ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಾಲ್ಕು ಸಾವಿರ ಏರಿಯೇಟರ್ ಅಳವಡಿಕೆ

ಸರ್ಕಾರಿ ಕಚೇರಿ, ಪ್ರಮುಖ ಸಂಸ್ಥೆಗಳಲ್ಲಿ ಜಲಮಂಡಳಿ ವತಿಯಿಂದಲೇ ಕಾರ್ಯ
Published 4 ಏಪ್ರಿಲ್ 2024, 16:32 IST
Last Updated 4 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ಜಲಮಂಡಳಿ ವತಿಯಿಂದ ಇಸ್ರೊ, ಬಿಬಿಎಂಪಿ, ಲೋಕಾಯುಕ್ತ ಕಚೇರಿ ಸೇರಿದಂತೆ ಹಲವು ಕಚೇರಿಗಳಲ್ಲಿರುವ ನಲ್ಲಿಗಳಿಗೆ ನಾಲ್ಕು ಸಾವಿರ ಏರಿಯೇಟರ್‌ಗಳನ್ನು ಅಳವಡಿಸಲಾಗಿದೆ.

ಮಾಲ್‌, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌, ಸರ್ಕಾರಿ ಕಟ್ಟಡ, ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಸ್ವಚ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಫ್ಲೋ ರಿಸ್ಟ್ರಿಕ್ಟರ್‌/ ಏರಿಯೇಟರ್‌ ಅಳವಡಿಸುವುದನ್ನು ಜಲಮಂಡಳಿ ಕಡ್ಡಾಯಗೊಳಿಸಿದೆ. 

ಸರ್ಕಾರಿ ಕಚೇರಿಗಳಲ್ಲಿ ಏರಿಯೇಟರ್‌ಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಪ್ರೇರಣೆಯಾಗಬೇಕು ಎನ್ನುವ ದೃಷ್ಟಿಯಿಂದ ಮೊದಲ ಹಂತದಲ್ಲಿ ಬೆಂಗಳೂರು ಜಲಮಂಡಳಿಯ ತನ್ನ ಎಲ್ಲ ಕಚೇರಿಗಳಲ್ಲಿ ಏ‌ರಿಯೇಟರ್‌ ಅಳವಡಿಸಲಾಗಿತ್ತು. ಈಗ ಎರಡನೇ ಹಂತದಲ್ಲಿ ಬಿಡಿಎ, ಬಿಎಸ್‌ಎನ್‌ಎಲ್‌, ಇಂದಿರಾ ಕ್ಯಾಂಟೀನ್‌, ಆದಾಯ ತೆರಿಗೆ ಇಲಾಖೆ, ಬಿಬಿಎಂಪಿ ಶಾಲೆಗಳು, ಇಸ್ರೊ, ಬೆಗ್ಗರ್ಸ್‌ ಕಾಲೊನಿ, ಎಚ್‌ಎಎಲ್‌, ಬೆಮೆಲ್‌, ರೇಷ್ಮೆ ಮಂಡಳಿ, ಕೇಂದ್ರೀಯ ಸದನ, ಡಿಫೆನ್ಸ್‌, ವಿವಿ ಟವರ್‌, ಐಎಎಸ್‌ ಅಧಿಕಾರಿಗಳ ಅಸೋಸಿಯೇಷನ್‌, ಆರ್‌ಟಿಒ, ಜಿಲ್ಲಾಧಿಕಾರಿ ಕಚೇರಿ, ಜಯದೇವ ಆಸ್ಪತ್ರೆ, ಐಟಿಐ ಇನ್‌ಸ್ಟಿಟ್ಯೂಟ್‌, ಲೋಕಾಯುಕ್ತರ ನಿವಾಸ, ಕೆಪಿಟಿಸಿಎಲ್‌, ಕೆಎಂಎಫ್‌, ಬೆಸ್ಕಾಂ ಕಚೇರಿಗಳಲ್ಲಿ ಜಲಮಂಡಳಿಯಿಂದಲೇ ನಾಲ್ಕು ಸಾವಿರ ಏರಿಯೇಟರ್‌ ಅಳವಡಿಸಲಾಗಿದೆ.

ಸಭೆ: ಸಂಸ್ಕರಿಸಿದ ನೀರು ವಿಪುಲವಾಗಿದ್ದು ಅದರ ಮಾರುಕಟ್ಟೆಯನ್ನು ಹೆಚ್ಚಿಸಲು ಜಲಮಂಡಳಿಯ ವತಿಯಿಂದ ಸಣ್ಣ ಕೈಗಾರಿಕೆಗಳು, ಎಫ್‌ಕೆಸಿಸಿಐ ಮತ್ತು ಕಾಸಿಯಾ ಜೊತೆ ಸಭೆಯನ್ನು ಆಯೋಜಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

20 ಲಕ್ಷದಿಂದ 40 ಲಕ್ಷ ಲೀಟರ್‌ ನೀರು ಬಳಕೆದಾರರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

‘ಬೆಂಗಳೂರು ನಗರದಲ್ಲಿ ಮಾರ್ಚ್‌ನಲ್ಲಿ ಇದ್ದಂತಹ ನೀರಿನ ಅಭಾವ ಈಗ ಇಲ್ಲ. ನೀರಿನ ಸಮರ್ಪಕ ಬಳಕೆ ಹಾಗೂ ಉಳಿತಾಯಕ್ಕೆ ಒತ್ತು ನೀಡಲಾಗುತ್ತಿದೆ. ನಗರದಲ್ಲಿ ಅಗತ್ಯವಿರುವ ಕಡೆಗಳಲ್ಲಿ 1200ಕ್ಕೂ ಹೆಚ್ಚು ಸಿಂಟೆಕ್ಸ್‌ ಟ್ಯಾಂಕ್‌ಗಳನ್ನು ಅಳವಡಿಸಿದ್ದು, ಪ್ರತಿ ದಿನ ಸುಮಾರು 50 ಲಕ್ಷ ಲೀಟರ್‌ನಿಂದ 1 ಕೋಟಿ ಲೀಟರ್‌ವರೆಗೆ ಕುಡಿಯುವ ನೀರನ್ನು ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ. 20 ಲಕ್ಷದಿಂದ 40 ಲಕ್ಷ ಲೀಟರ್‌ ನೀರು ಬಳಕೆ ಮಾಡುವ ಸುಮಾರು 18 ಸಾವಿರ ಗ್ರಾಹಕರು ನಗರದಲ್ಲಿದ್ದಾರೆ. ಇವರು ಪ್ರತಿದಿನ ಸುಮಾರು 200 ಎಂಎಲ್‌ಡಿ ನೀರು ಬಳಸುತ್ತಿದ್ದಾರೆ. ಇವರೆಲ್ಲ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ನೀರಿನ ಉಳಿತಾಯ ಸಾಧ್ಯವಿದೆ ಎಂದರು.

ಸಂಸ್ಕರಿಸಿದ ನೀರಿನ ಬಳಕೆ ಕಡಿಮೆಯಿದೆ. ಆದರೆ ಮುಂದಿನ ದಿನಗಳಲ್ಲಿ ಜನರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಣ್ಣ ಕೈಗಾರಿಕೆಗಳು ಸೇರಿದಂತೆ ಪ್ರಮುಖ ಸಂಸ್ಥೆಗಳು  ಇದೇ ನೀರಿನ ಬಳಕೆ ಮಾಡಬೇಕು ಎಂದು ಹೇಳಿದರು.

ರಾಮ್‌ಪ್ರಸಾತ್ ಮನೋಹರ್‌
ರಾಮ್‌ಪ್ರಸಾತ್ ಮನೋಹರ್‌

ಜನರಿಗೆ ಕಾವೇರಿ ಮೇಲೆ ಪ್ರೀತಿ ಇಲ್ಲ: ರಾಮ್‌ಪ್ರಸಾತ್‌ ಮನೋಹರ್‌ ‘ಒಂದು ಲೀಟರ್‌ ಬಾಟಲ್‌ ನೀರಿಗೆ ನೀಡುವ ಹಣದಲ್ಲಿ ಜಲಮಂಡಳಿ ಕಾವೇರಿಯಿಂದ ಒಂದು ಸಾವಿರ ಲೀಟರ್‌ ನೀರನ್ನು ನಗರದ ಜನರ ಮನೆಗಳಿಗೆ ಪೂರೈಕೆ ಮಾಡುತ್ತಿದೆ. ಕಡಿಮೆ ದರದಲ್ಲಿ ದೊರೆಯುವ ವಸ್ತುಗಳ ಮೇಲೆ ಯಾವಾಗಲೂ ಜನರಿಗೆ ಹೆಚ್ಚು ಪ್ರೀತಿ ಇರುವುದಿಲ್ಲ. ಇದು ಕಾವೇರಿ ನೀರಿನ ವಿಷಯದಲ್ಲೂ ಸ್ಪಷ್ಟವಾಗಿ ಗೋಚರವಾಗುತ್ತದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

‘ಒಂದು ಲೀಟರ್‌ ನೀರನ್ನು ಜೋಪಾನ ಮಾಡುವ ಜನರು ಕೆಲವೆಡೆಗಳಲ್ಲಿ ಅಮೂಲ್ಯವಾದ ಕಾವೇರಿ ನೀರನ್ನು ಅನಗತ್ಯವಾಗಿ ಪೋಲು ಮಾಡುತ್ತಿದ್ದಾರೆ. ಇದನ್ನ ತಡೆಗಟ್ಟುವಲ್ಲಿ ಬಳಕೆದಾರರಲ್ಲಿ ಜಾಗೃತಿ ಮೂಡಿಸಬೇಕಾಗಿರುವುದು ಬಹಳ ಅಗತ್ಯವಾಗಿದೆ’ ಎಂದರು.

ಶೇ 10ರಷ್ಟು ಕಡಿತ: ಜಲಮಂಡಳಿಯಿಂದ ಪ್ರತಿ ತಿಂಗಳು‌ 20 ಲಕ್ಷದಿಂದ 40 ಲಕ್ಷ ಲೀಟರ್‌ಗಳಷ್ಟು ಬಳಕೆ ಮಾಡುವ ಬಲ್ಕ್‌ ಬಳಕೆದಾರರಿಗೆ ಏಪ್ರಿಲ್‌ 14ರಿಂದ ಶೇ 10 ರಷ್ಟು ನೀರನ್ನು ಕಡಿತಗೊಳಿಸಲಾಗುವುದು. ಈ ಕಡಿತಗೊಳಿಸಿದ ನೀರನ್ನು ಅಗತ್ಯವಿರುವ ಪ್ರದೇಶಗಳಿಗೆ ಸರಬರಾಜು ಮಾಡಲಾಗುವುದು ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT