ಸಮಯಕ್ಕೆ ಸಂಚರಿಸದ ಬಸ್‌: ‍ಪರದಾಟ

7

ಸಮಯಕ್ಕೆ ಸಂಚರಿಸದ ಬಸ್‌: ‍ಪರದಾಟ

Published:
Updated:

ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಕ್ಕೂರು ಬಡಾವಣೆಯಿಂದ ಜಿಕೆವಿಕೆ ಮಾರ್ಗವಾಗಿ ಕೆ.ಆರ್.ಮಾರುಕಟ್ಟೆಗೆ ಸಂಚರಿಸುತ್ತಿರುವ (ಮಾರ್ಗಸಂಖ್ಯೆ 286ಎ/2) ಬಸ್ ಸಮಯಕ್ಕೆ ಸರಿಯಾಗಿ ಬಾರದೆ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಜಕ್ಕೂರು ಬಡಾವಣೆಯ ಸುತ್ತಮುತ್ತ ನವ್ಯನಗರ, ತಲಕಾವೇರಿನಗರ ಹಾಗೂ ಅಮೃತಹಳ್ಳಿ 18ನೇ ಕ್ರಾಸ್ ಸೇರಿದಂತೆ ಹಲವು ಬಡಾವಣೆಗಳಿದ್ದು, ಇಲ್ಲಿ 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಪ್ರತಿನಿತ್ಯ ನೂರಾರು ಜನರು ಈ ಬಸ್‌ನಲ್ಲಿ ಪ್ರಯಾಣಿಸುತ್ತಾರೆ.

ಸಂಚಾರ ಅಸಮರ್ಪಕವಾಗಿರುವ ಬಗ್ಗೆ ಬಿಎಂಟಿಸಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಜಕ್ಕೂರು ಬಡಾವಣೆ ನಿವಾಸಿಗಳು. ಪುಟ್ಟೇನಹಳ್ಳಿ ಡಿಪೋ ಸಂಖ್ಯೆ-30ರಿಂದ ಪ್ರತಿನಿತ್ಯ 1.30ಕ್ಕೆ ಸಂಚಾರ ಆರಂಭಿಸಬೇಕಾದ ಈ ಬಸ್, ಕೆಲವೊಮ್ಮೆ ಗಂಟೆಗಟ್ಟಲೆ ತಡವಾಗಿ ಸಂಚರಿಸುವುದಿದೆ. ಬಸ್‌ ಬರದಿದ್ದಾಗ ಜಿಕೆವಿಕೆ ಕ್ರಾಸ್‌ವರೆಗೆ ನಡೆದುಕೊಂಡು ಹೋಗಿ ಬೇರೆ ಬಸ್‌ಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿಯಿದೆ.

ಜಿಕೆವಿಕೆ ಕ್ರಾಸ್ ಮಾರ್ಗವಾಗಿ ಸಾಕಷ್ಟು ಬಸ್‌ಗಳು ನಗರಕ್ಕೆ ಸಂಚರಿಸುವುದರಿಂದ ಈ ಮಾರ್ಗದಲ್ಲಿ 286ಎ/2 ಸಂಖ್ಯೆಯ ಬಸ್ ಸಂಚರಿಸಿದರೆ ಪ್ರಯೋಜನವಿಲ್ಲ. ಇದಕ್ಕೆ ಬದಲಾಗಿ ಅಮೃತಹಳ್ಳಿ, ಬ್ಯಾಟರಾಯನಪುರ ಮೂಲಕ ಕೆ.ಆರ್.ಮಾರುಕಟ್ಟೆ ಹಾಗೂ ಕೆಂಪೇಗೌಡ ನಿಲ್ದಾಣದಿಂದ ತಲಾ ನಾಲ್ಕು ಸುತ್ತುಗಳಲ್ಲಿ ಸಂಚರಿಸಿದರೆ ಈ ಪ್ರದೇಶಗಳಿಂದ ನಗರದ ವಿವಿಧ ಪ್ರದೇಶಗಳಿಗೆ ತೆರಳುವ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ಸಂಸ್ಥೆಗೂ ಲಾಭವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬಗ್ಗೆ ಡಿಪೋ ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ, ಚಾಲಕ-ನಿರ್ವಾಹಕರ ಸಮಸ್ಯೆಯಿದೆ ಎಂದು ಹೇಳುತ್ತಾರೆ.

ನೆಲಮಂಗಲದಿಂದ ಜಕ್ಕೂರು ಬಡಾವಣೆಗೆ ಮಾರ್ಗಸಂಖ್ಯೆ-500ಜೆ ಬಸ್, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಮಾತ್ರ ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಜನಸಂಚಾರದ ಒತ್ತಡವಿರುವುದರಿಂದ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ವ್ಯಾಪಾರಸ್ಥರ ಹಿತದೃಷ್ಟಿಯಿಂದ ಇನ್ನೂ ಹೆಚ್ಚುವರಿ ಮೂರು ಸುತ್ತು ಸಂಚರಿಸಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ಮನವಿ ಮಾಡಿದರು.

*
ಸಂಚಾರ ಮಾರ್ಗ ಬದಲಾಯಿಸಿದರೆ ಪ್ರಯಾಣಿಕರ ಸಂಖ್ಯೆ ಮತ್ತು ಸಂಸ್ಥೆಗೆ ಬರಬಹುದಾದ ಆದಾಯದ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಚಂದ್ರಶೇಖರ್.ಎಂ.ಎಸ್, ಮುಖ್ಯ ಸಂಚಾರ ವ್ಯವಸ್ಥಾಪಕ ಬಿಎಂಟಿಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !