ಮಂಗಳವಾರ, ನವೆಂಬರ್ 12, 2019
27 °C

ಸಿ.ಎಂ ಯಡಿಯೂರಪ್ಪ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಯತ್ನ

Published:
Updated:

ಬೆಂಗಳೂರು: ಪರಿಹಾರ ಕೇಳಲು ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಭೇಟಿ ಸಾಧ್ಯವಾಗಲಿಲ್ಲವೆಂದು ನೊಂದು, ವ್ಯಕ್ತಿಯೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆರ್‌ಎಂವಿ 2ನೇ ಬ್ಲಾಕ್‌ನ ಪಾರ್ಕ್‌ನಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ರಂಗಧಾಮ (33) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಪ್ರಾಣಾಪಾಯದಿಂದ ಪಾರಾಗಿರುವ ರಂಗಧಾಮ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಸಂಜಯನಗರ ಪೊಲೀಸರು ತಿಳಿಸಿದರು.

ರಂಗಧಾಮ ಅವರು 2014ರಲ್ಲಿ ರಂಗಯ್ಯ ಎಂಬುವರಿಂದ ₹ 4 ಲಕ್ಷ ಸಾಲ ಪಡೆದು, ಸೆಂಟ್ರಿಂಗ್ ಶೀಟ್ ವ್ಯವಹಾರ ಮಾಡುತ್ತಿದ್ದರು. ವ್ಯವಹಾರ ದಲ್ಲಿ ₹ 7 ಲಕ್ಷ ನಷ್ಟವಾಗಿತ್ತು. ಸಾಲ ಪಡೆದಿದ್ದ ಹಣ ವಾಪಸು ಕೊಡುವಂತೆ ರಂಗಯ್ಯ ಒತ್ತಾಯಿಸುತ್ತಿದ್ದರು. ಸಾಲ ತೀರಿಸಲು ಸಾಧ್ಯವಾಗದ ಕಾರಣಕ್ಕೆ ರಂಗಧಾಮ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಸಹಾಯ ಕೇಳಲು ಬಂದಿದ್ದರು ಎನ್ನಲಾಗಿದೆ

ನ. 7ರಂದು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆ ಬಳಿಗೆ ರಂಗಧಾಮ ಹೋಗಿದ್ದರು. ಆದರೆ ಅಲ್ಲಿನ ಸಿಬ್ಬಂದಿ, ಮುಖ್ಯಮಂತ್ರಿ ಮನೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ನೊಂದು ಆರ್.ಎಂ.ವಿ ಎರಡನೇ ಬ್ಲಾಕ್‌ನ ಪಾರ್ಕ್‌ನಲ್ಲಿ ವಿಷ ಕುಡಿದಿದ್ದಾರೆ. ತಕ್ಷಣ ಸ್ಥಳೀಯರು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರು.

ಪ್ರತಿಕ್ರಿಯಿಸಿ (+)