣೆಗೆ ಕರೆದೊಯ್ದಿದ್ದರು. ಕಾರನ್ನೂ ಕೊಂಡೊಯ್ದಿದ್ದರು. ಗೆಳೆಯರನ್ನು ಬಿಡುಗಡೆ ಮಾಡಲು ₹ 4 ಲಕ್ಷ ಪಡೆದಿದ್ದರು. ಕಾರು ವಾಪಸ್‌ ನೀಡಲು ₹ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ 144 ಗಾಂಜಾ ಪತ್ತೆ ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಹಾಕಿದ್ದರು. ಕೊಠಡಿಯಲ್ಲಿದ್ದ 12 ಗ್ರಾಂ. ಚಿನ್ನದ ಸರವೂ ಪೊಲೀಸರ ಭೇಟಿ ವೇಳೆ ಕಾಣೆಯಾಗಿದೆ’ ಎಂದು ಸುಧಿನ್‌ ಎಂಬುವವರು ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು